ವಿರಾಜಪೇಟೆ ಸೆ.3 NEWS DESK : ಪೆರಂಬಾಡಿ ನಿವಾಸಿ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಬಿ.ಎಂ.ಗಣೇಶ್ ತನ್ನದೇ ಸ್ವಂತ ಖರ್ಚಿನಲ್ಲಿ ಮೂರು ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆಯನ್ನು ಒದಗಿಸಿ ಮಾದರಿಯಾಗಿದ್ದಾರೆ. ವಿರಾಜಪೇಟೆ ಸಮೀಪದ ತೆರ್ಮೆಕಾಡು ಪೈಸಾರಿ ನಿವಾಸಿಗಳಾದ ರಾಜೇಶ್, ದೇವಿ ಹಾಗೂ ಎರಡನೇ ಪೆರಂಬಾಡಿ ನಿವಾಸಿ ಕಾಳ ಅವರ ಮನೆಗೆ ಉಚಿತ ವಿದ್ಯುತ್ ಸಂಪರ್ಕವನ್ನು ಒದಗಿಸಲು ನೆರವಾಗಿದ್ದಾರೆ. ಈ ಮೂರು ಮನೆಗಳಲ್ಲಿಯೂ ವಿದ್ಯುತ್ ಸಂಪರ್ಕವಿರಲಿಲ್ಲ. ಮಾತ್ರವಲ್ಲದೆ ಮನೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿದ್ದರು. ವಿದ್ಯುತ್ ವ್ಯವಸ್ಥೆ ಇಲ್ಲದೇ ಅವರ ವ್ಯಾಸಂಗಕ್ಕೆ ಅಡಚಣೆ ಉಂಟಾಗುತಿತ್ತು. ಇದನ್ನು ಅರಿತ ಬಿ.ಎಂ.ಗಣೇಶ್, ಅಂದಾಜು 35,000 ರೂ ವೆಚ್ಚದಲ್ಲಿ ವಿದ್ಯುತ್ ಸಂಪರ್ಕವನ್ನು ಮೂರು ಮನೆಗಳಿಗೂ ಒದಗಿಸಿ ಮಾನವೀಯತೆಯನ್ನು ಮೆರೆದಿದ್ದಾರೆ. ಈ ಹಿಂದೆಯೂ ಇವರು ಕೆದಮುಳ್ಳೂರು ಗ್ರಾಮದಲ್ಲಿ ಸ್ವಂತ ಹಣದಲ್ಲಿ ಬಡವರಿಗೆ ಮನೆಯನ್ನು ನಿರ್ಮಿಸಿಕೊಟ್ಟು ಸಹಾಯ ಹಸ್ತ ನೀಡಿದ್ದರು. ವಿದ್ಯುತ್ ಸಂಪರ್ಕ ಇಲ್ಲದಿದ್ದರಿಂದ ಮನೆಯವರಿಗೆ ಹಾಗೂ ಮಕ್ಕಳಿಗೆ ತೊಂದರೆಯಾಗುತಿತ್ತು. ಅವರಿಗೆ ನೆರವು ನೀಡಬೇಕು ಎಂದೆನಿಸಿ ನಾನು ಹಾಗೂ ನನ್ನ ತಂಡದವರು ವಿದ್ಯುತ್ ಸಂಪರ್ಕ ಒದಗಿಸಿದ್ದೇವೆ ಎಂದು ಗಣೇಶ್ ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ವಿರಾಜಪೇಟೆ ಚೆಸ್ಕಾಂ ಇಂಜಿನಿಯರ್ ಸೋಮೇಶ್, ಸ್ಥಳೀಯರಾದ ಜನಾರ್ಧನ, ಸುರೇಶ್, ದೀಕ್ಷಿತ ಹಾಗೂ ಮನೆಯ ಮಾಲೀಕರು ಹಾಜರಿದ್ದರು.









