ಮಡಿಕೇರಿ ಆ.15 NEWS DESK : ಕೊಡಗು ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ಮಡಿಕೇರಿ ನಗರದಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಎದುರು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ವಿಜೇತರಾದ ಸಿಆರ್‌ಪಿಎಫ್ ನ ನಿವೃತ್ತ ಡಿಐಜಿಪಿ ಆಮೆ ಸೀತಾರಾಮ್ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಾರರ ತ್ಯಾಗ ಬಲಿದಾನವನ್ನು ಸರ್ವರೂ ಗೌರವಿಸಬೇಕು ಎಂದು. ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ ಹಾಗೂ ನಿವೃತ್ತ ಸೈನಿಕ ಚೆರಿಯಮನೆ ಜಿ.ವಿಜಯ ಅವರು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಇದಕ್ಕೂ ಮೊದಲು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆಗಳಿಗೆ ಪ್ರಮುಖರು ಪುಷ್ಪ ನಮನ ಸಲ್ಲಿಸಿದರು. ಕೊಡಗು ಗೌಡ ಸಮಾಜ, ಕೊಡಗು ಗೌಡ ವಿದ್ಯಾ ಸಂಘ, ಕೊಡಗು ಗೌಡ ಮಹಿಳಾ ಒಕ್ಕೂಟ, ಕೊಡಗು ಗೌಡ ಯುವ ವೇದಿಕೆ, ಕೊಡಗು ಗೌಡ ನಿವೃತ್ತ ನೌಕರರ ಸಂಘ, ಕೊಡಗು ಗೌಡ ಮಾಜಿ ಸೈನಿಕರ ಸಂಘ ಮತ್ತು ಮಡಿಕೇರಿ ನಗರ ಗೌಡ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ ಮತ್ತಿತರರು ಉಪಸ್ಥಿತರಿದ್ದರು. ನೆರೆದಿದ್ದವರಿಗೆ ಸಿಹಿ ವಿತರಿಸಿ ಸ್ವಾತಂತ್ರ್ಯದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.