ಮಡಿಕೇರಿ NEWS DESK ಸೆ.15 : ಕನ್ನಡ ಸಾಹಿತ್ಯದ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಗ್ರಾಮೀಣ ಭಾಗದ ಸಾಹಿತಿಗಳ ಸಾಹಿತ್ಯ ಕೃಷಿಗೆ ಸಹಕಾರಿಯಾಗಿದೆ ಎಂದು ಮೂರ್ನಾಡು ಪದವಿ ಪೂರ್ವ ಕಾಲೇಜ್ ನ ಅಧ್ಯಕ್ಷ ಚೌರೀರ ಡಾ.ಜಗತ್ ತಿಮ್ಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕಸಾಪ ಮತ್ತು ಮೂರ್ನಾಡು ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜ್ ನ ಕಾವೇರಿ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ವಿಷಯ ಸಂಕಲನ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲೆಮರೆಯ ಕಾಯಿಯಂತಿರುವ ಕನ್ನಡದ ಬರಹಗಾರರನ್ನು ಗುರುತಿಸಿ ಸಾಹಿತ್ಯದ ಬೆಳವಣಿಗೆಗೆ ಪ್ರೇರಣೆ ನೀಡುವ ಶಕ್ತಿ ಕನ್ನಡ ಸಾಹಿತ್ಯ ಪರಿಷತ್ ಗೆ ಇದೆ. ಜಿಲ್ಲೆಯ ಗ್ರಾಮೀಣ ಸಾಹಿತಿಗಳು ಇದರ ಲಾಭ ಪಡೆದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕೆಂದು ಕರೆ ನೀಡಿದರು. ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ನಾವು ಕ್ರಿಯಾಶೀಲರಾದಾಗ ಮಾತ್ರ ಎಲ್ಲವನ್ನೂ ಸಾಧಿಸಲು ಸಾಧ್ಯ. ನಾನೇ “ಗ್ರೇಟ್” ಎಂಬ ಮಂತ್ರವನ್ನು ಅಳವಡಿಸಿಕೊಂಡು ಜೀವನದಲ್ಲಿ ಪ್ರಗತಿ ಸಾಧಿಸಬೇಕೆಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಸಾಹಿತ್ಯ ಪರಿಷತ್ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವುದರೊಂದಿಗೆ ಸಮಾಜಮುಖಿ ಕಾರ್ಯಕ್ಕೂ ಆದ್ಯತೆ ನೀಡುತ್ತಿದೆ ಎಂದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಸಾಪ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನ ಮಾಡಬೇಕು. ಈ ಕಾರ್ಯಕ್ಕೆ ಎಲ್ಲಾ ಹೋಬಳಿಗಳ ಪದಾಧಿಕಾರಿಗಳು ಕೈಜೋಡಿಸಬೇಕೆಂದು ಕರೆ ನೀಡಿದರು. “ಸಂಚಾರ ನಿಯಮ ಮತ್ತು ಕಾನೂನು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಮಡಿಕೇರಿ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಪಿ.ಅನೂಪ್ ಮಾದಪ್ಪ ಅವರು 2023ರಿಂದ ಸಂಚಾರ ನಿಯಮಾವಳಿಗಳಲ್ಲಿ ಭಾರೀ ಬದಲಾವಣೆಯಾಗಿದೆ. ಈ ಬಗ್ಗೆ ಜನರು ಅರಿವು ಮೂಡಿಸಿಕೊಳ್ಳಬೇಕು. ಯುವ ಸಮೂಹ ಹೆಚ್ಚು ಕಾನೂನು ಉಲ್ಲಂಘನೆ ಮಾಡುತ್ತಿದೆ. ಇದರ ಪರಿಣಾಮ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಪೋಷಕರು ಸಮಸ್ಯೆಗೆ ಸಿಲುಕುತ್ತಿರುವುದು ವಿಪರ್ಯಾಸ ಎಂದರು. ಯಾರ ಜೀವಕ್ಕೂ ಖಾತ್ರಿಯೇ ಇಲ್ಲದಾಗಿದೆ, ಕಾನೂನಿನ ಉಲ್ಲಂಘನೆ ಮತ್ತು ನಿರ್ಲಕ್ಷ್ಯದಿಂದ ಜೀವಗಳು ಬಲಿಯಾಗುತ್ತಿವೆ. ಆದ್ದರಿಂದ ಕಾನೂನನ್ನು ಗೌರವಿಸಿ ಮತ್ತು ಪಾಲಿಸಿ ಎಂದು ಮನವಿ ಮಾಡಿದರು. ವಾಹನದ ದಾಖಲಾತಿ ಹಾಗೂ ವಿಮೆಗೆ ಸಂಬಂಧಿಸಿದ ದಾಖಲೆಗಳನ್ನು ಕಡ್ಡಾಯವಾಗಿ ತಮ್ಮ ವಾಹನಗಳಲ್ಲಿಯೇ ಇಟ್ಟುಕೊಂಡಿರಬೇಕು ಎಂದು ಅನೂಪ್ ಮಾದಪ್ಪ ಕಿವಿಮಾತು ಹೇಳಿದರು. ಹಿತಿ ಗೌರಮ್ಮ ಮಾದಮಯ್ಯ ಮಾತನಾಡಿ ವಿದ್ಯಾರ್ಥಿಗಳು ಪಠ್ಯೇತರ ವಿಷಯಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವಂತೆ ಕರೆ ನೀಡಿದರು. ::: ಪದಗ್ರಹಣ ::: ಕಸಾಪ ಮೂರ್ನಾಡು ಹೋಬಳಿ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಬರಹಗಾರ್ತಿ ಈರಮಂಡ ಹರಿಣಿ ವಿಜಯ್ ಅವರು ಎಲ್ಲರ ಸಲಹೆ, ಸಹಕಾರದೊಂದಿಗೆ ಹೋಬಳಿ ಘಟಕದ ಬೆಳವಣಿಗೆಗೆ ಶ್ರಮಿಸಲಾಗುವುದು. ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿ ಭಾಷೆ ಮತ್ತು ಸಾಹಿತ್ಯದ ಪ್ರಗತಿಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ನೂತನ ಗೌರವ ಕಾರ್ಯದರ್ಶಿಯಾಗಿ ಕಟ್ಟೆಮನೆ ಮಹಾಲಕ್ಷ್ಮಿ, ಗೌರವ ಕೋಶಾಧಿಕಾರಿಯಾಗಿ ಅಮ್ಮಾಟ್ಟಂಡ ವಿಂಧ್ಯಾ ದೇವಯ್ಯ, ಸಂಘಟನಾ ಕಾರ್ಯದರ್ಶಿಗಳಾಗಿ ಜಾಶಿರ್ ಮೂರ್ನಾಡು ಹಾಗೂ ಕಿಗ್ಗಾಲು ಹರೀಶ್, ಪದಾಧಿಕಾರಿಗಳಾಗಿ ಮೂರ್ನಾಡು ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲರಾದ ದೇವಕ್ಕಿ, ಕೂಡಂಡ ರವಿ, ಕಾಮೇಯಂಡ ಕಲ್ಪನಾ ಸಾಮ್ರಾಟ್, ಕೃಷ್ಣಪ್ಪ, ಪುಷ್ಪ, ಮುನೀರ್ ಅಧಿಕಾರ ಸ್ವೀಕರಿಸಿದರು. ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಇದೇ ಸಂದರ್ಭ ಗೌರಮ್ಮ ಮಾದಮಯ್ಯ ಅವರು ಬರೆದ “ವಿಷಯ ಸಂಕಲನ” ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ಕೋಶಾಧಿಕಾರಿ ಎಂ.ಎಸ್.ಸಂಪತ್ ಕುಮಾರ್, ನಿರ್ದೇಶಕ ಮಂಜುನಾಥ್, ಮೂರ್ನಾಡು ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲರಾದ ಪಿ.ಎಂ.ದೇವಕ್ಕಿ, ಮೂರ್ನಾಡು ಹೋಬಳಿ ಘಟಕದ ಮಾಜಿ ಅಧ್ಯಕ್ಷ ಪಿ.ಪಿ.ಸುಕುಮಾರ್ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಾಹಿತಿ ಕಿಗ್ಗಾಲು ಗಿರೀಶ್, ಮಡಿಕೇರಿಯ ವೈದ್ಯ ಡಾ.ಮೋಹನ್ ಅಪ್ಪಾಜಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಗಮನ ಸೆಳೆಯಿತು. ಮೂರ್ನಾಡು ಕಾಲೇಜ್ ನ ಉಪನ್ಯಾಸಕಿ ಕಲ್ಪನಾ ಸ್ವಾಗತಿಸಿ, ಕುಮುದಾ ನಿರೂಪಿಸಿದರು. ಮಡಿಕೇರಿ ತಾಲೂಕು ಘಟಕದ ಕಾರ್ಯದರ್ಶಿ ಬಾಳೆಯಡ ದಿವ್ಯಾ ಮಂದಪ್ಪ ವಂದಿಸಿದರು. ಕಾಲೇಜು ವಿದ್ಯಾರ್ಥಿನಿ ನಿತ್ಯಾ ಪಿ.ಡಿ ಹಾಗೂ ತಂಡ ನಾಡಗೀತೆ ಹಾಡಿದರು.