ಮಡಿಕೇರಿ NEWS DESK ಆ.17 : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರದ ಕುರಿತು ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ಸಿಗರು ನಡೆದುಕೊಳ್ಳುತ್ತಿರುವ ರೀತಿ ಖಂಡನೀಯವೆಂದು ಭಾರತೀಯ ಜನತಾ ಪಾರ್ಟಿಯ ವಿರಾಜಪೇಟೆ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಕರಣದ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಕಾನೂನಿನ ಚೌಕಟ್ಟಿನಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ಸಿಗರು ನೀಡುತ್ತಿರುವ ಹೇಳಿಕೆಗಳು ಹಾಸ್ಯಾಸ್ಪದ ಮತ್ತು ರಾಜಕೀಯ ಹತಾಶೆಯ ಒಂದು ಭಾಗವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ಯಾವುದೇ ರೀತಿಯಲ್ಲಿ ರಾಜಕೀಯ ಒತ್ತಡಕ್ಕೆ ಮಣಿಯುವುದಿಲ್ಲ. ತನಿಖೆಯಿಂದ ಅಕ್ರಮ ಬಯಲಾಗುತ್ತದೆ ಎನ್ನುವ ಆತಂಕದಿಂದ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ಸಿಗರು ವಿನಾಕಾರಣ ಗೂಬೆ ಕೂರಿಸುತ್ತಿದ್ದಾರೆ. ಮೂಡ ಹಗರಣದಲ್ಲಿ ತಪ್ಪೇ ಮಾಡಿಲ್ಲವೆಂದಾದರೆ ತನಿಖೆಯನ್ನು ಎದುರಿಸಲು ಮುಖ್ಯಮಂತ್ರಿಗಳಿಗೆ ಭಯವೇಕೆ, ಕೆಲವು ಸಚಿವರು, ಶಾಸಕರು ತಾವೇ ತನಿಖಾ ಸಂಸ್ಥೆಯAತೆ ವರ್ತಿಸುತ್ತಿರುವುದು ಯಾಕೆ ಎಂದು ರಾಕೇಶ್ ದೇವಯ್ಯ ಪ್ರಶ್ನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರುಗಳು, ಕಾನೂನು ತಜ್ಞರ ಅಭಿಪ್ರಾಯ ಮತ್ತು ಸಂಪುಟದ ನಿರ್ಣಯವನ್ನು ರಾಜ್ಯಪಾಲರು ಪರಿಶೀಲಿಸಿದ್ದಾರೆ. ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಲು ಕೆಲವು ಬಲವಾದ ಕಾರಣಗಳು ಕಂಡು ಬಂದಿದೆ. ಯಾರ ವಿರುದ್ಧ ಆರೋಪಗಳು ಕೇಳಿ ಬಂದಿದೆಯೋ ಅದೇ ವ್ಯಕ್ತಿ ತನಿಖೆ ಹೇಗಿರಬೇಕು ಎಂಬುವುದನ್ನು ನಿರ್ಧರಿಸುವುದು ಕಾನೂನು ಸಮತವಲ್ಲ ಎಂದು ರಾಕೇಶ್ ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ನಡೆಯ ಬಗ್ಗೆ ಹಲವು ಅಂಶಗಳಿದ್ದರೂ ತನಿಖೆಗೆ ಸಹಕರಿಸದೆ ಕಾಂಗ್ರೆಸ್ಸಿಗರು ನೀಡುತ್ತಿರುವ ಹೇಳಿಕೆಗಳು ಜನರ ಹಾದಿ ತಪ್ಪಿಸುವ ರಾಜಕೀಯ ಷಡ್ಯಂತ್ರವಾಗಿದೆ ಎಂದು ಟೀಕಿಸಿದ್ದಾರೆ.












