ಮಡಿಕೇರಿ NEWS DESK ಸೆ.3 : ರಾಜ್ಯ ಸರ್ಕಾರ ಅರಣ್ಯ ಮತ್ತು ಕಂದಾಯ ಇಲಾಖೆಯ ಮೂಲಕ ಹೊರಡಿಸಿರುವ ಕೊಡಗಿನ ಜನರು ಹಾಗೂ ಬೆಳೆಗಾರರಿಗೆ ಮಾರಕವಾಗಬಲ್ಲ ಸುತ್ತೋಲೆಗಳನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸುತ್ತೋಲೆಗಳ ಮೂಲಕ ಕೊಡಗಿನ ಜನರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ರೈತರು ಕಳೆದ 30- 40 ವರ್ಷಗಳಿಂದ ಕೃಷಿ ಮಾಡಿ ಬದುಕು ಸಾಗಿಸುತ್ತಿರುವ ಸಿ ಮತ್ತು ಡಿ ಭೂಮಿಯನ್ನು ವಶಕ್ಕೆ ಪಡೆಯಲು ಸರ್ಕಾರ ಮುಂದಾಗಿದ್ದು, ಈಗಾಗಲೇ ಕಂದಾಯ ಇಲಾಖೆಯಿಂದ ಸರ್ವೆ ಕಾರ್ಯ ಆರಂಭಗೊಂಡಿದೆ. ಸಿ ಮತ್ತು ಡಿ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಕೊಡಗಿನ ರೈತರು ಕಂದಾಯ ಪಾವತಿಸುತ್ತಿರುವುದಲ್ಲದೆ ಹಕ್ಕುಪತ್ರವನ್ನು ಕೂಡ ಹೊಂದಿದ್ದಾರೆ. ಆದರೆ ಇದೀಗ ರಾಜ್ಯ ಸರ್ಕಾರದ ದಿಢೀರ್ ನಿರ್ಧಾರದಿಂದ ಕೃಷಿಕರು ಭೂಮಿ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ. ಬೆಳೆಗಾರರು ಕಾಫಿ ತೋಟಗಳಲ್ಲಿ ಬೆಳೆಸಿರುವ ಬೆಲೆ ಬಾಳುವ ಮರಗಳ ಮೇಲೆ ಸಂಖ್ಯೆಗಳನ್ನು ಹಾಕುವ ಮೂಲಕ ಅರಣ್ಯ ಇಲಾಖೆ ಮತ್ತೊಂದು ರೀತಿಯಲ್ಲಿ ಸರ್ವಾಧಿಕಾರವನ್ನು ಮೆರೆದಿದೆ. ತೋಟದ ಮರಗಳ ಮೇಲೆ ಬೆಳೆಗಾರರಿಗೆ ಇರುವ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಇದಾಗಿದೆ. ಸ್ವಂತ ಉಪಯೋಗಕ್ಕೂ ಮರವನ್ನು ಬಳಸಲಾಗದಂತಹ ಅಸಹಾಯ ಪರಿಸ್ಥಿತಿಯನ್ನು ಸರ್ಕಾರ ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ. ಜನರು ತಮ್ಮ ಬಳಿ ಇರುವ ವನ್ಯಜೀವಿಗಳ ವಸ್ತುಗಳನ್ನು ಮರಳಿಸಬೇಕೆಂದು ಅರಣ್ಯ ಇಲಾಖೆ ಹೊರಡಿಸಿರುವ ಸುತ್ತೋಲೆ ಈಗಾಗಲೇ ಕೊಡಗಿನ ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಜಿಲ್ಲೆಯ ದೇವಾಲಯಗಳಲ್ಲಿ ಬಹಳ ವರ್ಷಗಳ ಹಿಂದಿನಿಂದಿಲೂ ವನ್ಯಜೀವಿಗಳ ಕೊಂಬು, ಚರ್ಮ ಮತ್ತಿತರ ವಸ್ತುಗಳನ್ನು ಸಂಸ್ಕೃತಿಯ ಭಾಗವನ್ನು ಬಳಸಿಕೊಂಡು ಬರಲಾಗುತ್ತಿದೆ. ಆದರೆ ಇವುಗಳನ್ನು ಹಿಂದಿರುಗಿಸಬೇಕು ಎಂದು ಸುತ್ತೋಲೆ ಹೊರಡಿಸಿರುವ ಅರಣ್ಯ ಇಲಾಖೆ, ಹಿಂದಿರುಗಿಸುವ ಸಂದರ್ಭ ಎಲ್ಲಿಂದ ಸಂಗ್ರಹಿಸಲಾಯಿತು ಎನ್ನುವ ಬಗ್ಗೆ ಸಾಕ್ಷ್ಯ ನೀಡಬೇಕು. ಇಲ್ಲದಿದ್ದರೆ ಕ್ರಮವಾಗುತ್ತದೆ ಎಂದು ತಿಳಿಸಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದ್ದು, ವಿನಾಕಾರಣ ಜನರಿಗೆ ಕಿರುಕುಳ ನೀಡುವ ತಂತ್ರಗಾರಿಕೆಯಾಗಿದೆ ಎಂದು ಕಂಠಿ ಕಾರ್ಯಪ್ಪ ಟೀಕಿಸಿದ್ದಾರೆ. ಕೊಡಗಿನ ಜನರಿಗೆ ಮಾರಕವಾಗಬಲ್ಲ ಈ ಮೂರು ಸುತ್ತೋಲೆಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾದ ಶಾಸಕರುಗಳು ಜನರ ನೆರವಿಗೆ ಬಾರದೆ ಮೂಡ ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿಗಳ ರಕ್ಷಣೆಗೆ ನಿಂತಿದ್ದಾರೆ. ಸರ್ಕಾರಕ್ಕೆ ಜಿಲ್ಲೆಯ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಸುತ್ತೋಲೆಗಳನ್ನು ತಡೆಹಿಡಿಯುವ ಪ್ರಯತ್ನ ಮಾಡದೆ ನಿರ್ಲಕ್ಷ್ಯ ವಹಿಸುತ್ತಿರುವ ಶಾಸಕರುಗಳ ಧೋರಣೆ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸುತ್ತೋಲೆಗಳನ್ನು ವಾಪಾಸ್ಸು ಪಡೆದು ಕೊಡಗಿನ ಜನರು ನಿರಾತಂಕವಾಗಿ ಜೀವನ ನಡೆಸಲು ಅವಕಾಶ ಕಲ್ಪಿಸದಿದ್ದಲ್ಲಿ ಬಿಜೆಪಿ ವತಿಯಿಂದ ಜಿಲ್ಲಾವ್ಯಾಪಿ ಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
::: ಸಮಸ್ಯೆಗಳು :::
ಕೊಡಗು ಜಿಲ್ಲೆಯನ್ನು ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದೆ. ರಾಜ್ಯ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಸ್ತೆಗಳೆಲ್ಲವು ಹೊಂಡ ಗುಂಡಿಗಳಾಗಿದ್ದು, ವಾಹನಗಳ ಸಂಚಾರ ಅಸಾಧ್ಯವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಬಿಜೆಪಿ ಆಡಳಿತವಿದ್ದಾಗ ಸೋಮವಾರಪೇಟೆ ಆಸ್ಪತ್ರೆಯಲ್ಲಿ 10 ಕ್ಕೂ ಹೆಚ್ಚು ವೈದ್ಯರು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ಕೇವಲ ಮೂವರು ವೈದ್ಯರಿದ್ದು, ರೋಗಿಗಳು ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಉದ್ಭವಿಸಿದೆ. ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ತೋರದೆ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪೆಟ್ರೋಲ್, ಡೀಸೆಲ್, ಛಾಪಾ ಕಾಗದ ಮತ್ತು ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿ ಖಜಾನೆಯನ್ನು ತುಂಬಿಸಿಕೊಳ್ಳುತ್ತಿರುವ ಸರ್ಕಾರ ತನ್ನ ಜೇಬನ್ನು ಕೂಡ ತುಂಬಿಸಿಕೊಳ್ಳುತ್ತಿದೆ. ಆ ಮೂಲಕ ರಾಜ್ಯದ ಜನರಿಗೆ ತೊಂದರೆ ನೀಡುತ್ತಿದೆ ಎಂದು ಕಂಠಿ ಕಾರ್ಯಪ್ಪ ಆರೋಪಿಸಿದ್ದಾರೆ.










