ಸಿದ್ದಾಪುರ NEWS DESK ಆ.10 : ತಿತಿಮತಿ ಅರಣ್ಯ ವಲಯದ ಚೆನ್ನಂಗಿ ವ್ಯಾಪ್ತಿಯ ಬಾಡಗಬಾಣಂಗಾಲ, ಹುಂಡಿ, ಮಠ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದ 32 ಕಾಡಾನೆಗಳನ್ನು ಮರಳಿ ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಶನಿವಾರ ಸಫಲರಾದರು. ಕಾಫಿ ತೋಟಗಳ ಮಾರ್ಗದಲ್ಲಿ ತೆರಳಿದ ಅರಣ್ಯ ಇಲಾಖೆಯ 20ಕ್ಕೂ ಹೆಚ್ಚು ಸಿಬ್ಬಂದಿಗಳು ಬಾಡಗಬಾಣಂಗಾಲ ಗ್ರಾಮದ ಬಾಣಂಗಾಲ ಎಸ್ಟೇಟ್ ನಿಂದ ಮಾರ್ಗೊಳ್ಳಿ ಎಸ್ಟೇಟ್ ಮೂಲಕ ಕಾಡಾನೆಗಳನ್ನು ಓಡಿಸಿದರು. ಸುಮಾರು 8 ಕೀಲೋ ಮೀಟರ್ ದೂರದಲ್ಲಿರುವ ಮಾಲ್ದಾರೆ ಅರಣ್ಯಕ್ಕೆ 32 ಆನೆಗಳ ಹಿಂಡನ್ನು ಪಟಾಕಿ ಸಿಡಿಸಿ ಕಾಡಿಗಟ್ಟುವಲ್ಲಿ ಯಶಸ್ವಿಯಾದರು.
ಈ ಆನೆಗಳು ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿ ಕಾರ್ಮಿಕರು ಹಾಗೂ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದವು. ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ ಮತ್ತು ಎಸಿಎಫ್ ಗೋಪಾಲ್ ನಿರ್ದೇಶನದ ಮೇರೆಗೆ ವಲಯ ಅರಣ್ಯಾಧಿಕಾರಿ ಗಂಗಾಧರ ಇವರ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಶಶಿ ಪಿ.ಟಿ, ದೇವರಾಜ್ ಡಿ., ಅರಣ್ಯ ಪಾಲಕ ರಾಜೇಶ್, ಆರ್‌ಆರ್‌ಟಿ ಸಿಬ್ಬಂದಿಗಳಾದ ಸಚಿನ್, ಶಂಕರ್, ಮುತ್ತ, ಸುಂದರ, ಭರತ, ಪ್ರದೀಪ್, ರಂಜಿತ್, ಧನು, ದಿನು, ರೋಶನ್, ಪೊನ್ನಣ್ಣ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. (ವರದಿ : ಅಂಟೋನಿ ಸಿದ್ದಾಪುರ)