ಚೆಟ್ಟಳ್ಳಿ NEWS DESK ಸೆ.3 : ಕೊಡಗು ಜಿಲ್ಲೆಯಾದ್ಯಂತ ಕೈಲ್ ಪೊಳ್ದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಚೆಟ್ಟಳ್ಳಿಯ ಪುತ್ತರಿರ ಐನ್ ಮನೆಯಲ್ಲಿ ಕುಟುಂಬಸ್ಥರು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಕೊಡವರ ದೇವನೆಲೆಯಾದ ನೆಲ್ಲಕ್ಕಿ ನಡುಬಾಡೆಯಲ್ಲಿ ಕೋವಿ, ಒಡಿಕತ್ತಿ, ಗೆಜ್ಜೆತಂಡ, ತೋಕ್ ಪೂ, ಮೀದಿ, ನೀರಿಟ್ಟು, ವಿಶೇಷ ಪೂಜೆ ಸಲ್ಲಿಸಲಾಯಿತು. ಕುಟುಂಬದ ಹಿರಿಯರಾದ ವಾಯುಸೇನೆಯ ನಿವೃತ್ತ ಯೋಧ ಪುತ್ತರಿರ ಗಣೇಶ್ ಭೀಮಯ್ಯ ಅವರು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ನಾಡಿಗೆ ಹಾಗೂ ಕುಟುಂಬಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು. ಕೈಲ್ ಪೊಳ್ದ್ ಹಬ್ಬದ ವಿಶೇಷ ಭೋಜನದ ನಂತರ ಹಿರಿಯರು, ಕಿರಿಯರು, ಮಹಿಳೆಯರು, ಅಕ್ಕಪಕ್ಕದ ಗ್ರಾಮಸ್ಥರು ಊರುಮಂದ್ ನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆದು ಸಂಭ್ರಮಿಸಿದರು.