ಸೋಮವಾರಪೇಟೆ NEWS DESK ಸೆ.3 :ರೈತರ ಸಿ ಆ್ಯಂಡ್ ಡಿ ಭೂಮಿ ಮತ್ತು ಸರ್ಕಾರಿ ಜಾಗ ಒತ್ತುವರಿಯನ್ನು ತೆರವುಗೊಳಿಸಲು ಸರ್ಕಾರ ಮುಂದಾದರೆ, ಜನಪ್ರತಿನಿಧಿಗಳು ಪಕ್ಷಭೇದ ಮರೆತು ರೈತರ ಪರ ನಿಲ್ಲಬೇಕು ಎಂದು ಸೋಮವಾರಪೇಟೆ ತಾಲ್ಲೂಕು ರೈತ ಹೋರಾಟ ಸಮಿತಿ ಕೆ.ಬಿ.ಸುರೇಶ್ ಮನವಿ ಮಾಡಿದ್ದಾರೆ. ಶಾಂತಳ್ಳಿ ಹೋಬಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸಿ ಆ್ಯಂಡ್ ಡಿ ಭೂಮಿಯಲ್ಲೇ ಕೃಷಿ ಮಾಡಿದ್ದಾರೆ. ಕಾಳುಮೆಣಸು, ಕಾಫಿ ಬೆಳೆಯುತ್ತಿದ್ದಾರೆ. ಅದರಲ್ಲೆ ಬದುಕು ಕಟ್ಟಿಕೊಂಡಿದ್ದಾರೆ. ಈಗ ಆಸ್ತಿ ಕಳೆದುಕೊಂಡು ಹೆಚ್ಚಿನ ರೈತರು ಬೀದಿ ಪಾಲಾಗುವ ಆತಂಕ ಎದುರಿಸುವಂತಾಗಿದೆ. ಈ ಸಂದರ್ಭದಲ್ಲಿ ರಾಜಕಾರಣಿಗಳು ದಿನಕ್ಕೊಂದು ಹೇಳಿಕೆ ನೀಡುತ್ತ ರೈತರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ರೈತ ವಿರೋಧಿ ಹೇಳಿಕೆಯನ್ನು ನೀಡುವುದನ್ನು ಬಿಟ್ಟು, ರೈತಪರವಾದ ಹೇಳಿಕೆ ನೀಡಬೇಕೆಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮೂರು ಎಕರೆಯಷ್ಟು ಒತ್ತುವರಿ ಭೂಮಿಯನ್ನು ತೆರವುಗೊಳಿಸುವುದಿಲ್ಲ ಎಂದು ಸರ್ಕಾರದ ಪ್ರತಿನಿಧಿಗಳು ಹೇಳುತ್ತಿದ್ದಾರೆ. ಕೂಡಲೆ ಮೂರು ಎಕರೆ ಒತ್ತುವರಿ ಭೂಮಿಗಾದರೂ ಹಕ್ಕುಪತ್ರ ಕೊಡುವಂತಾಗಲಿ ಎಂದು ಒತ್ತಾಯಿಸಿದರು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಸಿ ಆ್ಯಂಡ್ ಡಿ ಭೂಮಿ, ಅರಣ್ಯ ಒತ್ತುವರಿ, ಪೈಸಾರಿ ಒತ್ತುವರಿ ಎಷ್ಟು ಆಗಿದೆ ಎಂದು ವೈಜ್ಞಾನಿಕ ಸರ್ವೆಯಾಗಬೇಕು. ನಂತರ ಕ್ರಮ ಜರುಗಿಸಬೇಕು. 11 ಸಾವಿರ ಎಕರೆ ಒತ್ತುವರಿಯಾಗಿದೆ ಎಂದು ಹೇಳುತ್ತಾರೆ. ಅಷ್ಟು ಒತ್ತುವರಿ ಭೂಮಿ ಎಲ್ಲಿದೆ ಎಂಬುದನ್ನು ಕಂದಾಯ ಇಲಾಖೆ, ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ಮಾಡಬೇಕು. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶಾಂತಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಗ್ಗನ ಅನಿಲ್ ಕುಮಾರ್ ಹೇಳಿದರು. ಕೃಷಿಗೆ ಯೋಗ್ಯವಲ್ಲದ ಒತ್ತುವರಿ ಭೂಮಿಯನ್ನು ತೆರವುಗೊಳಿಸಲಿ, ಆದರೆ ಕೃಷಿ ಭೂಮಿಯನ್ನು ತೆರವುಗೊಳಿಸಲು ಸರ್ಕಾರ ಅನುವು ಮಾಡಿಕೊಡಬಾರದು. ಬೆಟ್ಟಗುಡ್ಡ, ದೇವರಕಾಡು ಯಾವುದೂ ಒತ್ತುವರಿಯಾಗಿಲ್ಲ. ಕಂದಾಯ ಇಲಾಖೆ, ಅರಣ್ಯ ಇಲಾಖೆಯಿಂದ ಜಂಟಿ ಸರ್ವೆಯಾಗಿ ಕೃಷಿಗೆ ಯೋಗ್ಯವಲ್ಲದ ಭೂಮಿ ಯಾವುದು ಎಂಬವುದು ಸ್ಪಷ್ಟವಾಗಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಚಾಲಕರಾದ ನಂದಕುಮಾರ್ ಹಾಗೂ ತ್ರಿಶೂಲ್ ಇದ್ದರು.