ಮಡಿಕೇರಿ NEWS DESK ಸೆ.14 : ಐತಿಹಾಸಿಕ ಮಡಿಕೇರಿ ದಸರಾ ಸೇರಿದಂತೆ ದಕ್ಷಿಣ ಕೊಡಗಿನ ಗೋಣಿಕೊಪ್ಪಲು ದಸರಾ ಉತ್ಸವವನ್ನು ಎಲ್ಲರೂ ಒಗ್ಗಟ್ಟಾಗಿ ಆಚರಿಸಬೇಕು. ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಯಶಸ್ವಿ ದಸರಾ ಆಚರಣೆಗೆ ಸರ್ಕಾರ ನಿಮ್ಮೊಂದಿಗೆ ಸದಾ ಇರಲಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎರಡೂ ಕಡೆಯ ದಸರಾ ಉತ್ಸವ ಆಚರಣೆಗೆ ಪೂರಕವಾಗಿ ಅಗತ್ಯ ಅನುದಾನವನ್ನು ಮುಂದಿನ ಎರಡು ಮೂರು ದಿನಗಳಲ್ಲೆ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಕಳೆದ ಸಾಲಿನ ಮಡಿಕೇರಿ ದಸರಾ ಉತ್ಸವಕ್ಕೆ ಸರ್ಕಾರ 95 ಲಕ್ಷ ರೂ. ಅನುದಾನವನ್ನು ಒದಗಿಸಿತ್ತು, ಈ ಬಾರಿ ಹೆಚ್ಚಿನ ಅನುದಾನವನ್ನು ಒದಗಿಸುವಂತೆ ಕೋರಲಾಗಿದೆ, ಈ ಬಾರಿ ಕಳೆದ ಬಾರಿಗಿಂತ ಒಂದಷ್ಟು ಹೆಚ್ಚಿನ ಅನುದಾನವನ್ನು ಒದಗಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು, ದಸರಾ ಉತ್ಸವಕ್ಕೆ ಕಳೆದ ಸಾಲಿನಂತೆಯೇ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆಯನ್ನಿತ್ತರು. ಮಡಿಕೇರಿ ದಸರಾ ಉತ್ಸವ ಕಳೆೆದ ಒಂದೂವರೆ ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಭವ್ಯ ಇತಿಹಾಸವನ್ನು ಹೊಂದಿದೆ. ಈ ಬಾರಿಯ ದಸರಾ ಉತ್ಸವಕ್ಕೆ 3 ಕೋಟಿ ಅನುದಾನವನ್ನು ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು. ಮಡಿಕೇರಿ ದಸರಾ ದಶ ಮಂಟಪಗಳು ಮತ್ತು ಕರಗಗಳು ತೆರಳುವ ರಸ್ತೆಗಳು ಸಂಪೂರ್ಣ ಹದಗೆಟ್ಟಿರುವ ಬಗ್ಗೆ ವಿವಿಧ ಸಮಿತಿಗಳ ಅಧ್ಯಕ್ಷರು ನೀಡಿದ ಮಾಹಿತಿಗೆ ಸ್ಪಂದಿಸಿದ ಉಸ್ತುವಾರಿ ಸಚಿವ ಭೋಸರಾಜು ಅವರು, ಮುಂದಿನ ಒಂದು ವಾರದ ಒಳಗಾಗಿ ಎನ್‌ಡಿಆರ್‌ಎಫ್ ನಿಧಿಯಡಿ, ರಸ್ತೆಗಳ ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ನಡೆಸಬೇಕು. ಇದರ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳೆ ತೆಗೆದುಕೊಳ್ಳುವಂತೆ ಸೂಚಿಸಿದರು. ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಾಯೋಜಕರ ಮೂಲಕ ನಡೆಸಲು ಆದ್ಯತೆ ನಿಡುವಂತೆ ಸಲಹೆ ನೀಡಿದ ಸಚಿವರು, ಇದರಿಂದ ದಸರಾ ಆಚರಣೆಗೂ ಹೆಚ್ಚಿನ ಹೊರೆ ಬೀಳುವುದಿಲ್ಲವೆಂದು ಇದೇ ಸಂದರ್ಭ ತಿಳಿಸಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ವರ್ಷಂಪ್ರತಿ ದಸರಾ ಉತ್ಸವದ ಸಂದರ್ಭ ಗಾಂಧಿ ಮೈದಾನದ ವೇದಿಕೆಗೆ ಹೆಚ್ಚಿನ ವೆಚ್ಚ ತಗಲುತ್ತದೆ. ಈ ಹಿನ್ನೆಲೆ ದಸರಾ ಉತ್ಸವ ಪೂರ್ಣಗೊಂಡ ಬಳಿಕ ಶಾಶ್ವತವಾದ ಸುಸಜ್ಜಿತ ವೇದಿಕೆಯನ್ನು ಎಲ್ಲರಿಗೂ ಅನುಕೂಲಕರವಾದ ರೀತಿಯಲ್ಲಿ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆಂದು ಸ್ಪಷ್ಟಪಡಿಸಿದರು. ವಿಜಯದಶಮಿಯ ಶೋಭಾ ಯಾತ್ರೆಯ ಸಂದರ್ಭ ಮಂಟಪ ಸಮಿತಿಗಳು ತಾವಾಗಿಯೇ ಅಬ್ಬರದ ಡಿಜೆಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದ್ದಲ್ಲದೆ, ಇಲ್ಲಿನ ರಸ್ತೆಗಳ ವಿಸ್ತೀರ್ಣಕ್ಕೆ ಅನುಗುಣವಾದ ರೀತಿಯ ಮಂಟಪಗಳನ್ನು ಸಜ್ಜುಗೊಳಿಸಿ ಮೆರವಣಿಗೆ ನಡೆಸಬೇಕೆಂದು ಸ್ಪಷ್ಟ ಸೂಚನೆಯನ್ನು ನೀಡಿದರು. ಇದಕ್ಕೆ ಒತ್ತು ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ರಾಮರಾಜನ್ ಅವರು, ಶೋಭಾಯಾತ್ರೆಯ ಸಂದರ್ಭ ಅಬ್ಬರದ ಡಿಜೆಗೆ ಕಡಿವಾಣ ಹಾಕುವುದು ಅವಶ್ಯ, ಇದರಲ್ಲಿ ಮಂಟಪಗಳ ನಡುವೆ ಪೈಪೋಟಿ ಬೇಡ. ದಸರಾ ವೀಕ್ಷಣೆಗೆ ಹೊರಗಿನಿಂದ ಬರುವವರಿಗೆ ಇಲ್ಲಿನ ಸಂಸ್ಕçತಿಯನ್ನು ತೋರಿಸುವುದಕ್ಕೆ ದಸರಾ ಉತ್ಸವದಲ್ಲಿ ಹೆಚ್ಚಿನ ಒತ್ತು ನೀಡಬೇಕೆಂದು ತಿಳಿಸಿ, ಈ ಹಿಂದಿನ ದಸರಾ ಉತ್ಸವದಲ್ಲಿ ಮಂಟಪ ಬಿದ್ದು ಕೆಲ ಅಹಿತಕರ ಘಟನೆಗಳು ನಡೆದಿದೆ. ಈ ಹಿನ್ನೆಲೆ ಮಂಟಪ ಸಮಿತಿಗಳು ಸುರಕ್ಷತೆಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯವೆಂದು ತಿಳಿಸಿದರು. ಶಾಸಕ ಡಾ. ಮಂತರ್ ಗೌಡ ಮಾತನಾಡಿ, ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶ ಮಂಟಪಗಳ ಶೋಭಾಯಾತ್ರೆ ಯಶಸ್ವಿಯಾಗಿ ನಡೆಯುವುದಕ್ಕೆ ಪೂರಕವಾಗಿ ರಸ್ತೆಗಳ ದುರಸ್ತಿ ಸೇರಿದಂತೆ, ಅಗತ್ಯ ಅನುಕೂಲತೆ ಮಾಡಿಕೊಡಬೇಕಾಗಿದೆ. ಮಂಟಪಗಳು ಸಾಗುವ ಹಾದಿಯಲ್ಲಿರುವ ವಿದ್ಯುತ್ ಸಂಪರ್ಕ ವ್ಯವಸ್ಥೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುತ್ತದೆಂದು ತಿಳಿಸಿದರು. ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಈ ಬಾರಿಯ ದಸರಾಕ್ಕೆ ಹೆಚ್ಚಿನ ಅನುದಾನಕ್ಕೆ ಉತಸ್ತುವಾರಿ ಸಚಿವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಉತ್ಸವವನ್ನು ಎಲ್ಲರೂ ಒಗ್ಗೂಡಿ ಶಾಂತಿಯುತವಾಗಿ ಆಚರಿಸೋಣವೆಂದು ತಿಳಿಸಿ, ಇತರರಿಗೆ ತೊಂದರೆಯಾಗದಂತೆ ಡಿಜೆ ಬಳಕೆಯತ್ತ ಗಮನ ಹರಿಸುಂತೆ ಸಲಹೆಯನ್ನಿತ್ತು, ಉತ್ಸವಾಚರಣೆಯಲ್ಲಿ ಅಧಿಕಾರಿಗಳು ಹೆಚ್ಚಿನ ಹಸ್ತಕ್ಷೇಪ ಇಲ್ಲದಂತೆ ನೋಡಿಕೊಳ್ಳುವಂತೆ ಸೂಕ್ಷö್ಮವಾಗಿ ನುಡಿದರು. ಗೊಣಿಕೊಪ್ಪಲು ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಮಾತನಾಡಿ, ಈ ಬಾರಿ ಗೋಣಿಕೊಪ್ಪಲಿನಲ್ಲಿ 46 ನೇ ವರ್ಷದ ದಸರಾ ಉತ್ಸವವನ್ನು ಆಚರಿಸಲಾಗುತ್ತಿದ್ದು, ಈಗಾಗಲೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ದಶ ಮಂಟಪ ಸಮಿತಿ ಅಧ್ಯಕ್ಷ ಜಗದೀಶ್, ನಗರಸಭಾ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ, ಮಾಜಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್, ಜಿ.ಎಂ. ಸತೀಶ್ ಪೈ, ಮಹೇಶ್ ಜೈನಿ, ಅರುಣ್ ಶೆಟ್ಟಿ, ಹೆಚ್.ಟಿ. ಅನಿಲ್, ಎಂ.ಬಿ. ದೇವಯ್ಯ, ಬಿ.ಎಂ. ರಾಜೇಶ್ ಅವರು ಹಲ ಸಲಹೆಗಳನ್ನಿತ್ತರು. ವೇದಿಕೆಯಲ್ಲಿ ಎಡಿಸಿ ಐಶ್ವರ್ಯ, ಎಸಿ ವಿನಾಯಕ ನರ್ವಾಡೆ ಸೇರಿದಂತೆ ಹಲ ಅಧಿಕಾರಿಗಳು ಪಾಲ್ಗೊಂಡಿದ್ದರು.
::: “ಕಾಫಿ ದಸರಾ” ಸೇರ್ಪಡೆ :::
ಐತಿಹಾಸಿಕ ಮಡಿಕೇರಿ ದಸರಾ ಉತ್ಸವದ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಈ ಬಾರಿ “ಕಾಫಿ ದಸರಾ” ಸೇರ್ಪಡೆಗೊಂಡಿದೆ.
ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ ಅವರು, ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರಗಳನ್ನು ನೀಡುತ್ತಾ ಈ ಬಾರಿ ಅ.6 ಮತ್ತು 7 ರಂದು “ಕಾಫಿ ದಸರಾ” ವನ್ನು ದಸರಾ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಸೇರ್ಪಡೆ ಮಾಡಲಾಗಿದೆಯೆಂದು ಮಾಹಿತಿ ನೀಡಿದರು. ಈ ಬಗ್ಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೊಸ ತನವನ್ನು ನೀಡುವ ಚಿಂತನೆಯ ಹಿನ್ನೆಲೆ “ಕಾಫಿ ದಸರಾ” ಸೇರ್ಪಡೆ ಮಾಡಲಾಗಿದೆ. ಕೊಡಗು ಕಾಫಿ ಕೃಷಿ ಜಿಲ್ಲೆ ಆಗಿರುವುದರಿಂದ ಕಾಫಿ ಕೃಷಿಕರಿಗೆ ಸೂಕ್ತ ಮಾಹಿತಿ, ಕಾಫಿಯ ಪ್ರಯೋಜನ, ತೋಟಗಾರಿಕಾ ಕೃಷಿ ಮಾಹಿತಿ ಸಂಬAಧಿತ 20 ಮಳಿಗೆಗಳು ಕಾಫಿ ದಸರಾ ದಲ್ಲಿ ಇರುತ್ತದೆಂದು ತಿಳಿಸಿದರು. ಮೊದಲ ದಿನ ಕಾಫಿ ಕೃಷಿ ಬಗ್ಗೆ ಮಾಹಿತಿ ಕಾರ್ಯಾಗಾರ ಕೂಡ ಜರುಗಲಿದ್ದು ಕರ್ನಾಟಕ ಬೆಳೆಗಾರರ ಒಕ್ಕೂಟ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕಾಫಿ ಮಂಡಳಿ ಸಹಕಾರ ನೀಡಲಿದೆ ಎಂದರು.