ಮಡಿಕೇರಿ ಆ.15 NEWS DESK : ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಜೈ ಭಾರತ್ ಸೇನ ತರಬೇತಿ ಸಂಸ್ಥೆಯ ಮುಖ್ಯಸ್ಥರು ಹಾಗೂ ನಿವೃತ್ತ ಸೇನಾನಿ ಕೆ.ಬಿ.ಲವ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹಲವಾರು ವೀರರು ಮಡಿದಿದ್ದಾರೆ. ಅವರ ತ್ಯಾಗ ಬಲಿದಾನ, ಹೋರಾಟದ ಪ್ರತಿಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ನಮ್ಮ ಹಿರಿಯರು ಹೋರಾಟದ ಬಲಿದಾನದಿಂದ ನಮ್ಮ ದೇಶವನ್ನು ಪರಕೀಯರ ದಾಸ್ಯದಿಂದ ಮುಕ್ತಗೊಳಿಸಿ ನಮ್ಮ ಕೈಗೆ ನೀಡಿದ್ದಾರೆ. ಈ ದೇಶವನ್ನು ಇನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ. ಆದ್ದರಿಂದ ಯುವ ಜನರು ಡ್ರಗ್ಸ್ ಹಾಗೂ ಮಾದಕ ವಸ್ತುಗಳಿಗೆ ದಾಸರಾಗದೆ ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು. ಸದಾ ದೇಶ ರಕ್ಷಣೆ, ದೇಶ ಸೇವೆ ನಮ್ಮ ಗುರಿಯಾಗಬೇಕು. ಯುವ ಜನತೆ ಸೇನೆಗೆ ಸೇರಲು ದೇಶ ಸೇವೆ ಮಾಡಲು ಸದಾ ಉತ್ಸುಕರಾಗಿ ಸಿದ್ದರಾಗಿರಬೇಕು ಎಂದರು. ಪದವಿ ಕಾಲೇಜಿ ಪ್ರಾಂಶುಪಾಲ ಬೆನಡಿಕ್ಟ್ ಆರ್.ಸಲ್ದಾನ ಮಾತನಾಡಿ, ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ನಮ್ಮ ಹಿರಿಯರು ನಮಗೆ ನೀಡಿದ ವರ ಅವರ ತ್ಯಾಗ, ಬಲಿದಾನ, ನಾವು ಪ್ರತಿ ದಿನ ನೆನೆಯಬೇಕು. ಯುವ ಜನತೆ ಮೋಜು ಮಸ್ತಿಯಲ್ಲಿ ಜೀವನವನ್ನು ಹಾಳುಮಾಡದೆ ದೇಶದ ಏಕತೆ, ಸಮಗ್ರತೆ, ದೇಶ ರಕ್ಷಣೆ ಕಡೆಗೆ ಗಮನವನ್ನು ಹರಿಸಬೇಕೆಂದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಣಯ್ಯ ನೆರೆದಿದ್ದ ಸರ್ವರಿಗೂ 78ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಸಂಘದ ಸಂಚಾಲಕ ನಾಗರಾಜು, ಐ.ಕ್ಯೂ.ಎ.ಸಿ ಸಂಚಾಲಕಿ ಪ್ರಿಯ, ಎನ್.ಸಿ.ಸಿ ಅಧಿಕಾರಿ ಬೋಜಮ್ಮ, ಎನ್.ಎಸ್.ಎಸ್ ಅಧಿಕಾರಿ ಬಿ.ಬಿ.ಸುನಿಲ್ ಕುಮಾರ್, ಉಪನ್ಯಾಸಕ ವರ್ಗ, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.










