ಮಡಿಕೇರಿ ಆ.19 NEWS DESK : ದಿವಂಗತ ಲೆಫ್ಟಿನೆಂಟ್ ಜನರಲ್ ಕೋದಂಡ ಸೋಮಣ್ಣ ಒಮ್ಮೆ ಕಾಲೇಜು ವಿದ್ಯಾರ್ಥಿಗಳಿಗೆ ಸೇನೆಗೆ ಸೇರಲು ಕರೆ ಕೊಟ್ಟರು. ಸೇನೆಗೆ ಸೇರಿ ದೇಶಭಕ್ತಿ, ಶಿಸ್ತು ಹಾಗೂ ಹಾಕಿ ಆಡಿ ಬಹಳಷ್ಟು ಜನರು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ ಎಂದು ನೋಡಿದರು. ಅಂತಹವರಲ್ಲಿ ಕರಿನೆರವಂಡ ದರಾ ತಮ್ಮಯ್ಯ ಕೂಡ ಒಬ್ಬರು. ಕರಿನೆರವಂಡ ಗಣಪತಿ ಹಾಗೂ ಪೊನ್ನವ್ವ (ತಾಮನೆ ಮಚ್ಚೆಟ್ಟೀರ) ದಂಪತಿಯರ ಪುತ್ರನಾಗಿ ತಮ್ಮಯ್ಯನವರು ಜುಲೈ 1, 1955 ರಂದು ವಿರಾಜಪೇಟೆಯ ಪಾಲಂಗಾಲದಲ್ಲಿ ಜನಿಸಿದರು.
ವಿದ್ಯಾಭ್ಯಾಸ :: ತಮ್ಮಯ್ಯನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಾಲಂಗಾಲ ಹಾಗೂ ಕರಡದಲ್ಲಿ ಮುಗಿಸಿ, ಪ್ರೌಢಶಿಕ್ಷಣವನ್ನು ಚೇಯಂಡಾಣೆಯಲ್ಲಿ ಪೂರ್ಣಗೊಳಿಸಿದರು. ಬಾಲ್ಯದಲ್ಲೇ ಹಾಕಿಯ ಬಗ್ಗೆ ಉತ್ಸಾಹವಿದ್ದ ಇವರು ಪ್ರೌಢಶಾಲೆಯಲ್ಲಿ ಪ್ರಥಮ ಬಾರಿಗೆ ನಾಪೋಕ್ಲಿನಲ್ಲಿ ಶಾಲಾ ಮಟ್ಟದಲ್ಲಿ ಪಂದ್ಯಾವಳಿ ಆಡುವ ಮೂಲಕ ತಮ್ಮ ಹಾಕಿ ಪಯಣಕ್ಕೆ ಮುನ್ನುಡಿ ಬರೆದರು.
ಪಾಲಂಗಾಲದಿಂದ ಜಬ್ಬಲ್ ಪುರದವರೆಗೆ ಪಯಣ :: 1972ರಲ್ಲಿ ಮಧ್ಯಪ್ರದೇಶದ ಜಬ್ಬಲ್ ಪುರದಲ್ಲಿ ಸೈನ್ಯದ ಬಾಯ್ಸ್ ಮಿಲಿಟರಿಗೆ ಸೇರಿದರು.1974ರಲ್ಲಿ ನೆಹರು ಜೂನಿಯರ್ ಗೋಲ್ಡ್ ಕಪ್ ಆಡಿದರು. 1978 ರಲ್ಲಿ ಕೋರ್ ಆಫ್ ಸಿಗ್ನಲ್ಸ್ ಗೆ ಸೇರ್ಪಡೆಗೊಂಡರು. ಅಲ್ಲಿ ಪಶ್ಚಿಮ ಕಮಾಂಡ್ ಗೆ ಆಡಲು ಪ್ರಾರಂಭಿಸುತ್ತಾರೆ ಹಾಗು ಸಿಗ್ನಲ್ಸ್ ನ ಅತ್ಯುತ್ತಮ ಫುಲ್ ಬ್ಯಾಕ್ ಆಗಿ ಹೊರಹೊಮ್ಮುತ್ತಾರೆ.
ಜಲಂಧರ್ ನ ಸಿಗ್ನಲ್ಸ್ ಎಂಬ ಹೆಮ್ಮರ :: ಭಾರತದ ಕ್ರೀಡಾರಂಗದಲ್ಲಿ ಸಿಗ್ನಲ್ಸ್ ನ ಹಾಕಿಯ ಪ್ರಮುಖ ಕೇಂದ್ರ ಜಲಂಧರ್. ಇಲ್ಲೇ ಸಿಗ್ನಲ್ಸ್ ಹಾಕಿಯ ಬೆಳವಣಿಗೆ ಕಂಡಿದ್ದು. 1950ರ ದಶಕದ ಹಿಂದಿನಿಂದಲೂ ಹಾಕಿ ಕ್ಷೇತ್ರದಲ್ಲಿ ಭದ್ರಕೋಟೆಯಾಗಿ ಬೇರೂರಿ ನೆಲೆಸಿ ಸದಾಕಾಲಕ್ಕೂ ಶ್ರೇಷ್ಠ ತಂಡಗಳಲ್ಲೊಂದು ಎಂಬ ಕೀರ್ತಿಗೆ ಪಾತ್ರವಾದ ಜಲಂಧರ್‌ನ ಕೋರ್ ಆಫ್ ಸಿಗ್ನಲ್ಸ್ ಹಾಕಿ ತಂಡದ್ದು.
ಹಾಕಿಯ ಪದ್ಮಶ್ರೀ ಪುರಸ್ಕೃತ ಗಣೇಶ್ :: ಕೊಡಗಿನ ಏಕೈಕ ಹಾಕಿಯ ಪದ್ಮಶ್ರೀ ಪುರಸ್ಕೃತ ಗಣೇಶ್ ಅವರ ಹೆಸರನ್ನು ಗಣೇಶ್ ಎಂಕ್ಲೈವ್ ಎಂದು ನಾಮಕರಣ ಮಾಡಿದ ಕೀರ್ತಿಯು ಮೋವ್ ನಲ್ಲಿರುವ ಕೋರ್ ಆಫ್ ಸಿಗ್ನಲ್ಸ್ ಗೆ ಸಲ್ಲುತ್ತದೆ. 1973ರ ವಿಶ್ವಕಪ್ ನ ನಾಯಕ ಹಾಗೂ ಇಂತಹ ಅದ್ಭುತ ಆಟಗಾರರನ್ನು ಕೆತ್ತಿದ ಶಿಲ್ಪಿ ಕೋರ್ ಆಫ್ ಸಿಗ್ನಲ್ಸ್.
ಪಂದ್ಯಾಟಗಳು :: ಇವರು ಬಾಂಬೆಯಲ್ಲಿ ನಡೆದ ಬಾಂಬೆ ಗೋಲ್ಡ್ ಕಪ್, ಭೂಪಾಲ್ ನಲ್ಲಿ ನಡೆದ ಅಬ್ದುಲ್ಲ ಗೊಲ್ಡ್ ಕಪ್, ಕಲ್ಕತ್ತಾದಲ್ಲಿ ನಡೆದ ಬೆಟನ್ ಕಪ್, ಕೆ.ಡಿ.ಸಿಂಗ್ ಬಾಬು ಟೂರ್ನಮೆಂಟ್, ಸುರ್ಜಿತ್ ಸಿಂಗ್ ಗೋಲ್ಡ್ ಕಪ್, ಮುರುಗಪ್ಪ ಗೋಲ್ಡ್ ಕಪ್, ಮಹಾರಾಜ ರಂಜಿತ್ ಸಿಂಗ್ ಗೋಲ್ಡ್ ಕಪ್ ಮುಂತಾದ ಪಂದ್ಯಾವಳಿಗಳನ್ನು 1977 ರಿಂದ 1982ರ ಅವಧಿಯವರೆಗೆ ಆಡಿದರು.
1983 ರಲ್ಲಿ ಇಂಟರ್ ಕಮಾಂಡ್ ಹಾಗೂ ಇಂಟರ್ ಸರ್ವಿಸಸ್ ಹಾಕಿ ಪಂದ್ಯಾವಳಿಗಳನ್ನು ಆಡಿದರು. ಈ ಎಲ್ಲಾ ಪಂದ್ಯಾವಳಿಗಳ ವ್ಯವಸ್ಥಾಪಕ ಹಾಗು ತರಬೇತುದಾರರಾಗಿ ಕರ್ನಲ್ ರಮೀಂದರ್ ಸಿಂಗ್ ಅವರ ನೇತೃತ್ವದಲ್ಲಿ ನಡೆಯಿತು.
ಪಾಲ್ಘಟ್ ನ್ಯಾಷನಲ್ಸ್ :: ತಮ್ಮಯ್ಯನವರ ಅದ್ಭುತ ಮೈಕಟ್ಟು, ಬಲಿಷ್ಠ ಏಟುಗಳು, ಅವರನ್ನು ಪಶ್ಚಿಮ ಕಮಾಂಡಿನ ಭರವಸೆ ಫುಲ್ ಬ್ಯಾಕ್ ಆಟಗಾರನಾಗಿ ಹೊರಹೊಮ್ಮಂತೆ ಮಾಡಿತ್ತು. 1984ರಲ್ಲಿ ಕೇರಳದ ಪಾಲ್ಘಟ್ ನಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಕಪ್ ಪಂದ್ಯಾವಳಿಯನ್ನು ಗೆದ್ದು, ಸೈನ್ಯದ ಮುಖ್ಯಸ್ಥರಿಂದ ಕಮೆಂಡೇಷನ್ ಕಾರ್ಡ್ ಅನ್ನು ಪಡೆದುಕೊಂಡರು. ಇದರ ತರಬೇತುದಾರರು ಜರ್ನೈಲ್ ಸಿಂಗ್ ಹಾಗು ಚಂದಪಂಡ ಕರುಂಬಯ್ಯ.
ಭಾರತದ ಆಯ್ಕೆ ಶಿಬಿರ :: ಪಾಲ್ಘಟ್ ನ್ಯಾಷನಲ್ ಇವರನ್ನು 1984ರಲ್ಲಿ ಪಾಟಿಯಾಲದಲ್ಲಿ ನಡೆದ ಭಾರತದ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಲು ಅವಕಾಶ ಮಾಡಿಕೊಟ್ಟಿತು.
ಪಂದ್ಯ ಶ್ರೇಷ್ಠ ಆಟಗಾರ :: ಬೆಂಗಳೂರಿನ ಐ.ಟಿ.ಸಿ ಕಪ್ ಹಾಗು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಗೋಲ್ಡ್ ಕಪ್ ಪಂದ್ಯಾವಳಿಗಳನ್ನು ಗೆದ್ದು ಪಂದ್ಯ ಶ್ರೇಷ್ಠ ಆಟಗಾರನೆಂಬ ಗೌರವಕ್ಕೂ ಪಾತ್ರರಾದರು.
ಅತ್ಯುತ್ತಮ ಫುಲ್ ಬ್ಯಾಕ್ :: ಇವರ ಪೆನಾಲ್ಟಿ ಸ್ಟ್ರೈಕ್ ನ ಬಿರುಸಿನ ಏಟುಗಳು ಎದುರಾಳಿ ಆಟಗಾರರನ್ನು ನಡುಗಿಸುವಂತಿತ್ತು.
ಬಾಂಬೆ ಗೋಲ್ಡ್ ಕಪ್ ಹಾಗೂ ಅಬ್ದುಲ್ಲ ಗೋಲ್ಡ್ ಕಪ್ ನಲ್ಲಿ ಅತ್ಯುತ್ತಮ ಫುಲ್ ಬ್ಯಾಕ್ ಆಟಗಾರ ಪ್ರಶಸ್ತಿಗೆ ಭಾಜನರಾದರು.
ರಾಜ್ಯ ಅಬಕಾರಿ ಇಲಾಖೆ :: 1992 ರಲ್ಲಿ ಸೈನ್ಯದಿಂದ ನಿವೃತ್ತಿ ಪಡೆದ ಇವರು ರಾಜ್ಯ ಅಬಕಾರಿ ಇಲಾಖೆಯಲ್ಲಿ ಬೆಂಗಳೂರು ಹಾಗು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ಸಬ್ ಇನ್ಸ್ಪೆಕ್ಟರ್ ಆಗಿ ನಿವೃತ್ತಿ ಪಡೆದರು. ಪ್ರಸ್ತುತ ಇವರು ತಮ್ಮ ಪತ್ನಿ ಜಯ(ತಾಮನೆ ಚೇರಂಡ) ಅವರೊಂದಿಗೆ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಇವರಿಗೆ ಮೋನಿಕ ಹಾಗೂ ಸೋನಿಕ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಾಕಿಯಲ್ಲಿ ಇವರು ಕೊಡಗಿಗೂ ಹಾಗೂ ಸೈನ್ಯಕ್ಕೂ ಬಹಳ ಹೆಸರುಗಳಿಸಿಕೊಟ್ಟಿದ್ದಾರೆ. ಇಂತಹ ಆಟಗಾರರನ್ನು ಇಂದು ನೆನೆಸಿಕೊಳ್ಳಬೇಕು. ಇಂದಿನ ವರ್ತಮಾನದ ದೃಷ್ಟಿಯಲ್ಲಿ ಇಂತಹ ಕೌಶಲ್ಯಯುತ ಆಟಗಾರರ ತರಬೇತಿಯು ಯುವ ಆಟಗಾರರಿಗೆ ಅವಶ್ಯಕತೆ ಇದ್ದು, ಇವರ ಸೇವೆಯು ಕೊಡಗಿಗೆ ಮುಂದೆಯೂ ಸಿಗಲಿ ಎಂಬುದು ಕ್ರೀಡಾ ಅಭಿಮಾನಿಗಳ ಮನದಾಳದ ಮಾತುಗಳು.
ಕ್ರೀಡಾ ವಿಶ್ಲೇಷಣೆ :: ಚೆಪ್ಪುಡೀರ ಕಾರ್ಯಪ್ಪ