ಕೂಡಿಗೆ ಆ.15
NEWS DESK : ಕೊಡಗಿನ ಸೈನಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸೈನಿಕ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಶಾಲೆಯ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ನಂತರ ಶಾಲೆಯ ಅಶ್ವದಳದೊಂದಿಗೆ ಆಗಮಿಸಿ, ಶಾಲೆಯಲ್ಲಿನ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಸಲ್ಲಿಸುವುದರ ಮೂಲಕ ಗೌರವ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅವರು, ಬ್ರಿಟಿಷರ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವುದರೊಂದಿಗೆ, ಕೊಡಗಿನ ವೀರ ಯೋಧರಿಗೆ ಗೌರವವನ್ನು ಸಮರ್ಪಿಸಿದರು. ಎಲ್ಲಾ ವಿದ್ಯಾರ್ಥಿಗಳು ಭಾರತೀಯ ಸಶಸ್ತ್ರ ಪಡೆಗಳಲ್ಲಿ ವೃತ್ತಿಜೀವನವನ್ನು ನಡೆಸಲು ಪ್ರೋತ್ಸಾಹಿಸುವುದರೊಂದಿಗೆ ರಾಷ್ಟ್ರದ ಗಡಿ ಪ್ರದೇಶಗಳನ್ನು ರಕ್ಷಿಸುವಲ್ಲಿ ನಮ್ಮ ವೀರಯೋಧರ ಮಹತ್ವವನ್ನು ತಿಳಿಸಿದರು. ಜೊತೆಗೆ ಭಾರತೀಯ ಸಶಸ್ತ್ರ ಪಡೆಗಳ ಶ್ರೇಷ್ಠತೆಯನ್ನು ಮತ್ತು ಶಾಲೆಯ ಪ್ರಾಥಮಿಕ ಧ್ಯೇಯವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕೆಂದು ಎಲ್ಲಾ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಶಾಲೆಯ ವಿದ್ಯಾರ್ಥಿಗಳು ತೋರಿದ ಮನೋಜ್ಞ ಪಥ ಸಂಚಲವನ್ನು ಅಭಿನಂದಿಸುವುದರೊಂದಿಗೆ, ಇದು ಅವರ ನಿರಂತರ ಶ್ರಮ, ಪ್ರಾಮಾಣಿಕ ಪ್ರಯತ್ನ ಮತ್ತು ಶಾಲೆಗೆ ಅವರು ತೋರುವ ಸಮರ್ಪಣಾ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ನಡೆಸಿದ ಈ ಪಥಸಂಚಲನ ಅವರ ಸಮರ್ಪಣೆ ಮತ್ತು ಶಿಸ್ತಿಗೆ ನಿಜವಾದ ಸಾಕ್ಷಿಯಾಗಿದೆ ಎಂದು ಅವರು ಶ್ಲಾಘಿಸಿದರು. ಶಾಲೆಯು ನೀಡುತ್ತಿರುವ ಸಮಗ್ರ ತರಬೇತಿಯನ್ನು ಶ್ಲಾಘಿಸಿದರು. ಈ ತರಬೇತಿಯು ವಿದ್ಯಾರ್ಥಿಗಳನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸದೃಢರನ್ನಾಗಿಸಿ, ಅವರ ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸುವ ಮತ್ತು ಅದಮ್ಯವಾದ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ತುಂಬುವ ಮೂಲಕ ಸಮಗ್ರ ಬೆಳವಣಿಗೆಯನ್ನು ಸಾದರಪಡಿಸುತ್ತದೆ ಎಂದರು. ವಿದ್ಯಾರ್ಥಿಗಳಲ್ಲಿ ಈ ಗುಣಗಳನ್ನು ಮೈಗೂಡಿಸುವಲ್ಲಿ ಸಿಬ್ಬಂದಿಯ ಮಾರ್ಗದರ್ಶನಕ್ಕಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇತ್ತೀಚೆಗೆ ನಡೆದ ಅಖಿಲ ಭಾರತ ಸೈನಿಕ ಶಾಲೆಗಳ ವಾರ್ಷಿಕ ಅಂತರ ಗುಂಪಿನ ಕ್ರೀಡಾಕೂಟದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸುವ ಮೂಲಕ ಶಾಲೆಗೆ ಪ್ರಶಸ್ತಿಗಳನ್ನು ತಂದ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು. ಕೊಡಗಿನ ಶ್ರೀಮಂತ ಸೇನಾ ನಾಯಕತ್ವದಿಂದ ಸ್ಫೂರ್ತಿ ಪಡೆದು, ಉದಯೋನ್ಮುಖ ವಿದ್ಯಾರ್ಥಿಗಳಿಗೆ ಸೇನಾ ನಾಯಕತ್ವದ ತೊಟ್ಟಿಲು ಎಂಬ ಸ್ಥಾನಮಾನಕ್ಕೆ ನಮ್ಮ ಶಾಲೆಯನ್ನು ಉನ್ನತೀಕರಿಸುವತ್ತ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಥಮ ಮಹಿಳೆ ದಿವ್ಯಾ ಸಿಂಗ್, ಇತರ ಗಣ್ಯರು, ಬೋಧಕ, ಬೋಧಕೇತರ ಸಿಬ್ಬಂದಿ, ಎನ್ ಸಿ ಸಿ ಮತ್ತು ದೈಹಿಕ ತರಬೇತು ಸಿಬ್ಬಂದಿ ವರ್ಗ, ಆಹ್ವಾನಿತ ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿ ರಾಷ್ಟ್ರಧ್ವಜಕ್ಕೆ ಗೌರವ ಸಮರ್ಪಿಸಿದರು. ಶಾಲೆಗೆ ನಿರಂತರ ಸೇವೆ ಸಲ್ಲಿಸಿದ ರಸಾಯನ ಶಾಸ್ತ್ರ ಉಪನ್ಯಾಸಕ ಎಸ್.ಮಣಿಕಂದನ್, ಚಾಲಕ ಕೆ.ಜನಾರ್ದನ್ ರಾವ್, ಮತ್ತು ಸಿಬ್ಬಂದಿ ಜೆ.ಕೆ.ಲೋಕೇಶ್ ಅವರನ್ನು ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. CBSE ಬೋರ್ಡ್ ಪರೀಕ್ಷೆಯಲ್ಲಿ ನೂರಕಕ್ಕೆ ನೂರು ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಶಸ್ತಿ ತಂದ ಶೈಕ್ಷಣಿಕ ಸಾಧಕರನ್ನು ಅವರ ವಿಷಯ ಶಿಕ್ಷಕರೊಂದಿಗೆ ಸನ್ಮಾನಿಸಲಾಯಿತು. ಬಹುಮಾನ ವಿತರಣಾ ಸಮಾರಂಭದ ನಂತರ, ಪುಣೆಯ ಕೃತಕ ಅಂಗ ಕೇಂದ್ರಕ್ಕೆ ವರ್ಗಾವಣೆಗೊಂಡ ಶಾಲೆಯ ದೈಹಿಕ ತರಬೇತುದಾರ ನಾಯಕ್ ಸುಭೇದಾರ್ ಎನ್.ವೆಂಕಟೇಶ್ ಅವರನ್ನು ಬೀಳ್ಕೊಡಲಾಯಿತು.