ಮಡಿಕೇರಿ ಆ.19 NEWS DESK : ಮೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆರಡು ವಾಮಮಾರ್ಗದ ಮೂಲಕ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜನರಲ್ ತಿವ್ಮ್ಮಯ್ಯ ವೃತ್ತದಲ್ಲಿ ರಾಜ್ಯಪಾಲರು, ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯುವುದನ್ನು ಸಹಿಸದ ವಿರೋಧ ಪಕ್ಷಗಳು ರಾಜಕೀಯ ಷಡ್ಯಂತ್ರ ನಡೆಸುತ್ತಿವೆ. ಜನಾದೇಶದೊಂದಿಗೆ ಬಹುಮತ ಪಡೆದಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮಂದಿ ಮೊದಲಿನಿಂದಲೂ ಹವಣಿಸುತ್ತಿದ್ದಾರೆ. ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ಕ್ರಮ ಅಸಂವಿಧಾನಿಕ ಮತ್ತು ಇದು ಬಿಜೆಪಿಯ ಷಡ್ಯಂತ್ರದ ಒಂದು ಭಾಗ ಎಂದು ಎಂದು ಆರೋಪಿಸಿದರು. ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸುವ ಮೂಲಕ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅವಕಾಶ ನೀಡಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು. ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರ, ದೀನ ದಲಿತರು, ದುರ್ಬಲ ವರ್ಗದ ಆಶಾಕಿರಣವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸುವ ಷಡ್ಯಂತ್ರ ನಡೆಯುತ್ತಿದೆ. ಕೇಂದ್ರ ಸರ್ಕಾರದ ಬಹಳಷ್ಟು ಹಗರಣಗಳನ್ನು ತೆರೆದಿಟ್ಟು ಪ್ರಧಾನಿ ಮೋದಿ ಅವರನ್ನು ಅಲುಗಾಡಿಸಿರುವ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸುವ ಪ್ರಯತ್ನವಾಗಿ ಬಿಜೆಪಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡಿದೆ. ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಹುನ್ನಾರ ನಡೆದಿದೆ ಎಂದು ಆರೋಪಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಮಾತನಾಡಿ, ರಾಜಕೀಯ ದುರುದ್ದೇಶದಿಂದ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅವಕಾಶ ನೀಡಲಾಗಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಾರದು ಎಂದು ಮನವಿ ಮಾಡಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಪರವಾಗಿ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಪ್ರಮುಖ 7 ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಐಶ್ವರ್ಯ ಅವರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು. ಮನವಿಯಲ್ಲಿ ಪ್ರಮುಖವಾಗಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅವಕಾಶ ನೀಡಿರುವ ಆದೇಶವನ್ನು ಹಿಂದಕ್ಕೆ ಪಡೆಯಲು ರಾಜ್ಯಪಾಲರಿಗೆ ಆದೇಶಿಸಬೇಕು, ರಾಜ್ಯಪಾಲರ ಭವನ ಪಕ್ಷಾತೀತವಾಗಿ ಇರುವಂತೆ ನೋಡಿಕೊಳ್ಳುವ ಮೂಲಕ ಸಂವಿಧಾನದ ಆಶಯಗಳನ್ನು ರಕ್ಷಿಸಬೇಕು, ಪ್ರಜಾತಂತ್ರ ವ್ಯವಸ್ಥೆಯಡಿ ಸಂವಿಧಾನ ಬದ್ಧವಾಗಿ ಅಧಿಕಾರಕ್ಕೆ ಬಂದ ಸರ್ಕಾರವನ್ನು ಅಸ್ಥಿರಗೊಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರು ನೀಡಿರುವ ಆದೇಶ ಜನರಿಂದ ಆಯ್ಕೆಯಾದ ಸರ್ಕಾರದ ವಿರುದ್ಧದ ದಾಳಿ ಮಾತ್ರವಲ್ಲ, ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರÀವಾಗಿದೆ. ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ನೀಡಿರುವ ಆದೇಶ ಕೇಂದ್ರ ಸರ್ಕಾರದ ಪ್ರಭಾವದಿಂದ ನಡೆದದ್ದು ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ಆರೋಪಿಸಲಾಗಿದೆ. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕಾಂಗ್ರೆಸ್ ಪ್ರಮುಖರಾದ ಕೊಲ್ಯದ ಗಿರೀಶ್, ಬಿ.ಎಸ್.ತಮ್ಮಯ್ಯ, ಟಾಟು ಮೊಣ್ಣಪ್ಪ, ಪ್ರಮೋದ್ ಗಣಪತಿ, ಮುನೀರ್ ಅಹಮ್ಮದ್, ನೆರವಂಡ ಉಮೇಶ್, ತೆನ್ನಿರ ಮೈನಾ, ಟಿ.ಈ.ಸುರೇಶ್, ಆರ್.ಪಿ.ಚಂದ್ರಶೇಖರ್, ಕಾನೆಹಿತ್ಲು ಮೊಣ್ಣಪ್ಪ, ಹನೀಫ್, ಜಾನ್ಸನ್ ಪಿಂಟೋ, ರಾಜೇಶ್ ಯಲ್ಲಪ್ಪ, ಮೋಹನ್ ದಾಸ್, ಸೂರಜ್ ಹೊಸೂರು ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.









