ಮಡಿಕೇರಿ ಆ.22 NEWS DESK : ರಾಜ್ಯದ ಭೂಪಟದಲ್ಲಿ ತನ್ನದೇ ಆದ ಜೀವವೈವಿಧ್ಯತೆಯನ್ನು ಹೊಂದಿರುವ ಕೊಡಗು ಜಿಲ್ಲೆಗೆ ಪ್ರತ್ಯೇಕವಾದ ವನ್ಯಜೀವಿ ಮತ್ತು ಭೂ ಹಿಡುವಳಿ ದಾಖಲೀಕರಣಕ್ಕೆ ಪೂರಕವಾಗಿ ಪ್ರತ್ಯೇಕ ಯೋಜನೆಯೊಂದನ್ನು ರೂಪಿಸುವಂತೆ, ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರಿಗೆ ಕೊಡವಾಮೆರ ಕೊಂಡಾ ಸಂಘಟನೆ ಮನವಿ ಸಲ್ಲಿಸಿದೆ.
ಸಂಕೇತ್ ಪೂವಯ್ಯ ಅವರ ವಿರಾಜಪೇಟೆ ನಿವಾಸದಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆಯ ಅದ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ನೇತೃತ್ವದಲ್ಲಿ ಸಂಕೇತ್ ಪೂವಯ್ಯ ಅವರನ್ನು ಪುಸ್ತಕ ನೀಡುವ ಮೂಲಕ ಅಭಿನಂದಿಸಿ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಂಕೇತ್ ಪೂವಯ್ಯ ಅವರು, ಸಂಘಟನೆಯೊಂದಿಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ, ಕರ್ನಾಟಕದಲ್ಲಿ ವಿಭಿನ್ನ ಮೇಲ್ಮೈ ಲಕ್ಷಣ ಹೊಂದಿರುವ ಕೊಡಗು, ಪ್ರಾಕೃತಿಕವಾಗಿ, ಬೌಗೋಳಿಕವಾಗಿಯೂ ಇತರ ಎಲ್ಲಾ ಜಿಲ್ಲೆಗಳಿಗಿಂತಲೂ ಭಿನ್ನ. ಹಾಗೇ ಇಲ್ಲಿಯ ಜನ, ಜಾನುವಾರು, ಕೃಷಿ, ತೋಟಗಾರಿಕೆ ಮತ್ತು ವನ್ಯ ಜೀವ ಸಂಕುಲವೂ ವಿಭಿನ್ನವೇ. ಕೊಡಗಿನ ಮೂಲ ನಿವಾಸಿಗಳು ತಲೆತಲಾಂತರದಿಂದ ಅರಣ್ಯ ಹಾಗೂ ಭೂಮಿಯ ಮಹತ್ವವನ್ನು ಅರಿತು, ತಮ್ಮದೇ ಆದ ಭಾವನಾತ್ಮಕ ಶೈಲಿಯಲ್ಲಿ ಪರಿಸರವನ್ನ ರಕ್ಷಿಸಿಕೊಂಡು ಬರುತ್ತಿದ್ದಾರೆ. ಜೊತೆಗೆ ತಮ್ಮ ಬೆಳೆ ಮತ್ತು ಜೀವಗಳನ್ನೂ ಕೂಡ ಅಷ್ಟೇ ಪ್ರಾಮುಖ್ಯತೆಯಿಂದ ಕಾಪಾಡಿಕೊಂಡಿದ್ದಾರೆ. ಆದರೆ ಇತ್ತೀಚಿಗಿನ ಸರ್ಕಾರಗಳ ಹಲವು ನಿಯಮಗಳಿಂದಾಗಿ ಮತ್ತು ನಿರಂತರವಾಗಿ ಭೂ ಒತ್ತುವರಿ, ವಲಸೆ ಮತ್ತು ಪ್ರಕೃತಿಗೆ ವಿರುದ್ದವಾದ ಅಭಿವೃದ್ದಿ ಕಾರ್ಯಗಳಿಂದ ಕೊಡಗಿನಲ್ಲಿ ಮಾನವ, ವನ್ಯ ಪ್ರಾಣಿ ಸಂಘರ್ಷಗಳು ಹೆಚ್ಚಾಗಿದ್ದು, ನಿರಂತರ ಜೀವ ಹಾನಿ ನಡೆಯುತ್ತಿದೆ. ದಕ್ಷಿಣ ಕೊಡಗು ಭಾಗದಲ್ಲಿ ಹುಲಿ ಆನೆಯ ಸಮಸ್ಯೆಯಾದರೆ ಉತ್ತರ ಕೊಡಗು ಭಾಗದಲ್ಲಿ ಕಾಡುಹಂದಿಯ ಕಾರಣದಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಜೊತೆಗೆ ಕೊಡಗಿನಲ್ಲಿ ಉಂಟಾಗಿರುವ ಭೂ ಮಾಲಿಕತ್ವ, ಜಮ್ಮ ಹಿಡುವಳಿ ಗೊಂದಲ, ಅತಿಯಾದ ವಾಣಿಜ್ಯೀಕರಣ, ಯುವ ಸಮುದಾಯವನ್ನು ಕೃಷಿಯ ಜೊತೆಗೆ ಕೊಡಗಿನಿಂದಲೂ ವಿಮುಖರಾಗುವಂತೆ ಮಾಡಿದೆ. ಅರಣ್ಯ ವ್ಯಾಪ್ತಿಯಲ್ಲಿ, ಕೊಡಗಿನ ವಾತವಾರಣಕ್ಕೆ ಪೂರಕವಾದ, ವನ್ಯಪ್ರಾಣಿಗಳಿಗೆ ಅಗತ್ಯ ಆಹಾರ ಒದಗಿಸಬಲ್ಲ ಮರಗಳನ್ನು ಬೆಳೆಸುವ ಜೊತೆಗೆ ಕುಡಿವ ನೀರಿನ ವ್ಯವಸ್ಥೆಯನ್ನು ಅರಣ್ಯದೊಳಗೇ ಒದಗಿಸಿದರೆ, ವನ್ಯ ಪ್ರಾಣಿಗಳು ನಾಡಿಗೆ ಬರುವುದನ್ನು ತಡೆಯಬಹುದು. ಹಾಗೇ ಜಮ್ಮ ಮತ್ತು ಸಾಗು ಭೂಮಿಯಲ್ಲಿ ಇರುವ ಪಟ್ಟೆದಾರಿಕೆ ಮತ್ತು ಆರ್.ಟಿ.ಸಿ. ಗೊಂದಲವನ್ನು ಸರಿಪಡಿಸಿದರೆ, ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಕೃಷಿ, ಹೈನುಗಾರಿಕೆಯ ಕಾರ್ಯದಲ್ಲಿ ಯುವಕರು ಆಸಕ್ತಿಯಿಂದ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ. ತಾವು ಈ ವಿಚಾರಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೊಡಗಿನ ರೈತರ ಹಿತದೊಂದಿಗೆ, ವನ್ಯಜೀವಿ, ಪರಿಸರದ ಉಳಿವಿಗೂ ಪ್ರತೈಕವಾದ ಯೋಜನೆಯನ್ನು ಜಾರಿಗೊಳಿಸಬೇಕೆಂದು ಮನವಿ ಮಾಡಿದರು. ನಂತರ ಮಾತನಾಡಿದ ಸಂಕೇತ್ ಪೂವಯ್ಯ ಅವರು, ತಮ್ಮ ಬೇಡಿಕೆ ಈ ನೆಲದ ಉಳಿವಿಗೆ ಪೂರಕವಾಗಿದ್ದು, ಇದರ ಅನುಷ್ಠಾನ ಅನಿವಾರ್ಯ ಅಗತ್ಯವಾಗಿದೆ. ಈ ವಿಚಾರವಾಗಿ, ಮುಖ್ಯಮಂತ್ರಿಗಳು, ಸಚಿವರು ಮತ್ತು ಶಾಸಕರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಎಲ್ಲರೂ ಒಟ್ಟಾಗಿ ಕೊಡಗಿನ ಒಳಿತಿಗೆ ಶ್ರಮಿಸೋಣ ಎಂದರು. ಸಭೆಯಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆಯ ಕಾರ್ಯದರ್ಶಿ ಕುಂಞಿರ ಗಿರೀಶ್ ಭೀಮಯ್ಯ, ಸಿ.ಎನ್.ಸಿ. ಅಧ್ಯಕ್ಷ ನಂದಿನೆರವಂಡ ನಾಚಪ್ಪ, ಕರಿನೆರವಂಡ ಡ್ಯಾನಿಕುಶಾಲಪ್ಪ, ಕರಿನೆರವಂಡ ಜಿತನ್ ಸೇರಿದಂತೆ ಇತರರು ಇದ್ದರು.









