ಮರಗೋಡು ಆ.13 NEWS DESK : ಐರಿಮಕ್ಕಡ ಕೂಟ ಹಾಗೂ ಐಮಂಡ ಪೊಮ್ಮಕ್ಕಡ ಕೂಟದಿಂದ ಇದೇ ಮೊದಲ ಬಾರಿಗೆ ಮರಗೋಡಿನಲ್ಲಿ ನಡೆದ ಕೆಸರು ಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಐಮಂಡ ಗಣೇಶ್ ಹಾಗೂ ರೂಪೇಶ್ ಕುಮಾರ್ ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ಐಮಂಡ ಕುಟುಂಬಸ್ಥರು ಹಾಗೂ ಐರಿ ಮಕ್ಕಡ ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಬೆಳಗ್ಗೆ ಗದ್ದೆ ಪೂಜೆಯ ಬಳಿಕ ಸಾಂಪ್ರದಾಯಿಕ ನಾಟಿ ಮಾಡಿ ಕೆಸರು ಗದ್ದೆ ಕ್ರೀಡೆಗೆ ಚಾಲನೆ ನೀಡಲಾಯಿತು. ಬಳಿಕ ವಿವಿಧ ವಯೋಮಾನದ ಪುರುಷರು, ಮಹಿಳೆಯರು, ಹಿರಿಯರಿಗೆ ವೈವಿಧ್ಯಮಯ ಸ್ಪರ್ಧೆಗಳು ನಡೆಯಿತು. ಪುಟ್ಟ ಮಕ್ಕಳಿಗೆ 50 ಮೀಟರ್ ಓಟ, ಅವಿವಾಹಿತ ಯುವಕರು ಹಾಗೂ ಯುವತಿಯರಿಗೆ 100 ಮೀ ಓಟ, ವಿವಾಹಿತ ಪುರುಷರು ಹಾಗೂ ಮಹಿಳೆಯರಿಗೆ 100 ಮೀ ಓಟ, 50 ವರ್ಷ ಮೇಲ್ಪಟ್ಟ ಹಿರಿಯರಿಗೆ 100 ಮೀ. ಓಟದ ಸ್ಪರ್ಧೆ ನಡೆಯಿತು. ಅಲ್ಲದೆ ಮಹಿಳೆಯರ ತಂಡಗಳ ಮಧ್ಯೆ ಏರ್ಪಡಿಸಲಾಗಿದ್ದ ಹಗ್ಗ ಜಗ್ಗಾಟ ಹಾಗೂ ಹ್ಯಾಂಡ್ ಬಾಲ್ ಸ್ಪರ್ಧೆ ರೋಚಕವಾಗಿತ್ತು. ಇದೇ ಮೊದಲ ಬಾರಿಗೆ ಕೆಸರು ಗದ್ದೆಯಲ್ಲಿ ಹ್ಯಾಂಡ್ ಬಾಲ್ ಆಡಿ ಕೆಸರಲ್ಲಿ ಎದ್ದು ಬಿದ್ದು ಸಂಭ್ರಮಿಸಿದರು. ಹ್ಯಾಂಡ್ ಬಾಲ್‌ನಲ್ಲಿ ಐಮಂಡ ಹಿಮಾನಿ ನೇತೃತ್ವದ ತಂಡ ಐಮಂಡ ಜಲಜಾಕ್ಷಿ ನೇತೃತ್ವದ ತಂಡವನ್ನು ಮಣಿಸಿ ಚಾಂಪಿಯನ್ ಆದರೆ, ಜಗ್ಗಾಟದಲ್ಲಿ ಜಲಜಾಕ್ಷಿ ನೇತೃತ್ವದ ತಂಡ ಚಾಂಪಿಯನ್ ಆಗಿ ಹೊಹೊಮ್ಮಿತು. ಐಮಂಡ ಕಲ್ಪನಾ ನೇತೃತ್ವದ ತಂಡ ದ್ವಿತೀಯ ಸ್ಥಾನಗಳಿಸಿತು. ಪುರುಷರ ನಾಲ್ಕು ತಂಡಗಳ ಮಧ್ಯೆಯೂ ಹಗ್ಗಜಗ್ಗಾಟ ಹಾಗೂ ಹ್ಯಾಂಡ್ ಬಾಲ್ ಆಯೋಜನೆ ಮಾಡಲಾಗಿತ್ತು. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರು ಕೂಡ ಬಾಲ್ ಹಿಡಿದು ಗದ್ದೆಯಲ್ಲಿ ಓಡಾಡಿ ಗೋಲು ಹೊಡೆದು ಸಂಭ್ರಮಿಸಿದರು. ಮುಲ್ಲೈರಿರ ಸುರಿ ಸುಬ್ಬಯ್ಯ ನೇತೃತ್ವದ ತಂಡ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದರೆ, ಐನಂಗಡ ಉದಯ್ ಕುಮಾರ್ ನೇತೃತ್ವದ ತಂಡ ಎರಡನೇ ಸ್ಥಾನಗಳಿಸಿತು. ಹಗ್ಗ ಜಗ್ಗಾಟದಲ್ಲಿ ಐಮಂಡ ಲೋಕೇಶ್ ಬಿದ್ದಪ್ಪ ನೇತೃತ್ವದ ತಂಡ ಚಾಂಪಿಯನ್ ಆದರೆ, ಐಮಂಡ ಅಶೋಕ್ ಚೀಯಣ್ಣ ನೇತೃತ್ವದ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಕಾರ್ಯಕ್ರಮದ ಕೊನೆಯಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು. ಬೇಲ್ ನಮ್ಮೆ ಅಂಗವಾಗಿ ಐಮಂಡ ಪೊಮ್ಮಕ್ಕಡ ಕೂಟ ಸಹಯೋಗದಲ್ಲಿ ಮಧ್ಯಾಹ್ನ ವಿಶೇಷ ಕಕ್ಕಡ ತೀನಿ ನಮ್ಮೆ ಕೂಡ ಆಯೋಜನೆ ಮಾಡಲಾಗಿತ್ತು. ಹಲಸಿನ ಬೀಜದ ಚಟ್ನಿ, ಕಣಲೆ ಸಾರು, ನಾಟಿ ಕೋಳಿ ಸಾರು, ಕಕ್ಕಡ ಏಡಿ ಸಾರು, ಹಂದಿ ಮಾಂಸದ ಉಪ್ಪಿನಕಾಯಿ, ಕಣಲೆ ಉಪ್ಪಿನಾಯಿ, ಆಟಿ ಸೊಪ್ಪಿನ ಪಾಯಸ, ಹಲ್ವಾ ಹೀಗೆ 15ಕ್ಕೂ ಅಧಿಕ ಬಗೆಯ ಕಕ್ಕಡ ಮಾಸದ ವಿಶೇಷ ತಿನಿಸುಗಳು ಘಮಘಮಿಸಿತು. ಮುಂದಿನ ವರ್ಷದಿಂದ ಮರಗೋಡಿನ ಐಮಂಡ ಕುಟುಂಬದಲ್ಲಿ ಪಾಳು ಬಿದ್ದಿರುವ ಗದ್ದೆಯೊಂದನ್ನ ಮರು ಸಿದ್ಧಗೊಳಿಸಿ ಭತ್ತ ಬೆಳೆಯುವ ಮೂಲಕ ಗದ್ದೆ ಹಬ್ಬಕ್ಕೆ ನೈಜ ಅರ್ಥ ನೀಡಲು ಐರಿ ಮಕ್ಕಡ ಕೂಟ ತೀರ್ಮಾನಿಸಿತು. ಕಾರ್ಯಕ್ರಮದಲ್ಲಿ ಐಮಂಡ ಒಕ್ಕಡ ಪಟ್ಟೇದಾರ ಐಮಂಡ ಪೊನ್ನಪ್ಪ, ಐಮಂಡ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪುಷ್ಪಾವತಿ, ಐರಿ ಸಮಾಜದ ಉಪಾಧ್ಯಕ್ಷೆ ಬಬ್ಬಿರ ಸರಸ್ವತಿ, ಐರಿ ಮಕ್ಕಡ ಕೂಟದ ಹಿರಿಯ ಸದಸ್ಯರಾದ ಐನಂಗಡ ಉದಯ್ ಕುಮಾರ್, ಮುಲ್ಲೈರೀರ ಮೋಹನ್ ಗಣಪತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.










