ಮೂರ್ನಾಡು ಸೆ.6 NEWS DESK : ಮೂರ್ನಾಡಿನ ಸಹಕಾರ ಸ್ಪೋಟ್ರ್ಸ್ ಕ್ಲಬ್ ವತಿಯಿಂದ 100ನೇ ವರ್ಷದ ಕೈಲ್ ಮುಹೂರ್ತ (ಕೈಲ್ಪೊಳ್ದ್) ಹಬ್ಬದ ಶತಮಾನೋತ್ಸವ ಸಂಭ್ರಮದ ಆಟೋಟಗಳ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಮೂರ್ನಾಡು ವಿದ್ಯಾ ಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಆಟೋಟಗಳ ಕಾರ್ಯಕ್ರಮಗಳನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಹಬ್ಬದ ದಿನದಂದು ಎಲ್ಲರೂ ಒಟ್ಟಾಗಿ ಸೇರುವ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು. ಜಿಲ್ಲಾ ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ ಕೊಡಗಿನ ಹಬ್ಬಗಳ ಆಚರಣೆಗಳು ವಿಶೇಷ, ವೈಶಿಷ್ಟ್ಯಗಳಿಂದ ಕೂಡಿದೆ. ಕ್ರೀಡೆಗೆ ಹೆಸರುವಾಸಿಯಾದ ಕೊಡಗು ಜಿಲ್ಲೆಯ ಜನತೆ ಗ್ರಾಮೀಣ ಮಟ್ಟದಲ್ಲಿ ಹಲವಾರು ಕ್ರೀಡೆಗಳನ್ನು ಆಯೋಜಿಸಿ ಭಾಗವಹಿಸುವುದು ಕೂಡ ವಿಶೇಷ ಎಂದು ಅಭಿಪ್ರಾಯಪಟ್ಟರು. ಪುರುಷರು, ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ವಿವಿಧ ಓಟದ ಸ್ಪರ್ಧೆಗಳು, ಭಾರದ ಕಲ್ಲು ಎಸೆತ, ನಿಂಬೆ ಹಣ್ಣು ಚಮಚ ಓಟ, ವಯಸ್ಕರ ಓಟ, ಕಾಲುಕಟ್ಟಿ ಓಟ, ವಾದ್ಯದ ಕುಣಿತ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರು ಮುಖ್ಯ ಅತಿಥಿಗಳಿಂದ ಬಹುಮಾನ, ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು. ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ 6 ಗ್ರಾಮಗಳ ಪುರುಷರು ಮತ್ತು ಮಹಿಳೆಯರ ತಂಡಗಳ ಮಧ್ಯೆ ನಡೆದ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಕಿಗ್ಗಾಲು ಗ್ರಾಮದ ಪುರುಷರ ತಂಡ ಬಾಡಗ ಗ್ರಾಮದ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆಯಿತು. ಮಹಿಳೆಯರ ಹಗ್ಗಜಗ್ಗಾಟ ಪಂದ್ಯದಲ್ಲಿ ಕಿಗ್ಗಾಲು ಗ್ರಾಮದ ತಂಡ ಮುತ್ತಾರ್ಮುಡಿ ಗ್ರಾಮದ ತಂಡವನ್ನು ಸೋಲಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಇದೇ ಸಂದರ್ಭ ಭತ್ತ ಬೆಳೆಯುವ ಸಂಸ್ಥೆಯ 34 ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಸಹಕಾರ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಮುಂಡಂಡ ಪವಿ ಸೋಮಣ್ಣ, ಕಾರ್ಯದರ್ಶಿ ಮೇರ್ಕಜೆ ಲೋಹಿತ್ ಸೋಮಯ್ಯ, ನಿರ್ದೇಶಕರುಗಳಾದ ಪುದಿಯೊಕ್ಕಡ ಪೆÇನ್ನು ಮುತ್ತಪ್ಪ, ಕೋಟೇರ ಮೇದಪ್ಪ, ಬೈಲೆ ತಿಮ್ಮಯ್ಯ, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಪೆಮ್ಮಂಡ ಪವಿತ್ರ, ಕ್ಲಬ್ ಮಾಜಿ ಅಧ್ಯಕ್ಷರುಗಳಾದ ಚೇನಂಡ ಅಶೋಕ್, ಪಳಂಗಂಡ ಅಪ್ಪಣ್ಣ ಮತ್ತು ಪುದಿಯೊಕ್ಕಡ ಬೆಲ್ಲುಸೋಮಯ್ಯ ಹಾಜರಿದ್ದರು.