ಮಡಿಕೇರಿ ಆ.22 NEWS DESK : ಕೇಂದ್ರ ಸರ್ಕಾರದ ಆಲಿಮ್ಕೋ ಸಂಸ್ಥೆಯಿಂದ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ವಿವಿಧ ಸಾಧನ ಸಲಕರಣೆ ನೀಡುವ ಸಂಬಂಧ ಮೌಲ್ಯಮಾಪನ ಶಿಬಿರ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರ ಮೌಲ್ಯಮಾಪನ ತಪಾಸಣಾ ಶಿಬಿರಕ್ಕೆ ಹಾಜರಾಗಲು ತಾಲ್ಲೂಕುವಾರು ದಿನಾಂಕ ನಿಗದಿಪಡಿಸಲಾಗಿದೆ.
ಆಗಸ್ಟ್, 27 ರಂದು ಕುಶಾಲನಗರ ತಾಲ್ಲೂಕಿಗೆ ಕುಶಾಲನಗರ ರೋಟರಿ ಸಭಾಂಗಣ, ಆಗಸ್ಟ್, 28 ರಂದು ಸೋಮವಾರಪೇಟೆ ತಾಲ್ಲೂಕಿಗೆ ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣ, ಆಗಸ್ಟ್, 29 ರಂದು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿಗೆ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಾಗೂ ಆಗಸ್ಟ್, 30 ಮತ್ತು 31 ರಂದು ಮಡಿಕೇರಿ ತಾಲ್ಲೂಕಿಗೆ ಮಡಿಕೇರಿಯ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಭಾಂಗಣದಲ್ಲಿ ಸಾಧನ ಸಲಕರಣೆಗಳನ್ನು ನೀಡುವ ಸಂಬಂಧ ಮೌಲ್ಯಮಾಪನ ಶಿಬಿರ ನಡೆಯಲಿದೆ.
ಈ ದಿನಾಂಕಗಳಂದು ಶಿಬಿರಗಳಲ್ಲಿ ಭಾಗವಹಿಸುವ ವಿಶೇಷಚೇತನರು ಯುಡಿಐಡಿ ಕಾರ್ಡ್, ಆಧಾರ್ ಕಾರ್ಡ್ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಥವಾ ಬಿಪಿಎಲ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಹಿರಿಯ ನಾಗರಿಕರು ಆಧಾರ್ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ, ಆದಾಯ ಪ್ರಮಾಣ ಪತ್ರ ಅಥವಾ ಬಿಪಿಎಲ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ತರಬೇಕಾಗಿ ಹಾಗೂ ಹೆಸರನ್ನು ನೋಂದಾಯಿಸಿಕೊಳ್ಳಲು ಎಂಆರ್‍ಡಬ್ಲ್ಯುಗಳಾದ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನ ಹರೀಶ್ ಟಿ.ಆರ್ ಮೊ.ಸಂ. 8861428931, ವಿರಾಜಪೇಟೆ ತಾಲೂಕಿನವರು ಪ್ರಥನ್ ಕುಮಾರ್ ಸಿ.ಬಿ ಮೊ.ಸಂ-9900883654 ಹಾಗೂ ಮಡಿಕೇರಿ ತಾಲ್ಲೂಕಿನವರು ರಾಜೇಶ್ ಮೊ.ಸಂ–8073192914 ಸಂಖ್ಯೆಗಳನ್ನು ಹಾಗೂ ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ.08272-295829 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.