ಮಡಿಕೇರಿ ಆ.23 NEWS DESK : ಕೊಡಗಿನ ಆದಿಕವಿ, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಗಳು ಜನ್ಮತಾಳಿ ಇದೇ ಸೆಪ್ಟೆಂಬರ್ 21 ಕ್ಕೆ 157 ವರ್ಷಗಳು. ಅಪ್ಪಚ್ಚ ಕವಿಗಳ ಜನ್ಮೋತ್ಸವವನ್ನು ‘ಕೊಡವ ಸಾಹಿತ್ಯ ನಾಳ್’ ಹೆಸರಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಚರಿಸಲು ತೀರ್ಮಾನಿಸಿದೆ. ಇದರ ಪ್ರಯುಕ್ತ ಹೊರ ತರಲಾಗುವ ಕವನ ಪುಸ್ತಕವನ್ನು ‘ಕೊಡವ ಕವನ ಮೊತ್ತೆ’ ಎಂದು ಹೆಸರಿಡಲಾಗಿದೆ. ಈ ‘ಕವನ ಮೊತ್ತೆ’ಯು 157 ವಿವಿಧ ಕವಿಗಳ ಭಾವನೆಯ ಕವನಗಳಿಂದ ಅಲಂಕೃತಗೊಂಡಿರುವಂತೆ ಅಕಾಡೆಮಿ ಬಯಸಿದೆ.
ಕವಿಯ ಮನಸ್ಸಿಗೆ ಜಾತಿ-ಭೇದಗಳಿರದು. ಅಂತೆಯೇ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಪ್ಪಚ್ಚಕವಿಗಳ ಸ್ಮರಣಾರ್ಥ ಹೊರತರಲಾಗುವ ಕೊಡವ ಕವನ ಮೊತ್ತೆಗೆ ಯಾವುದೇ ಜಾತಿ-ಮತ-ಭೇದವಿಲ್ಲದ ಮನಸ್ಸುಗಳಿಂದ ಕೊಡವ ಭಾಷೆಯಲ್ಲಿ ಕವನಗಳನ್ನು ಆಹ್ವಾನಿಸಲಾಗಿದೆ. 20 ಗೆರೆಗಳಿಗೆ ಮೀರದ, ಪ್ರತೀ ಗೆರೆಗಳು 6-7 ಶಬ್ಧಗಳಿಗೆ ಸೀಮಿತವಾಗಿರುವ, ನಾಡು-ನುಡಿ, ಸಾಮರಸ್ಯ, ಸಹಬಾಳ್ವೆ, ಪ್ರಕೃತಿ, ಆಧುನಿಕತೆ, ಇತಿಹಾಸ, ಪುರಾಣಕ್ಕೆ ಸಂಬಂಧಿತವಾಗಿರುವ, ಯಾರದ್ದು ಭಾವನೆಗಳಿಗೆ, ಮತ-ಧರ್ಮಗಳಿಗೆ ಘಾಸಿಉಂಟು ಮಾಡದಿರುವ ಕವಿ ಮನಸ್ಸುಗಳು ತಮ್ಮ ಕವನಗಳನ್ನು ಅಕಾಡೆಮಿ ಕಚೇರಿಗೆ ತಲುಪಿಸಲು ಸೆಪ್ಟೆಂಬರ್ 10 ಕೊನೆ ದಿನವಾಗಿದೆ. ಒಬ್ಬರು ಒಂದೇ ಕವನ ಕಳುಹಿಸುವುದು. ಅಕಾಡೆಮಿ ಗೊತ್ತು ಪಡಿಸಿದಂತೆ ಪ್ರಕಟಿತ ಕವನಗಳಿಗೆ ಸಂಭಾವನೆ ನೀಡಲಾಗುವುದು. ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರ ಹಾಗೂ ಬ್ಯಾಂಕ್ ಪಾಸ್‍ಪುಸ್ತಕದ ಪ್ರತಿಯೊಂದಿಗೆ ಕವನವನ್ನು ಅಧ್ಯಕ್ಷರು/ ರಿಜಿಸ್ಟ್ರಾರ್ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಸ್ಕೌಡ್ಸ್ ಭವನ, ಮ್ಯಾನ್ಸ್ ಕಾಂಪೌಂಡ್ ಮಡಿಕೇರಿ-571201 ಅಥವ ವಾಟ್ಸಾಪ್ ಸಂಖ್ಯೆ: 8105341332 ಕಳುಹಿಸಿಕೊಡುವಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಹಾಗೂ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ.ಗಿರೀಶ್ ತಿಳಿಸಿದ್ದಾರೆ.