ಮಡಿಕೇರಿ ಸೆ.4 NEWS DESK : “ಕೈಲ್ ಪೊಳ್ದ್” ಹಬ್ಬದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬುವಿನಲ್ಲಿ ಹಿರಿಯರಿಗೆ ಮೀದಿ ಇಟ್ಟು ತೋಕ್ ಪೂ ಮೂಲಕ ನಮನ ಸಲ್ಲಿಸಿತು. ಹತ್ಯೆಗೀಡಾದ ಹಿರಿಯರಿಗೆ ನರಮೇಧದ ಸ್ಮಾರಕ ಸ್ಥಳದಲ್ಲಿ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಪ್ರಮುಖರು ಪುಷ್ಪ ನಮನ ಸಲ್ಲಿಸಿ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯನ್ನು ಸಾಧಿಸಲು ಶಕ್ತಿಯನ್ನು ನೀಡುವಂತೆ ಪ್ರಾರ್ಥಿಸಿದರು. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳು ಮತ್ತು ಎಸ್‍ಟಿ ಟ್ಯಾಗ್ ನೀಡಬೇಕು. ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಕೊಡವ ಬುಡಕಟ್ಟಿನ ಮಾತೃ ಮಣ್ಣಿನಲ್ಲಿ ಐತಿಹಾಸಿಕ ನಿರಂತರತೆಗಾಗಿ ಸಾರ್ವತ್ರಿಕ ಮನ್ನಣೆಯನ್ನು ಕಲ್ಪಿಸಬೇಕು. ಕೊಡವ ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆಯ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಸಾಂವಿಧಾನಿಕ ಖಾತ್ರಿ ಒದಗಿಸಬೇಕು, ಸಂವಿಧಾನದ 25 ಮತ್ತು 26 ನೇ ವಿಧಿಗಳ ಅಡಿಯಲ್ಲಿ ಕೊಡವ ಸಾಂಪ್ರದಾಯಿಕ “ಸಂಸ್ಕಾರ ಗನ್” ಹಕ್ಕಿಗೆ ಸಾಂವಿಧಾನಿಕ ಭದ್ರತೆ ನೀಡಬೇಕು. ದೇವಟ್‍ಪರಂಬ್‍ನಲ್ಲಿ ಅಂತರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕವನ್ನು ನಿರ್ಮಿಸಬೇಕು. ವಿಶ್ವರಾಷ್ಟ್ರ ಸಂಸ್ಥೆಯ ಅಂತರರಾಷ್ಟ್ರೀಯ ಹತ್ಯಾಕಾಂಡದ ಸ್ಮರಣಾರ್ಥ ಪಟ್ಟಿಯಲ್ಲಿ ದೇವಟ್‍ಪರಂಬು ಕೊಡವರ ದುರಂತ ನರಮೇಧವನ್ನು ಸೇರಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು. ವಿಶ್ವಾಸಘಾತುಕ “ಕೆಳದಿ/ಪಾಲೇರಿ ರಾಜ ಪರಿವಾರದ ಅಧೀನದಲ್ಲಿದ್ದ ಕೊಡಗು ರಾಜ್ಯವನ್ನು ಪರಾಕ್ರಮಿ ಕೊಡವರು ಹೈದರ್ ಮತ್ತು ಟಿಪ್ಪುವಿನ ಆಕ್ರಮಣದಿಂದ 32 ಕ್ಕೂ ಹೆಚ್ಚು ಬಾರಿ ಕಾಪಾಡಿದರು. ಈ ಸೋಲಿನ ಸೇಡು ತೀರಿಸಿಕೊಳ್ಳಲು, ಟಿಪ್ಪು ಕೊಡವ ಬುಡಕಟ್ಟು ಜನಾಂಗವನ್ನು ವಂಚನೆಯ ಮೂಲಕ ಸಂಪೂರ್ಣವಾಗಿ ನಾಶಮಾಡಲು ಸಂಚು ಹೂಡಿದನು. ಆ ಮೂಲಕ ಕೊಡವರನ್ನು ನಾಶ ಮಾಡಿದನು ಎಂದರು. ಕೊಡವರ ಹಿತ ಕಾಯಲು ಕಳೆದ ಅನೇಕ ವರ್ಷಗಳಿಂದ ಸಿಎನ್‍ಸಿ ಸಂಘಟನೆ ಹೋರಾಟ ನಡೆಸುತ್ತಾ ಬಂದಿದೆ. ಈ ಹಕ್ಕುಗಳು ಶೀಘ್ರ ಈಡೇರುತ್ತದೆ ಎನ್ನುವ ವಿಶ್ವಾಸದೊಂದಿಗೆ ಸ್ಮಾರಕ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ಎನ್.ಯು.ನಾಚಪ್ಪ ತಿಳಿಸಿದರು. ಕಲಿಯಂಡ ಮೀನಾ, ಕಲಿಯಂಡ ಪ್ರಕಾಶ್, ಅಳ್‍ಮಂಡ ಜೈ, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಮಂದಪಂಡ ಸೂರಜ್, ಚೀಯಬೇರ ಸತೀಶ್, ಪಟ್ಟಮಾಡ ಅಶೋಕ್, ಪಟ್ಟಮಾಡ ಮೋಹಿತ್ ಮುತ್ತಣ್ಣ, ಕಲಿಯಂಡ ಶಾನ್ ಸುಬ್ಬಯ್ಯ ಅವರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.











