ಮಡಿಕೇರಿ ಆ.19 NEWS DESK : ಸರ್ಕಾರಿ ಬಸ್ ಸಂಪರ್ಕವೇ ಕಾಣದ ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯ ಮುಟ್ಲು ಗ್ರಾಮಕ್ಕೆ ಬಸ್ ಬಂದಿದ್ದು, ಗ್ರಾಮಸ್ಥರು ಸಂಭ್ರಮದಿಂದ ಬಸ್ಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡಿದ್ದಾರೆ. ಖಾಸಗಿ ಬಸ್ ಸಂಚರಿಸುತ್ತಿದ್ದ ಗ್ರಾಮದಲ್ಲಿ ಕಳೆದ ಕೆಲವು ವರ್ಷಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಗ್ರಾಮಕ್ಕೆ ಬಸ್ ಸಂಪರ್ಕ ಇಲ್ಲದೇ ಗ್ರಾಮಸ್ಥರು ನಿತ್ಯ ಪರದಾಡುವಂತಾಗಿತ್ತು. ವಯೋವೃದ್ದರೇ ಅಧಿಕವಿರುವ ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆಗಾಗಿ ಗ್ರಾಮಸ್ಥರು ಹತ್ತಾರು ವರ್ಷಗಳಿಂದ ಕಛೇರಿಗಳಿಗೆ ಅಲೆದು ಬಸವಳಿದಿದ್ದರು. ಕೊಡಗು ತುರ್ತು ಸ್ಪಂದನ ಎಂಬ ಹೆಸರಿನ ವಾಟ್ಸಾಪ್ ಬಳಗದಲ್ಲಿ ತಮ್ಮ ನೋವು ತೋಡಿಕೊಂಡಾಗ, ಗುಂಪಿನ ಅಡ್ಮಿನ್ ಚಾಮೆರ ದಿನೇಶ್ ಬೆಳ್ಯಪ್ಪ, ಮಡಿಕೇರಿ ಶಾಸಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಕೋರಿದರು. ಸತತ ಪ್ರಯತ್ನದ ನಂತರ ಶಾಸಕರ ಸೂಚನೆಯ ಮೇರೆಗೆ ಸರ್ಕಾರಿ ಬಸ್ ಸೇವೆ ಪ್ರಾರಂಭವಾಗಿದ್ದು, ಗ್ರಾಮಸ್ಥರು ಪೂಜೆ ಸಲ್ಲಿಸಿ ಬರಮಾಡಿಕೊಂಡರು. ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳೇ ಕಳೆದರೂ, ಮುಟ್ಲು ಗ್ರಾಮಕ್ಕೆ ಇದೀಗ ಸ್ವಾತಂತ್ರ್ಯ ಬಂದಷ್ಟು ಖುಷಿಯಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.









