ಮಡಿಕೇರಿ ಆ.24 NEWS DESK : ಬೆಂಗಳೂರಿನ ಪ್ರಣವ್ ಫೌಂಡೇಶನ್‍ನ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಮಡಿಕೇರಿ ತಾಲ್ಲೂಕಿನ ಚೆಂಬು ಪಂಚಾಯ್ತಿಯ ಅತ್ಯಾಡಿ ಗ್ರಾಮದ ಜನರಿಗೆ ಉಂಬಾಳೆ ಹೊಳೆ ದಾಟಲು ನೂತನ ತೂಗು ಸೇತುವೆ ‘ಪ್ರಣವ ಸೇತು’ವನ್ನು ನಿರ್ಮಿಸಿಕೊಡಲಾಗಿದ್ದು, ಆ.25 ರಂದು ಸೇತುವೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಶನ್‍ನ ಮಾಧ್ಯಮ ಸಂಚಾಲಕ ಕಾರ್ತಿಕ್ ಭಟ್, ಕೊಡಗು ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಶನ್, ಟೀಮ್ 12 ಆಫ್ ರೋಡರ್ಸ್, ಬೆಂಗಳೂರಿನ ಮಲ್ನಾಡ್ ಯೂತ್ ಅಸೋಸಿಯೇಶನ್‍ನ ಸಹಯೋಗದಲ್ಲಿ ಪ್ರಣವ್ ಫೌಂಡೇಶನ್‍ನ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಅತ್ಯಾಡಿ ಗ್ರಾಮದ ಜನರಿಗೆ ಉಂಬಾಳೆ ಹೊಳೆ ದಾಟಲು ನೂತನ ಕಾಲು ಸೇತುವೆಯನ್ನು ನಿರ್ಮಿಸಿಕೊಡಲಾಗಿದ್ದು, ಅಂದು ಬೆಳಿಗ್ಗೆ 11.30 ಗಂಟೆಗೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಅತ್ಯಾಡಿ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ತೂಗು ಸೇತುವೆಯನ್ನು ಮೈಸೂರು ಲೋಕಸಭಾ ಕೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೆÇನ್ನಣ್ಣ, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಹಾಗೂ ಅತ್ಯಾಡಿ ಗ್ರಾಮಸ್ಥರು ಸಂಪೂರ್ಣ ಬೆಂಬಲದೊಂದಿಗೆ ನಿರ್ಮಿಸಲಾಗಿದೆ. ತೂಗು ಸೇತುವೆಯನ್ನು ಪದ್ಮಶ್ರೀ ಗಿರೀಶ್ ಭಾರದ್ವಾಜ ಮತ್ತು ತಂಡದವರು ನಿರ್ಮಿಸಿರುವುದಾಗಿ ಮಾಹಿತಿ ನೀಡಿದರು.
ತೂಗು ಸೇತುವೆ ಪ್ರಣವ ಸೇತು ನಿರ್ಮಾಣ : ಚೆಂಬು ಗ್ರಾಮ ಪಂಚಾಯ್ತಿಯ ಅತ್ಯಾಡಿ ಗ್ರಾಮದಲ್ಲಿ ಮುಂಗಾರಿನ ಸಂದರ್ಭ ಉಂಬಾಳೆ ಹೊಳೆ ತುಂಬಿ ಹರಿದು ಇಡೀ ಗ್ರಾಮ ದ್ವೀಪವಾಗಿ ಬದಲಾಗುತ್ತದೆ. 2024 ರ ಮೇ ತಿಂಗಳ ಕೊನೆಯ ವಾರದಲ್ಲಿ ಪ್ರಣವ್ ಫೌಂಡೇಶನ್ ತಂಡಕ್ಕೆ ಈ ಸಮಸ್ಯೆಯ ಕುರಿತು ತಿಳಿಯಿತು. ಜೂನ್ 1 ರಂದು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ನೈಜ ಪರಿಚಯ ಮಾಡಿಕೊಳ್ಳಲಾಯಿತು. ಬಳಿಕ ಕೆಲವು ತಜ್ಞರು ಹಾಗೂ ಸ್ಥಳೀಯರ ಜೊತೆಗಿನ ಮಾತುಕತೆಯಿಂದ, ಇದಕ್ಕೆ ತಾತ್ಕಾಲಿಕವಾಗಿ ಕಾಲು ಸೇತುವೆ ನಿರ್ಮಿಸಲು ಸಾಧ್ಯವಿದೆ ಎಂದು ತಿಳಿದುಬಂದುದಾಗಿ ತಿಳಿಸಿದರು. ಅದಕ್ಕಾಗಿ ಪ್ರಣವ್ ಫೌಂಡೇಶನ್ ತೂಗುಸೇತುವೆಗಳ ತಜ್ಞರಾದ ಪದ್ಮಶ್ರೀ ಗಿರೀಶ್ ಭಾರದ್ವಾಜ್ ತಂಡವನ್ನು ಸಂಪರ್ಕಿಸಿತು. ಈ ತಂಡ ಪ್ರಣವ್ ಫೌಂಡೇಶನ್ನ ಮನವಿಗೆ ಕೂಡಲೇ ಸ್ಪಂದಿಸಿ ಜೂ.17 ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಳಿಕ ಯೋಜನೆ ರೂಪಿಸಲಾಯಿತು. ಜೂ.25 ರಂದು ಪ್ರಣವ್ ಫೌಂಡೇಶನ್ ಟ್ರಸ್ಟಿಗಳು ಹಾಗೂ ಸದಸ್ಯರು ಕೊಡಗು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಯೋಜನೆ ಕುರಿತು ಮಾಹಿತಿ ಹಾಗೂ ಮನವಿ ಪತ್ರ ಸಲ್ಲಿಸಿ ಅನುಮತಿ ಪಡೆದುಕೊಂಡಿತೆಮದು ಮಾಹಿತಿಯನ್ನಿತ್ತರು. ನಂತರ ಆ.10 ರಂದು ಕಾಲುಸೇತುವೆಯ ಕಾಮಗಾರಿ ಆರಂಭವಾಯಿತು.ಆ.22 ಕ್ಕೆ ಸೇತುವೆ ನಿರ್ಮಾಣ ಹಾಗೂ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಇದೀಗ ಉದ್ಘಾಟನೆಗೆ ಸಜ್ಜಾಗಿದೆಯೆಂದು ತಿಳಿಸಿದರು. ಉಕ್ಕಿನಿಂದ ಮಾಡಿರುವ ತೂಗು ಸೇತುವೆ 24 ಮೀಟರ್ ಉದ್ದವಿದ್ದು, 0.75 ಮೀಟರ್ ಅಗಲವಿದೆ. ಒಂದು ಬಾರಿಗೆ 10 ಮಂದಿ ನಿಲ್ಲಬಹುದಾಗಿದ್ದು, 5 ವರ್ಷ ಬಾಳಿಕೆ ಬರಲಿದೆ. ಸರ್ಕಾರದಿಂದ ಇಲ್ಲಿ ಶಾಶ್ವತವಾಗಿ ಸೇತುವೆ ನಿರ್ಮಾಣದ ಯೋಜನೆ ಪ್ರಗತಿಯಲ್ಲಿದ್ದು, ಅದು ಕಾರ್ಯಗತವಾಗುವವರೆಗೆ ತೂಗು ಸೇತುವೆ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲಕರವಾಗಲಿದೆಯೆಮದು ಹೇಳಿದರು. ಪ್ರಣವ್ ಫೌಂಡೇಶನ್ ಟ್ರಸ್ಟಿ ಮಂಜುನಾಥ್ ಭಟ್ ಮಾತನಾಡಿ, 2020ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಪ್ರಣವ್ ಫೌಂಡೇಶನ್, ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಕೆಲಸಗಳನ್ನು ಮಾಡುತ್ತಿದೆ. 2020 ರ ಕೋವಿಡ್ ಸಮಯಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ 50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ನಿರ್ಮಾಣದಿಂದ ಪ್ರಣವ್ ಫೌಂಡೇಶನ್‍ನ ಸಾಮಾಜಿಕ ಕಾರ್ಯ ಆರಂಭವಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕುಹಳ್ಳಿಗಳಲ್ಲಿ ಎಲೆಕ್ಟ್ರಿಕ್ ವಾಹನದ ಮೂಲಕ ಕಸ ವಿಲೇವಾರಿ, ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ 120 ರೋಗಿಗಳಿಗೆ ನೆರವಾಗುವ ಡಯಾಲಿಸಿಸ್ ಕೇಂದ್ರ ನಿರ್ಮಾಣ, ಗ್ರಾಮೀಣ ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕ ಅಳವಡಿಕೆ, ಕೊಡಗು, ದಕ್ಷಿಣ ಕನ್ನಡ, ಬೆಂಗಳೂ ನಗರ ಮೊದಲಾದ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಶಾಲಾ ಕಾರ್ಯಕ್ರಮದಡಿ ಟಿವಿ ಅಳವಡಿಕೆ, ಪ್ರತಿ ವರ್ಷ ಗುರುವಂದನ ಕಾರ್ಯಕ್ರಮದ ಮೂಲಕ ಸಾಧಕ ಶಿಕ್ಷಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮ ಮತ್ತು ಜನೋಪಯೋಗಿ ಯೋಜನೆಗಳನ್ನು ಪ್ರಣವ್ ಫೌಂಡೇಶನ್ ಮಾಡುತ್ತಾ ಬಂದಿರುವುದಾಗಿ ತಿಳಿಸಿದರು. ಸರ್ಕಾರಿ ಶಾಲೆಯ ಮಕ್ಕಳಿಗೆ ಕಳೆದ ವರ್ಷ ಪುಸ್ತಕ, ಯೋಜನೆಯಡಿ 2,500 ಪುಸ್ತಕ ಕಿಟ್‍ಗಳನ್ನು ವಿತರಿಸಿದ್ದು, ಈ ವರ್ಷ 5 ಸಾವಿರ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಕೊಡಗು ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳಲ್ಲೂ ಇತ್ತೀಚೆಗೆ ಪುಸ್ತಕ ಕಿಟ್ ವಿತರಣೆಯಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಣವ್ ಫೌಂಡೇಶನ್‍ನ ಟ್ರಸ್ಟ್‍ಗಳಾದ ಮಹೇಶ್, ಎನ್. ನೇತ್ರ, ತೂಗು ಸೇತುವೆ ನಿರ್ಮಾಣದ ಸಂಚಾಲಕರಾದ ದೇವಿ ಪ್ರಸಾದ್, ಗ್ರಾಮಸ್ಥರಾದ ಕಿರಣ್ ಅಟ್ಲೂರು ಉಪಸ್ಥಿತರಿದ್ದರು.