ವಿರಾಜಪೇಟೆ NEWS DESK ಆ.24 : ಕೊಲ್ಕೊತ್ತದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿತು.
ಪಟ್ಟಣದ ಗಡಿಯಾರ ಕಂಬದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಅತ್ಯಾಚಾರ ಮತ್ತು ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಮಾರಾಟಿ ಮಾತನಾಡಿ ಕೊಲ್ಕೊತ್ತ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ದೇಶದಲ್ಲಿ ಯುವತಿಯರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಡೀ ಸಮಾಜ ತಲೆ ತಗ್ಗಿಸುವಂತ್ತಾಗಿದೆ. ಇನ್ನು ಮುಂದೆ ಈ ರೀತಿಯ ಕೃತ್ಯಗಳು ನಡೆಯದಂತೆ ಸರ್ಕಾರ ಎಚ್ಚರ ವಹಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಎಬಿವಿಪಿ ಜಿಲ್ಲಾ ಪ್ರಮುಖ್ ಕೌಶಲ್ಯ ಕೆ.ಹೆಚ್ ಮಾತನಾಡಿ ಕೊಲ್ಕೊತ್ತ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಜಿಲ್ಲಾ ಸಂಚಾಲಕ ಕೀರ್ತನ್ ಕಾವೇರಪ್ಪ, ಸಹ ಸಂಚಾಲಕ ಮೋನಿಶ್ ಮಂದಣ್ಣ, ತಾಲೂಕು ಸಂಚಾಲಕಿ ರಕ್ಷಿತ ಬಿ.ಎಸ್, ಮೋಹಿತ್ ಬಿ.ಯು. ನಿತಿನ್ ಬಿದ್ದಪ್ಪ ಎಂ.ಯು, ಭೂಮಿಕ, ರೋಷನ್, ಮನೀಶ್ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.









