ನಾಪೋಕ್ಲು ಆ.12 NEWS DESK : ಅಂತಾರಾಷ್ಟ್ರೀಯ ಹಾಕಿಪಟು ಹಾಗೂ ಒಲಂಪಿಯನ್, ಪ್ರಸ್ತುತ ಬೆಂಗಳೂರಿನಲ್ಲಿ ಹಾಕಿ ಕರ್ನಾಟಕ ಸಂಸ್ಥೆಯ ಜನರಲ್ ಸೆಕ್ರೆಟರಿ ಮತ್ತು ಬೆಂಗಳೂರಿನ ಖೇಲೋ ಇಂಡಿಯಾದ ಪರ್ಫಾರ್ಮೆನ್ಸ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಅಂಜಪರವಂಡ ಸುಬ್ಬಯ್ಯ ಹಾಕಿ ಕ್ರೀಡೆ ಅಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿ ಮೂರ್ನಾಡು ವಿದ್ಯಾಸಂಸ್ಥೆಗೆ 30 ಹಾಕಿ ಸ್ಟಿಕ್, 30 ಹಾಕಿ ಬಾಲ್ ಹಾಗೂ ಗೋಲ್ ಕೀಪರ್ ಕಿಟ್ ಸೇರಿ ಒಟ್ಟು 50,000 ರೂ,ಮೌಲ್ಯದ ಹಾಕಿ ಕ್ರೀಡಾ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿದರು. ಡಾ.ಅಂಜಪರವಂಡ ಸುಬ್ಬಯ್ಯ ಮಾತನಾಡಿ, ಹಾಕಿ ಕ್ರೀಡೆಗೆ ಮೂರ್ನಾಡು ವಿದ್ಯಾ ಸಂಸ್ಥೆಯ ಕೊಡುಗೆ ಅಪಾರವಾಗಿದ್ದು, ಕ್ರೀಡೆಯನ್ನು ಉತ್ತೇಜಿಸಲು ಸಂಸ್ಥೆಗೆ ಇನ್ನೂ ಮುಂದಿನ ದಿನಗಳಲ್ಲಿ ತಮ್ಮಿಂದಾಗುವ ಕೊಡುಗೆಯನ್ನು ನೀಡುವ ಭರವಸೆ ನೀಡಿದರು. ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ.ಚೌರಿರ ಜಗತ್ ತಿಮ್ಮಯ್ಯ ಕೊಡುಗೆಯನ್ನು ಸ್ವೀಕರಿಸಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಯಶಸ್ಸನ್ನು ಸಾಧಿಸಿ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಲು ದಾನಿಗಳು ನೀಡಿದ ಕೊಡುಗೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಈ ಸಂದರ್ಭ ಮೂರ್ನಾಡು ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ, ವಿದ್ಯಾಸಂಸ್ಥೆಯ ನಿರ್ದೇಶಕರಾದ ಕೆರೆಮನೆ ರಾಮಮೂರ್ತಿ, ಮುಡಂಡ ಚಂಗಪ್ಪ, ವಿದ್ಯಾಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.