ಮಡಿಕೇರಿ ಸೆ.4 NEWS DESK : ಅಸಂಘಟಿತ ಕಾರ್ಮಿಕ ವರ್ಗಕ್ಕೆ ಒಳಪಡುವ ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಸಾಮಾಜಿಕ ಭದ್ರತೆ ನೀಡುವ ಕೆಲಸ ಆಗಬೇಕೆಂದು ಕಾರ್ಮಿಕ ಮುಖಂಡ ನಾಪಂಡ ಮುತ್ತಪ್ಪ ಹೇಳಿದ್ದಾರೆ. ಕೊಡಗು ಪತ್ರಕರ್ತರ ಸಂಘ ಹಾಗೂ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2018ರಲ್ಲಿ ಸರ್ಕಾರ ಬಜೆಟ್‍ನಲ್ಲಿ ಪತ್ರಿಕಾ ವಿತರಕರಿಗೆ ಸುಮಾರು ರೂ.10 ಕೋಟಿ ಕ್ಷೇಮಾಭಿವೃದ್ಧಿಗೆ ಘೋಷಣೆ ಮಾಡಿತ್ತು. ಆದರೆ, ಇದು ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಆದ್ದರಿಂದ ಸರ್ಕಾರ ಆದಷ್ಟು ಕೂಡಲೇ ಅನುದಾನವನ್ನು ನೀಡಿ ಪತ್ರಿಕಾ ವಿತರಕರಿಗೆ ನೆರವಾಗಬೇಕೆಂದು ಒತ್ತಾಯಿಸಿ, ತಾನು ಕಾರ್ಮಿಕ ಮುಖಂಡನಾಗಿ ಪತ್ರಿಕಾ ವಿತರಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುವುದಾಗಿ ತಿಳಿಸಿದರು. ಪತ್ರಿಕಾ ವಿತರಕರು ಮುಂಜಾನೆಯೇ ಗಾಳಿ, ಮಳೆ, ಚಳಿ ಎನ್ನದೆ ಪತ್ರಿಕಾ ವಿತರಣೆ ಕೆಲಸವನ್ನು ಮಾಡುತ್ತಾರೆ. ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ, ಮಳೆಗಾಲ ಸೇರಿದಂತೆ ವಿವಿಧ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿ ತಮ್ಮ ಕೆಲಸದಲ್ಲಿ ನಿರತರಾಗುತ್ತಾರೆ. ಇವರಿಗೆ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು. ಇತ್ತೀಚೆಗೆ ಸಾಮಾಜಿಕ ಜಾಲತಾಣ, ಮೊಬೈಲ್ ಬಳಕೆ ಹೆಚ್ಚಾಗಿದೆ. ಇದರಿಂದ ಪತ್ರಿಕಾ ಓದುಗರ ಸಂಖ್ಯೆ ಕೂಡ ಇಳಿಮುಖವಾಗಿದೆ. ಪತ್ರಿಕಾ ಸಂಸ್ಥೆಗಳು ಪತ್ರಿಕೆ ಪ್ರಸರಣ ಸಂಖ್ಯೆ ಏರಿಸಲು ಆಸಕ್ತಿ ವಹಿಸಿ ಕೆಲಸ ಮಾಡಬೇಕು ಎಂದರು. ರಾಷ್ಟ್ರ ಪತಿಗಳಾಗಿದ್ದ ಅಬ್ದುಲ್ ಕಲಾಂ ಅವರು ಕೂಡ ಪತ್ರಿಕಾ ವಿತರಣೆ ಮಾಡುತ್ತಿದ್ದರು. ಇವರಂತೆ ಅನೇಕರು ಪತ್ರಿಕಾ ವಿತರಣೆ ಮಾಡುವ ಕೆಲಸದಲ್ಲಿ ತೊಡಗಿ ಇತರೆ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದರು. ಇತ್ತೀಚೆಗೆ ಮಹಿಳೆಯರು ಕೂಡ ಪತ್ರಿಕೆಯನ್ನು ಹಂಚುವ ಕೆಲಸವನ್ನು ನಿμÉ್ಠಯಿಂದ ಮಾಡಿಕೊಂಡು ಬರುತ್ತಿದ್ದಾರೆ. ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಯನ್ನು ಪತ್ರಿಕಾ ವಿತರಕರಿಗೂ ನೀಡಬೇಕೆಂದು ಒತ್ತಾಯಿಸಿದರು. ಕಾರ್ಮಿಕ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದ್ದು, ಅಸಂಘಟಿಕ ಕಾರ್ಮಿಕರಿಗೆ ದೊರಕಬೇಕಾದ ಹಲವು ಯೋಜನೆಗಳು ಸದ್ಬಳಕೆಯಾಗುತ್ತಿಲ್ಲ. ಆದ್ದರಿಂದ ಸರ್ಕಾರ ಕಾರ್ಮಿಕ ಇಲಾಖೆಗೆ ಹೆಚ್ಚಿನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಬೇಕು. ಪತ್ರಿಕಾ ವಿತರಕರಿಗೆ ವಿಮೆ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಶಕ್ತಿ ಪತ್ರಿಕೆಯ ಸಂಪಾದಕರಾದ ಜಿ. ಚಿದ್ವಿಲಾಸ್ ಮಾತನಾಡಿ ಪತ್ರಿಕಾ ವಿತರಕರು ತೀವ್ರ ಮಳೆಗಾಲದಲ್ಲಿ ಕೂಡ ಪತ್ರಿಕೆಯನ್ನು ವಿತರಣೆ ಮಾಡುವ ಮೂಲಕ ತಮ್ಮ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಪತ್ರಿಕಾ ವಿತರಕರು ಪತ್ರಿಕೆಗಳ ಆಧಾರ ಸ್ತಂಭ ಎಂದು ಹೇಳಿದರು. 2018ರ ಬಜೆಟ್ ನಲ್ಲಿ ಸರ್ಕಾರದಿಂದ ವಿತರಕರಿಗೆ ಅನುದಾನ ಮೀಸಲಿಟ್ಟರೂ ಅದು ಜಾರಿಯಾಗಿಲ್ಲ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ. ಪತ್ರಿಕೆಯನ್ನು ಹೊರತರುವ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕೆಗಳ ಸಂಖ್ಯೆ ಇಳಿಮುಖ ಆಗುತ್ತಿರುವ ಪರಿಣಾಮ ಪತ್ರಿಕಾ ವಿತರಕರ ಮೇಲೆ ಕೂಡ ಪ್ರಭಾವ ಬೀರುತ್ತಿದೆ. ಅಂಚೆ ಇಲಾಖೆಯಲ್ಲಿರುವ ವಿಮೆ ಯೋಜನೆಯ ಸೌಲಭ್ಯವನ್ನು ಪತ್ರಿಕಾ ವಿತರಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್, ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಘಟಕದೊಂದಿಗೆ ಕೊಡಗು ಪತ್ರಕರ್ತರ ಸಂಘ ಕೈಜೋಡಿಸಿಕೊಂಡು ಇದೀಗ 3ನೇ ವರ್ಷದ ಪತ್ರಿಕಾ ವಿತರಕರ ದಿನವನ್ನು ಆಚರಿಸುತ್ತಿದ್ದೇವೆ. ಅಸಂಘಟಿತ ಕಾರ್ಮಿಕ ವಲಯಕ್ಕೆ ಬರುವ ಪತ್ರಿಕೆಗಳ ಆಧಾರ ಸ್ತಂಭವಾಗಿರುವ ಪತ್ರಿಕಾ ವಿತರಕರು ಕಾರ್ಮಿಕ ಇಲಾಖೆಯಿಂದ ದೊರಕುವ ಸೌಲಭ್ಯಗಳನ್ನು ಅರಿತು ಬಳಸಿಕೊಳ್ಳುವ ಕೆಲಸವಾಗಬೇಕೆಂದು ಆಶಿಸಿದರು.
ಹಿರಿಯ ವಿತರಕರಿಗೆ ಸನ್ಮಾನ : ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಜಿಲ್ಲೆಯ ನಾನಾ ಭಾಗದ ಹಿರಿಯ ಪತ್ರಿಕಾ ವಿತರಕರನ್ನು ಸನ್ಮಾನಿ ಗೌರವಿಸಲಾಯಿತು. ಮಡಿಕೇರಿಯ ಕೆ.ಪಿ.ಚಂದ್ರಶೇಖರ್, ಎಂ.ಎನ್.ಸುರೇಶ್ ಕುಮಾರ್, ಎಂ.ಕೆ.ವಿಜಯ್ ಮೂರ್ನಾಡು, ಎಂ.ಎ. ವಸಂತ್ ಸುಂಟಿಕೊಪ್ಪ, ದೀಪಕ್ ದಾಸ್ ವಿರಾಜಪೇಟೆ, ಮಡಿಕೇರಿಯ ಎಂ.ಕೆ.ಅಚ್ಚಯ್ಯ, ಕೆ.ಎನ್. ಶಿವಪ್ರಸಾದ್, ಕುಶಾಲನಗರÀದ ವಿ.ಪಿ.ಪ್ರಕಾಶ್ ಹಾಗೂ ಸೋಮವಾರಪೇಟೆಯ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಹಿರಿಯ ಪತ್ರಿಕಾ ವಿತರಕರಾದ ವಸಂತ್ ಮಾತನಾಡಿ, 50 ವರ್ಷಗಳಿಂದ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದೇನೆ. ಇಂದಿಗೂ ಕೆಲಸ ಮಾಡುತ್ತಿದ್ದೇನೆ. ಪತ್ರಿಕಾ ವಿತರಣೆಯಲ್ಲಿ ಸಾಕಷ್ಟು ಸಮಸ್ಯೆಯಿದೆ. ಆದರೂ ಜನರ ಪ್ರೀತಿ ವಿಶ್ವಾಸವಿದೆ. ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಅವರು ಮನವಿ ಮಾಡಿದರು. ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಟಿ.ಜಿ. ಸತೀಶ್ ಇದ್ದರು. ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಪ್ರಾರ್ಥಿಸಿದರು. ಪತ್ರಕರ್ತರ ಸಂಘದ ಉಪಾಧ್ಯಕ್ಷ ಜಿ.ವಿ. ರವಿ ಕುಮಾರ್ ಸ್ವಾಗತಿಸಿ, ಗೌರವ ಸಲಹೆಗಾರರಾದ ಅನಿಲ್ ಹೆಚ್.ಟಿ ನಿರೂಪಿಸಿ, ಹಿರಿಯ ಪತ್ರಕರ್ತ ಕೆ.ತಿಮ್ಮಪ್ಪ ವಂದಿಸಿದರು.
ಪತ್ರಿಕಾ ವಿತರಕರ ಸಂಘಕ್ಕೆ ರೂ.1.50 ಲಕ್ಷ ಘೋಷಣೆ :: ಕೊಡಗಿನಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಶಕ್ತಿ ಬಳಗದಿಂದ ರೂ1.50 ಲಕ್ಷ ನೀಡುವುದಾಗಿ ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಘೋಷಿಸಿದರು.