ಪುತ್ತೂರು ಸೆ.9 NEWS DESK : ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ಐಇಇಇ ವಿದ್ಯಾರ್ಥಿ ಶಾಖೆ, ವೆನಿರ್ ಇಂಟನ್ರ್ಯಾಷನಲ್ ಕನ್ಸಲ್ಟೆನ್ಸಿ, ಕೆನರಾ ಬ್ಯಾಂಕ್, ಎಚ್.ಪಿ.ಸಿ.ಎಲ್ ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಸಮ್ಮೇಳನ “ದೃಷ್ಟಿ-2024” ನ್ನು ಸೆ.11 ರಂದು ಆಯೋಜಿಸಲಾಗಿದೆ. ಆನ್ಲೈನ್ ಹಾಗೂ ಆಫ್ಲೈನ್ ವಿಧಾನಗಳೆರಡರಲ್ಲೂ ನಡೆಸಲಾಗುವ ಈ ಸಮ್ಮೇಳನ ಶಿಕ್ಷಣ ತಜ್ಞರು ಮತ್ತು ಸಂಶೋಧಕರು ತಮ್ಮ ಸಂಶೋಧನಾ ಕಾರ್ಯಗಳನ್ನು ಪ್ರಸ್ತುತಪಡಿಸಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಪ್ರಗತಿಪರ ಮಾರ್ಗವನ್ನು ರೂಪಿಸಲು ಶೈಕ್ಷಣಿಕ ಮತ್ತು ಉದ್ಯಮದ ತಜ್ಞರನ್ನು ಒಗ್ಗೂಡಿಸಲು ಈ ಸಮ್ಮೇಳನದ ಮೂಲಕ ಪ್ರಯತ್ನಿಸಲಾಗುತ್ತದೆ. ನಿರ್ವಹಣೆ ಮತ್ತು ತಂತ್ರಜ್ಞಾನದ ಅಭ್ಯಾಸಗಳನ್ನು ಮುನ್ನಡೆಸಲು ಜಾಗತಿಕ ಸಹಯೋಗ ಮತ್ತು ಜ್ಞಾನ ವಿನಿಮಯವನ್ನು ಉತ್ತೇಜಿಸುವುದು, ಸಾಂಸ್ಥಿಕ ಸವಾಲುಗಳಿಗೆ ನವೀನ ಪರಿಹಾರಗಳನ್ನು ರಚಿಸಲು ಬೋಧಕವರ್ಗ ಮತ್ತು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಮತ್ತು ವಿವಿಧ ಕೈಗಾರಿಕೆಗಳಲ್ಲಿ ನಾವೀನ್ಯತೆಯನ್ನು ನಿರ್ವಹಿಸಲು ಉತ್ತಮ ಅಭ್ಯಾಸಗಳನ್ನು ಗುರುತಿಸುವುದು ಸಮ್ಮೇಳನದ ಉದ್ದೇಶವಾಗಿದೆ. ಅಮೆರಿಕ, ಆಸ್ಟ್ರೇಲಿಯಾ, ಓಮನ್, ಸಿಂಗಾಪುರ್, ಕೆನಡಾ ಮತ್ತು ಕುವೈಟ್ ದೇಶಗಳು ಸೇರಿದಂತೆ ವಿಶ್ವದಾದ್ಯಂತದಿಂದ 200ಕ್ಕೂ ಹೆಚ್ಚು ಮಂದಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಈ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ಸಮಕಾಲೀನ ನಿರ್ವಹಣಾ ಅಭ್ಯಾಸಗಳು, ಕಂಪ್ಯೂಟಿಂಗ್ ಮತ್ತು ಸಂವಹನದಲ್ಲಿ ಸುಧಾರಿತ ತಂತ್ರಜ್ಞಾನಗಳು ಮತ್ತು ಎಂಜಿನಿಯರಿಂಗ್ ಮತ್ತು ವಿಜ್ಞಾನದಲ್ಲಿ ಸುಸ್ಥಿರ ಅಭ್ಯಾಸಗಳು ಎಂಬ ಮೂರು ವಿಭಾಗಗಳನ್ನು ಸಮ್ಮೇಳನ ಒಳಗೊಂಡಿದೆ. ಸೆ.11 ರಂದು ಬೆಳಿಗ್ಗೆ 9.30ಕ್ಕೆ ಕಾಲೇಜಿನ ಶ್ರೀ ರಾಮ ಸಭಾಭವನದಲ್ಲಿ ದೃಷ್ಟಿ-2024 ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಸುರತ್ಕಲ್ ಎನ್. ಐ.ಟಿ.ಕೆ. ಯ ಪ್ರಾಧ್ಯಾಪಕ ಡಾ.ಅಣ್ಣಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಮೆಲ್ವಿನ್ ಸಿಕ್ವೇರಾ, ವೆನಿರ್ ಇಂಟನ್ರ್ಯಾಷನಲ್ ಕನ್ಸಲ್ಟೆನ್ಸಿಯ ಸಹ-ಸಂಸ್ಥಾಪಕ, ಮಂಗಳೂರು, ಮಯುಮಿ ಕಾಕ್ಸ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಟೀಮ್ ನೆಕ್ಸ್ಟ್ ಎಲ್.ಎಲ್.ಸಿ, ಜಪಾನ್, ಶಿಜೋಮೋನ್ ಯೇಸುಧಾಸ್, ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕ (ದಕ್ಷಿಣ ಏಷ್ಯಾ), ಡಿಕಿನ್ ವಿಶ್ವವಿದ್ಯಾಲಯ, ಆಸ್ಟ್ರೇಲಿಯಾ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಖಜಾಂಚಿ ಮುರಳೀಧರ ಭಟ್.ಬಿ. ವಹಿಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮೂಡುಬಿದಿರೆಯ ಎಂಈಟಿಇ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಗಣೇಶ್ ಮೊಗವೀರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ ಡಿ.ಕಲ್ಲಾಜೆ ವಹಿಸಲಿದ್ದಾರೆ. ದೃಷ್ಟಿ-2024ರ ಅಭೂತಪೂರ್ವ ಯಶಸ್ಸಿಗಾಗಿ ಸಮ್ಮೇಳನದ ಸಂಘಟನಾ ಸಮಿತಿ ಅವಿರತವಾಗಿ ಶ್ರಮಿಸುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.