ಮಡಿಕೇರಿ NEWS DESK ಆ.20 : ಸರಕಾರ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಕರಾಳ ಕಾನೂನು ಮತ್ತು ಕೊಡಗಿಗೆ ಮಾರಕವಾಗಿರುವ ಬಂಡವಾಳಶಾಹಿಗಳಿಗೆ ಪೂರಕ ಕಾನೂನನ್ನು ಜಾರಿಗೆ ತರುವ ಮೂಲಕ ಕೊಡವರನ್ನು ಶೋಷಣೆ ಮಾಡುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ.
ಸಿದ್ದಾಪುರದ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಕುಟ್ಟದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಕೊಡವ ಲ್ಯಾಂಡ್ ಗೆ ಮಾರಕವಾಗಿರುವ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಫಿಯಾಗಳಂತಹ ಬಂಡವಾಳಶಾಹಿಗಳಿಗೆ ನೆರವಾಗಬಲ್ಲ ಕಾನೂನುಗಳನ್ನು ರೂಪಿಸಿ ಕೊಡವರಿಗೆ ಮಾತೃಭೂಮಿಯಲ್ಲಿ ನೆಲೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ಕೊಡವ ವಿರೋಧಿಗಳ ಬೆಂಬಲವಿದೆ ಎಂದು ಆರೋಪಿಸಿದರು. ರಾಷ್ಟ್ರೀಯ ಹೆದ್ದಾರಿಯ ಕುಟ್ಟ ಸಮೀಪದ ಪೂಚೆಕಲ್ಲು ಗ್ರಾಮದಲ್ಲಿ ಜಲಗರ್ಭ ಮತ್ತು ಭೂಗರ್ಭ ಸ್ಫೋಟವಾಗಿದೆ. ಇಲ್ಲಿ ಸಂಭವಿಸಿರುವ ಅನಾಹುತ ಲಕ್ಷ್ಮಣ ತೀರ್ಥ ವ್ಯಾಪ್ತಿಗೂ ವ್ಯಾಪಿಸಿ ಕ್ರಮೇಣ ಇಡೀ ಕೊಡಗಿಗೆ ಅನಾಹುತ ಎದುರಾಗಬಹುದು. ಪ್ರಸ್ತುತ ಪೂಚೆಕಲ್ಲು ಭಾಗದಲ್ಲಿ ವಾಹನಗಳ ಸಂಚಾರವಿಲ್ಲದೆ ಜನರಿಗೆ ತೊಂದರೆಯಾಗಿದೆ. ಕುಟ್ಟ ಅತಿ ಎತ್ತರದ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿದ್ದು, ವಿಶ್ವ ಪಾರಂಪರಿಕ ತಾಣವಾಗಿದೆ. ಆದರೆ ಸರಕಾರದ ಕಾನೂನು ಕೊಡವರಿಗೆ ಮಾತ್ರ ಅನ್ವಯವಾಗುತ್ತಿದ್ದು, ಬಂಡವಾಳಶಾಹಿಗಳು ಆಡಳಿತ ವ್ಯವಸ್ಥೆಯ ಕೃಪಾ ಕಟಾಕ್ಷದಿಂದ ಯಾವುದೇ ಸೂಕ್ಷ್ಮ ಪರಿಸರ ವಲಯದ ಕಾನೂನಿಗೆ ಒಳಪಡುತ್ತಿಲ್ಲ. ಕೊಡವರು ಮಾತ್ರ ಎಲ್ಲಾ ಕಾನೂನುಗಳಿಗೆ ಒಳಪಟ್ಟು ಆಡಳಿತ ವ್ಯವಸ್ಥೆಯಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಸರಕಾರ ಬೇರೆ ಬೇರೆ ಯೋಜನೆಗಳಿಗೆ ಹಣ ಖರ್ಚು ಮಾಡಿ ಕೈಸುಟ್ಟುಕೊಂಡಿದೆ. ಆರ್ಥಿಕ ಕ್ರೋಢೀಕರಣಕ್ಕಾಗಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಮಿತಿ ಮೀರಿ ನಡೆಸುತ್ತಿದೆ. ಇದರಿಂದ ಬೃಹತ್ ಪ್ರಮಾಣದ ಹಣ ನೇರ ಮತ್ತು ಪರೋಕ್ಷವಾಗಿ ಚಲಾವಣೆಯಾಗುತ್ತಿದೆ. ಪ್ರಕೃತಿಯ ಮೇಲೆ ಯಾವುದೇ ರೀತಿಯ ದಾಳಿಯಾದರೂ ಆಡಳಿತ ವ್ಯವಸ್ಥೆ ಮಾತ್ರ ತಟಸ್ಥ ಧೋರಣೆ ಅನುಸರಿಸುತ್ತಿದೆ. ಕೊಡವರು ಹೋರಾಟದ ಮೂಲಕ ವೇದನೆಯನ್ನು ಬಿಚ್ಚಿಟ್ಟರೂ ಯಾವುದೇ ಸ್ಪಂದನೆ ಮತ್ತು ರಕ್ಷಣೆ ಇಲ್ಲದಾಗಿದೆ ಎಂದು ಆರೋಪಿಸಿದರು. ಹಾರಂಗಿ ಸೇರಿದಂತೆ ಅಪಾಯಕಾರಿ ಕಟ್ಟೆಗಳನ್ನು ತೆರವುಗೊಳಿಸಬೇಕು. ಕೊಡಗು ಜಿಲ್ಲೆಯಲ್ಲಿರುವ ಮಾರಕ ಕಟ್ಟೆಗಳು ಮತ್ತು ರೆಸಾರ್ಟ್ಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಆರ್ಥಿಕವಾಗಿ ಹಿಂದುಳಿದಿರುವ ಕೊಡವರು ಸ್ವಾಭಿಮಾನದಿಂದ ಜೀವನ ಸಾಗಿಸಲು ಬ್ಯಾಂಕ್ ಮತ್ತು ಸಹಕಾರ ಸಂಘಗಳು ಸಾಲದ ಸೌಲಭ್ಯ ನೀಡಬೇಕು ಎಂದು ನಾಚಪ್ಪ ಒತ್ತಾಯಿಸಿದರು. ಕೊಡವ ಲ್ಯಾಂಡ್ ನ್ನು ಉಳಿಸಿಕೊಳ್ಳುವುದಕ್ಕಾಗಿ ಸಿಎನ್‌ಸಿ ಸಂಘಟನೆ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣ, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಆದರೆ ಅಧಿಕಾರದಲ್ಲಿರುವವರು ಹೋರಾಟದ ದಿಕ್ಕು ತಪ್ಪಿಸಿ ಜನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು, ಹೋಂಸ್ಟೇ ಮತ್ತು ಗೋದಾಮುಗಳ ನಿರ್ಮಾಣಕ್ಕೆ ಅನುಮತಿ ನೀಡದೆ ಸತಾಯಿಸಲು ಆರಂಭಿಸಿದ್ದಾರೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಾತೃಭೂಮಿ ಕೊಡವಲ್ಯಾಂಡ್ ಗೆ ಸಂಚಕಾರವಾಗಬಲ್ಲ ಬೃಹತ್ ಭೂಪರಿವರ್ತನೆಗೆ ಮಾತ್ರ ಗುಪ್ತವಾಗಿ ಅನುಮತಿ ನೀಡುತ್ತಿದ್ದಾರೆ. ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ ಸರ್ಕಾರವೇ ನೇರವಾಗಿ ಭೂಪರಿವರ್ತನೆಗೆ ಕುಮ್ಮಕ್ಕು ನೀಡುತ್ತಿದೆ.
ಕೊಡಗಿನಲ್ಲಿ ನಿರಂತರವಾಗಿ ಹೊರ ಪ್ರದೇಶದ ಬಂಡವಾಳಶಾಹಿಗಳಿಗೆ, ಕಾರ್ಪೋರೇಟ್ ವಲಯಕ್ಕೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ, ಅನಿವಾಸಿ ಭಾರತೀಯರಿಗೆ, ರೆಸಾರ್ಟ್ ಮಾಫಿಯಾಗಳಿಗೆ, ದೊಡ್ಡ ಉದ್ಯಮಿಪತಿಗಳಿಗೆ ಭೂಮಿಯನ್ನು ಮಿತಿ ಮೀರಿ ನೀಡಿದರೆ ಭವಿಷ್ಯತ್ತಿಗೆ ತೊಂದರೆಯಾಗಲಿದೆ. ಈ ಹಿಂದೆ 2018 ರಲ್ಲಿ ಸೂರ್ಲಬ್ಬಿ ನಾಡ್, ಮುತ್ತುನಾಡ್, ಪೊರಮಲೆನಾಡ್ ಮತ್ತು ಬದಿಗೇರಿನಾಡ್ ನಲ್ಲಿ ಭೀಕರ ಜಲಕಂಟಕದಿಂದ ಅನಾಹುತ ಸಂಭವಿಸಿತ್ತು, ಅಲ್ಲದೆ ಅನೇಕ ಮನೆಗಳು ನಾಶವಾಗಿದ್ದವು.
15 ವಷಗಳ ಹಿಂದೆ ಗಡಿನಾಡಿನ ಬಿಳಿಗೇರಿ ಭಾಗದಲ್ಲಿ ಸಂಭವಿಸಿದ ಭೂಕಂಪನದಿAದ ಬಾಚಿನಾಡಂಡ ಅಪ್ಪಾಜಿ ಕುಟುಂಬದ ಮನೆ ಸಂಪೂರ್ಣ ನಾಶವಾಗಿತ್ತು. ಇದೀಗ ಕೇರಳದ ವಯನಾಡಿನ ದುರಂತ ನಮ್ಮ ಮುಂದೆ ಇದ್ದು, ಮತ್ತೊಮ್ಮೆ ಈ ಅನಾಹುತ ಸಂಭವಿಸದAತೆ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ತರಬೇಕು. ಕೊಡಗು ಪ್ರದೇಶ ಬೆಟ್ಟಗುಡ್ಡ, ನದಿ, ತೊರೆಗಳಿಂದ ಕೂಡಿದ್ದು, ಅತ್ಯಂತ ಸೂಕ್ಷ್ಮತೆಯನ್ನು ಹೊಂದಿದೆ. ಆದ್ದರಿಂದ ಬಯಲುಸೀಮೆಯಂತೆ ಕೊಡಗಿನÀ ಭೌಗೋಳಿಕ ಸ್ಥಿತಿಗತಿಯನ್ನು ಪರಿಗಣಿಸಬಾರದು ಎಂದು ಆಗ್ರಹಿಸಿದರು. ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಹಾರಂಗಿ ಜಲಾಶಯ ಹಾಗೂ ದಕ್ಷಿಣಕೊಡಗಿನಲ್ಲಿ ಲಕ್ಷ್ಮಣ ತೀರ್ಥ ನದಿಗೆ ಕಟ್ಟಿರುವ ಕಟ್ಟೆಯಲ್ಲಿ ಹೂಳು ತುಂಬಿದ್ದು, ಇದು ಅಪಾಯದ ಮುನ್ಸೂಚನೆಯಾಗಿದೆ. ಜಲಾಶಯದ ಹೂಳು ತೆಗೆಯದೆ ಮತ್ತು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವುದರಿಂದ ಜಲನಾಳಗಳಿಗೆ ಹಾನಿಯಾಗಿ ಭೂಗರ್ಭ ಸೀಳಿ ಅನಾಹುತಗಳಿಗೆ ದಾರಿಯಾಗುವ ಸಾಧ್ಯತೆಗಳಿದೆ. ವಯನಾಡಿನಂತಹ ದುರಂತ ಕೊಡಗಿನಲ್ಲೂ ಸಂಭವಿಸಬಾರದೆಂದಾರೆ ಆಡಳಿತ ವ್ಯವಸ್ಥೆ ತಕ್ಷಣ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದರು. ಟೌನ್ ಶಿಪ್, ನಗರೀಕರಣ, ವಿಲ್ಲಾ, ರೆಸಾರ್ಟ್ಗಳ ನಿರ್ಮಾಣದಿಂದ ಕೊಡಗಿನಲ್ಲಿ ಜನಸಂಖ್ಯೆ ಹೆಚ್ಚಾಗಲಿದ್ದು, ಇದನ್ನು ತಡೆದೊಳ್ಳುವ ಶಕ್ತಿ ಇಲ್ಲಿನ ಭೂಪ್ರದೇಶಕ್ಕೆ, ಭೂದೇವಿಗೆ ಇಲ್ಲವಾದ ಕಾರಣ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮೂಲಕ ರೆಸಾರ್ಟ್ ಗಳು ದೈತ್ಯಾಕಾರದ ವಿಲ್ಲಾಗಳು, ಲೇಔಟ್ ಗಳು, ಮನೆಗಳು ಟೌನ್ ಶಿಪ್ ಗಳು, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸೇರಿದಂತೆ ವಾಣಜ್ಯ ಉದ್ದೇಶದ ಯೋಜನೆಗಳು ತಯಾರಾಗುತ್ತಿದೆ. ಇದು ಪವಿತ್ರ ಕೊಡವ ಲ್ಯಾಂಡ್ ನ ನಾಶಕ್ಕೆ ಕಾರಣವಾಗಬಹುದು. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
::: ಆ.29 ರಂದು ಜನಜಾಗೃತಿ :::
ಸಿಎನ್‌ಸಿ ವತಿಯಿಂದ ಆ.29 ಮೂರ್ನಾಡು, ಸೆ.9 ನಾಪೋಕ್ಲು ಹಾಗೂ ಸೆ.10 ರಂದು ಚೇರಂಬಾಣೆಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ಮಾಹಿತಿ ನೀಡಿದರು.
ಜನಜಾಗೃತಿ ಕಾರ್ಯಕ್ರಮದಲ್ಲಿ ಪ್ರಮುಖರಾದ ತೀತಿರ ಮನು, ಅಜ್ಜಿಕುಟ್ಟೀರ ಲೋಕೇಶ್, ಬಾಚರಣಿಯಂಡ ಚಿಪ್ಪಣ್ಣ, ಮಚ್ಚಮಾಡ ಪ್ರಕಾಶ್, ಪೆಮ್ಮಣಮಾಡ ಪ್ರಭು, ಕೈಬಿಲಿರ ದೀಪು, ತೀತಿರ ರಘು, ತಡಿಯಂಗಡ ಜಯರಾಜ್, ಮುಕ್ಕಾಟಿರ ನವೀನ್, ಕೊಂಗAಡ ಸುರೇಶ್, ಅಜ್ಜಿಕುಟ್ಟೀರ ಮುದ್ದಪ್ಪ, ಜಮ್ಮಡ ಮೋಹನ್, ಕಿರಿಯಮಾಡ ಶೆರಿನ್, ಕಾಂಡೆರ ಸುರೇಶ, ಪಾರ್ವಂಗಡ ನವೀನ್, ಅಬ್ಬೇಂಗಡ ಮಾಲೆ, ತೀತಿರ ಕುಶಾಲಪ್ಪ, ಅಜ್ಜಿಕುಟ್ಟೀರ ಬೋಪಣ್ಣ, ಚೆಪ್ಪುಡಿರ ಪಾರ್ಥ, ತಾತೀರ ವಾಸು, ಹೊಟ್ಟೆಂಗಡ ತಿಮ್ಮಯ್ಯ, ಕಳ್ಳಿಚಂಡ ಅಪ್ಪಣ್ಣ, ಮಲ್ಲಪನೇರ ಕಿಶೋರ್, ಚೋಡುಮಾಡ ರಾಜಾ, ಮಚ್ಚಮಾಡ ಪೊನ್ನಣ್ಣ, ಗುಡಿಯಂಗಡ ಚೆಂಗುಮಣಿ, ಗುಡಿಯಂಗಡ ರಾಜಾ, ಕಾಳಮಾಡ ಬೋಸು, ತೀತಿರ ಪ್ರಜ್ವಲ್, ಕೋಟ್ರಂಗಡ ಪ್ರಭು, ಕಳ್ಳಂಗಡ ರಾಯ್, ಕೊಕ್ಕಂಡ ಜಾಲಿ, ಕೋಟ್ರಂಗಡ ಅರವಿ ಕುಶಾಲಪ್ಪ, ಅಲ್ಲಾರಂಡ ರಂಜು, ಮಾಣಿಪಂಡ ಉಮೇಶ್, ಮತ್ರಂಡ ನರೇಂದ್ರ, ಮುಕ್ಕಾಟಿರ ರಿತೇಶ್, ಮಾಚಿಮಾಡ ಕಾಶಿ, ಅಯ್ಯಮಾಡ ಬೋಸು, ಸುಳ್ಳಿಮಾಡ ಭರತ್, ಚೊಟ್ಟೆಯಂಡಮಾಡ ದೇವಯ್ಯ, ಚೇರಂಡ ಅಯ್ಯಪ್ಪ, ಚಿಮ್ಮಣಮಾಡ ದಿನೇಶ್, ಕೈಬಿಲಿರ ಬೋಪಣ್ಣ ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡರು.