ಮಡಿಕೇರಿ NEWS DESK ಸೆ.16 : ಕೊಡಗು ಜಿಲ್ಲೆಯಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಲ್ಲಿ ತೊಡಗಿರುವ ಉದ್ಯಮಪತಿ ಬಂಡವಾಳಶಾಹಿಗಳು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಮಾಜ ಸೇವೆಯ ಮುಖವಾಡ ತೊಟ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಶೀಘ್ರ ತಡೆಯದಿದ್ದಲ್ಲಿ ಕೇರಳದ ವಯನಾಡು ಮಾದರಿಯ ಪ್ರಾಕೃತಿಕ ದುರಂತ ಇಲ್ಲಿಯೂ ಸಂಭವಿಸಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಹುದಿಕೇರಿಯಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಲ್ಲಿ ತೊಡಗಿರುವ ಉದ್ಯಮಪತಿ ಬಂಡವಾಳಶಾಹಿಗಳು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಮಾಜ ಸೇವೆಯ ಮುಖವಾಡ ತೊಟ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ. ಕಪ್ಪುಹಣವನ್ನು ಬಿಳಿ ಮಾಡುವುದಕ್ಕಾಗಿ ಕೊಡಗಿನ ಪ್ರಕೃತಿಯ ಮೇಲೆ ದಾಳಿ ನಡೆಸಿ ರೆಸಾರ್ಟ್, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣಕ್ಕಾಗಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಡುತ್ತಿರುವ ಮಾಫಿಯಾಗಳು ಅರಣ್ಯ ಪ್ರದೇಶವನ್ನು ಕೂಡ ಒತ್ತುವರಿ ಮಾಡಿಕೊಳ್ಳುತ್ತಿವೆ. ಸರ್ಕಾರದ ಕೃಪಾಕಟಾಕ್ಷದಿಂದ ಸಾವಿರಾರು ಮರಗಳು ಹನನವಾಗುತ್ತಿವೆ, ಜಲನಾಳಗಳು ನಾಶವಾಗುತ್ತಿವೆ. ಭಾರೀ ಸ್ಫೋಟಕಗಳನ್ನು ಬಳಸಿ ಭೂಗರ್ಭಕ್ಕೆ ಹಾನಿ ಮಾಡಲಾಗುತ್ತಿದೆ. ಪ್ರಾಕೃತಿಕ ವಿಕೋಪದ ಅಪವಾದಗಳನ್ನು ಅಮಾಯಕ ಕೊಡವರ ಮೇಲೆ ಹಾಕಲಾಗುತ್ತಿದೆ. ಈ ಎಲ್ಲಾ ಅಕ್ರಮಗಳನ್ನು ಮುಚ್ಚಿಡುವ ಉದ್ದೇಶದಿಂದ ಬಂಡವಾಳಶಾಹಿಗಳು ವಿವಿಧ ಆಮಿಷಗಳನ್ನೊಡ್ಡಿ ಸಮಾಜ ಸೇವೆಯ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು. ಮಾಫಿಯಾಗಳು ನೀಡುವ ಆಮಿಷಗಳನ್ನು ತಿರಸ್ಕರಿಸಿ ಭೂಅಕ್ರಮಗಳ ವಿರುದ್ಧ ಕೊಡವರು ಜಾಗೃತರಾಗದಿದ್ದಲ್ಲಿ ಕೊಡವ ಲ್ಯಾಂಡ್ ನ್ನು ಕಳೆದುಕೊಳ್ಳುವ ಹೀನಾಯ ಸ್ಥಿತಿ ಬರಬಹುದೆಂದು ಎನ್.ಯು.ನಾಚಪ್ಪ ಬೇಸರ ವ್ಯಕ್ತಪಡಿಸಿದರು. ಕೊಡವರು ನಡೆಸುತ್ತಿರುವ ಪರಿಸರ ಸ್ನೇಹಿ ಹೋಂಸ್ಟೇಗಳ ವಿರುದ್ಧ ರೆಸಾರ್ಟ್ ಮಾಫಿಯಾಗಳು ಸಂಚು ರೂಪಿಸುತ್ತಿವೆ. ಕೊಡವರು ಸಂಚರಿಸುವ ಸಾಂಪ್ರದಾಯಿಕ ರಸ್ತೆಗಳಿಗೆ ಬೇಲಿ ನಿರ್ಮಿಸಿ ಅಡ್ಡಿಪಡಿಸುತ್ತಿವೆ. ಬಂಡವಾಳಶಾಹಿಗಳ ಬೃಹತ್ ಎಸ್ಟೇಟ್ ಗಳಿಗೆ ಕಾವೇರಿಯ ಉಪನದಿಗಳ ನೀರನ್ನು ಮಿತಿ ಇಲ್ಲದೆ ಬಳಸಲಾಗುತ್ತಿದೆ. ಆದರೆ ಕೊಡವರು ಅಲ್ಪಾವಧಿ ಬಳಸುವ ಅಲ್ಪ ಪ್ರಮಾಣದ ನೀರಿಗೆ ಕಡಿವಾಣ ಹಾಕಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಮಟ್ಟದ ರಾಜಕಾರಣಿಗಳು ಕೊಡಗಿನಲ್ಲಿ ಬೃಹತ್ ಪ್ರಮಾಣದ ಭೂಮಿ ಹೊಂದಿದ್ದು, ಇವರುಗಳಿಂದಲೂ ಸಾವಿರಾರು ಮರಗಳು ಹನನವಾಗುತ್ತಿವೆ, ನೀರಿನ ಬಳಕೆಯಾಗುತ್ತಿದೆ. ಇವರುಗಳಿಗೆ ಯಾರಿಗೂ ಅನ್ವಯವಾಗದ ಕಾನೂನು ಕೊಡವರಿಗೆ ಮಾತ್ರ ಅನ್ವಯವಾಗುತ್ತಿದೆ ಎಂದು ಆರೋಪಿಸಿದರು. ಕೊಡವರ ಪೂರ್ವಾರ್ಜಿತ ಭೂಮಿಯಾಗಿದ್ದ ಕಡಮಕ್ಕಲ್ಲಿನಿಂದ ಪೆರುಂಬಾಡಿ ವರಗಿನ ಕೆಲವು ಪ್ರದೇಶವನ್ನು ಕೇರಳದ ವ್ಯಕ್ತಿಗಳಿಗೆ 1930ರಲ್ಲಿ ಭೋಗ್ಯಕ್ಕೆ ನೀಡಲಾಗಿದೆ. ಪಶ್ಚಿಮಘಟ್ಟದ ನಿತ್ಯ ಹರಿದ್ವರ್ಣದ ಕಾಡುಗಳನ್ನು ನಾಶ ಮಾಡುವ ದಂಧೆ ಇಂದಿಗೂ ಎಗ್ಗಿಲ್ಲದೆ ಮುಂದುವರೆದಿದೆ. ಸರ್ಕಾರದೊಂದಿಗೆ ನಂಟು ಹೊಂದಿರುವ ಕೊಟ್ಟಾಯಂನ ಬೃಹತ್ ಟಿಂಬರ್ ಉದ್ಯಮಪತಿಗಳು ಇಡೀ ಕೊಡಗನ್ನು ನಿಯಂತ್ರಿಸುತ್ತಿದ್ದಾರೆ. ಇವರಿಗೆ ಯಾವ ಕಾನೂನು ಕೂಡ ಅನ್ವಯವಾಗುತ್ತಿಲ್ಲ. ಆದರೆ ಕೊಡವರು ಗೃಹ ಉಪಯೋಗಕ್ಕೆ ತಾವು ನೆಟ್ಟು ಬೆಳೆಸಿದ ಸಿಲ್ವರ್ ಮರವನ್ನು ಕಡಿದರೆ ಅದನ್ನೇ ಬೊಟ್ಟು ಮಾಡಿ ಸರ್ಕಾರ ಕಿರುಕುಳ ನೀಡುತ್ತಿದೆ ಮತ್ತು ನಮ್ಮನ್ನು ಖಳನಾಯಕರಂತೆ ನೋಡುತ್ತಿದೆ. ದೊಡ್ಡ ದೊಡ್ಡ ರೆಸಾರ್ಟ್ ಗಳ ನಿರ್ಮಾಣಕ್ಕೆ ಪರ್ವತವನ್ನು ಬಗೆದು ವಯನಾಡಿನ ರೀತಿಯಲ್ಲಿ ಭೂಕುಸಿತಕ್ಕೆ ಆಹ್ವಾನ ನೀಡುವ ಪ್ರಕೃತಿಯ ಮೇಲಿನ ದಾಳಿಯನ್ನು ತಡೆಯುವ ಬದಲು ಸರ್ಕಾರ ಬಂಡವಾಳಶಾಹಿಗಳಿಗೆ ಬೆಂಬಲವಾಗಿ ನಿಂತಿದೆ. ಇತ್ತೀಚೆಗೆ ಅರಣ್ಯ ಮಂತ್ರಿಗಳು ಹೊರಡಿಸಿರುವ ಸುತ್ತೋಲೆಯಲ್ಲಿ ಕೊಡಗಿನ ಪ್ರಕೃತಿಗೆ ಮಾರಕವಾಗಿರುವ ರೆಸಾರ್ಟ್ ಹಾಗೂ ಭೂಮಿಯನ್ನು ಭೋಗ್ಯಕ್ಕೆ ಪಡೆದ ಕಂಪೆನಿಗಳು ನಿರಂತರ ನಡೆಸುತ್ತಿರುವ ಮರಹನನದ ಬಗ್ಗೆ ಪ್ರಸ್ತಾಪಿಸಿಲ್ಲ. ಕೊಡಗಿನ ಪ್ರಾಕೃತಿಕ ವಿಕೋಪ, ಭೂಸ್ಫೋಟ ಮತ್ತು ಜಲಪ್ರಳಯದ ಅಂಶಗಳನ್ನು ಉಲ್ಲೇಖಿಸಿಲ್ಲ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಹಸಿರ ಪರಿಸರ, ಜಲಪ್ರದೇಶಗಳ ಸಂರಕ್ಷಣೆಗಾಗಿ ಸರ್ಕಾರ ಸೂಕ್ಷ್ಮ ಪರಿಸರ ವಲಯ ಮತ್ತು ವಿಶ್ವ ಪಾರಂಪರಿಕ ತಾಣ ಕಾನೂನನ್ನು ಜಾರಿಗೆ ತಂದಿದೆ. ಆದರೆ ಕೊಡಗಿನಲ್ಲಿ ಈ ಕಾನೂನು ಬಂಡವಾಳಶಾಹಿಗಳಿಗೆ ಅನ್ವಯವಾಗುತ್ತಿಲ್ಲ, ಬದಲಿಗೆ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮೇಲೆ ಹೇರಲಾಗುತ್ತಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನರು ಇಲ್ಲಿಯವರೆಗೆ ಹಸಿರಿನ ಕೊಡವ ಭೂಮಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಇಂದು ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್, ಬೃಹತ್ ಭೂಪರಿವರ್ತನೆ, ಭೂವಿಲೇವಾರಿ ಮಾಫಿಯಾಗಳು ಹಾಗೂ ಕಪ್ಪುಹಣದ ಬಂಡವಾಳಶಾಹಿಗಳು ಕೊಡವಲ್ಯಾಂಡ್ ನ್ನು ನಾಶ ಮಾಡುತ್ತಿದ್ದಾರೆ ಮತ್ತು ಕೊಡವರನ್ನು ಬಲಿಪಶು ಮಾಡುತ್ತಿದ್ದಾರೆ. ಈ ಎಲ್ಲಾ ಮಾಫಿಯಾಗಳಿಗೆ ಆಡಳಿತ ವ್ಯವಸ್ಥೆಯ ಕೃಪಾ ಕಟಾಕ್ಷವಿದೆ. ಕೊಡವರಿಗೆ ಮಾತೃಭೂಮಿಯಲ್ಲಿ ನೆಲೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ಕೊಡವ ವಿರೋಧಿಗಳ ಬೆಂಬಲವಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಕೊಡವ ಲ್ಯಾಂಡ್ ನ್ನು ಉಳಿಸಿಕೊಳ್ಳುವುದಕ್ಕಾಗಿ ಸಿಎನ್‌ಸಿ ಸಂಘಟನೆ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣ, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಆದರೆ ಅಧಿಕಾರದಲ್ಲಿರುವವರು ಹೋರಾಟದ ದಿಕ್ಕು ತಪ್ಪಿಸಿ ಜನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು, ಹೋಂಸ್ಟೇ ಮತ್ತು ಗೋದಾಮುಗಳ ನಿರ್ಮಾಣಕ್ಕೆ ಅನುಮತಿ ನೀಡದೆ ಸತಾಯಿಸಲು ಆರಂಭಿಸಿದ್ದಾರೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಾತೃಭೂಮಿ ಕೊಡವಲ್ಯಾಂಡ್ ಗೆ ಸಂಚಕಾರವಾಗಬಲ್ಲ ಬೃಹತ್ ಭೂಪರಿವರ್ತನೆಗೆ ಮಾತ್ರ ಗುಪ್ತವಾಗಿ ಅನುಮತಿ ನೀಡುತ್ತಿದ್ದಾರೆ. ಭೂಮಾಫಿಯಾಗಳನ್ನು ಪ್ರೀತಿಯಿಂದ ಕಾಣುವ ಆಡಳಿತ ವರ್ಗ ಮುಗ್ಧ ರೈತರನ್ನು ಹಾಗೂ ಮೂಲ ನಿವಾಸಿಗಳನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಹೋರಾಟ ನಡೆಸುವ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಬಂಡವಾಳಶಾಹಿಗಳಿಗೆ 99 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ಮೊದಲು ವಶಕ್ಕೆ ಪಡೆಯಲಿ. ಜಿಲ್ಲೆಯಲ್ಲಿ ನಡೆದಿರುವ ಬೃಹತ್ ಭೂಪರಿವರ್ತನೆಗಳ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು. ಹಾರಂಗಿ ಜಲಾಶಯ ಹಾಗೂ ದಕ್ಷಿಣಕೊಡಗಿನಲ್ಲಿ ಲಕ್ಷ್ಮಣ ತೀರ್ಥ ನದಿಗೆ ಕಟ್ಟಿರುವ ಕಟ್ಟೆಯಲ್ಲಿ ಹೂಳು ತುಂಬಿದ್ದು, ಇದು ಅಪಾಯದ ಮುನ್ಸೂಚನೆಯಾಗಿದೆ. ಜಲಾಶಯದ ಹೂಳು ತೆಗೆಯದೆ ಮತ್ತು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವುದರಿಂದ ಜಲನಾಳಗಳಿಗೆ ಹಾನಿಯಾಗಿ ಭೂಗರ್ಭ ಸೀಳಿ ಅನಾಹುತಗಳಿಗೆ ದಾರಿಯಾಗುವ ಸಾಧ್ಯತೆಗಳಿದೆ. ವಯನಾಡಿನಂತಹ ದುರಂತ ಕೊಡಗಿನಲ್ಲೂ ಸಂಭವಿಸಬಾರದೆಂದಾರೆ ಆಡಳಿತ ವ್ಯವಸ್ಥೆ ತಕ್ಷಣ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದರು. ಟೌನ್ ಶಿಪ್, ನಗರೀಕರಣ, ವಿಲ್ಲಾ, ರೆಸಾಟ್ರ‍್ಗಳ ನಿರ್ಮಾಣದಿಂದ ಕೊಡಗಿನಲ್ಲಿ ಜನಸಂಖ್ಯೆ ಹೆಚ್ಚಾಗಲಿದ್ದು, ಇದನ್ನು ತಡೆದೊಳ್ಳುವ ಶಕ್ತಿ ಇಲ್ಲಿನ ಭೂಪ್ರದೇಶಕ್ಕೆ, ಭೂದೇವಿಗೆ ಇಲ್ಲವಾದ ಕಾರಣ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದರು. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು `ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್ ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಜನಜಾಗೃತಿ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದ ಸಿಎನ್‌ಸಿ ಪ್ರಮುಖರು ಹಾಗೂ ಗ್ರಾಮಸ್ಥರು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕೊನೆಯಲ್ಲಿ ರಾಷ್ಟ್ರಗೀತೆ ಜನಗಣಮನ ಹಾಡಲಾಯಿತು. ಬೊಜ್ಜಂಗಡ ಯಶ್ಮಾ, ಚಕ್ಕೇರ ಜಾನ್ಸಿ, ಮಂದಂಗಡ ತಾರಾ, ಚಂಗುಲಂಡ ಸೂರಜ್, ಬೊಜ್ಜಂಗಡ ಸುನಿಲ್, ಕೋಳೇರ ರಾಜ, ಬೊಜ್ಜಂಗಡ ಬೋಪಣ್ಣ, ಬೊಜ್ಜಂಗಡ ತಮ್ಮಯ್ಯ, ದಡ್ಡೇರ ಸುರೇಶ್, ನೂರೇರ ಚಿಟ್ಟಿಯಪ್ಪ, ಮಂಡೇಚಂಡ ಪೊನ್ನಪ್ಪ, ಮಂಡಂಗಡ ಬೋಪಣ್ಣ, ಬಲ್ಯಮಿದೇರಿರ ಪ್ರಕಾಶ್, ಚಕ್ಕೇರ ರಮೇಶ್, ಬಲ್ಯಮಾಡ ಸೋಮಯ್ಯ, ಬಲ್ಯಮಾಡ ನಂಜಪ್ಪ, ಮಂದಂಗಡ ವಸಂತ್, ಬಲ್ಯಮಾಡ ಅಯ್ಯಪ್ಪ, ಅಚೆಯಾಡ ಸುಕ್‌ದೇವ, ಚಕ್ಕೇರ ಪ್ರಭು, ಕಿರಿಯಮಾಡ ಮಿಲನ್, ಚೊಟ್ಟೆಯಂಡಮಾಡ ಬಿಪಿನ್, ಮಂದಂಗಡ ರವಿ, ಕೇಚಮಾಡ ತಮ್ಮಯ್ಯ, ಬೊಳ್ಳಜಿರ ಭೀಮಯ್ಯ, ಮಂದಂಗಡ ಯೋಗೇಶ, ನೆಲ್ಲಮಾಡ ಪ್ರದೀಪ್, ಚೊಟ್ಟೆಯಂಡಮಾಡ ಅನಿಲ್, ಕಾಳ್ತಂಡ ಮೋಹನ್, ಐಪುಮಾಡ ರೋನಿ, ಇಟ್ಟಿರ ಪೊನ್ನಣ್ಣ, ಮಂದಂಗಡ ಈಶ, ಬಯವಂಡ ಕಾಳಪ್ಪ, ಕಲ್ಲೆಂಗಡ ಜೀವನ್, ಚಂಗುಲಂಡ ತಿಮ್ಮಯ್ಯ, ಚಂಗುಲಂಡ ಕರುಂಬಯ್ಯ, ಕಿರಿಯಮಾಡ ಈಶ, ಕುಪ್ಪಣಮಾಡ ಸೋಮಯ್ಯ, ಚೊಟ್ಟೆಯಂಡಮಾಡ ರಘು, ಕಳ್ಳೆಂಗಡ ಸಂಜು, ಮಂದಂಗಡ ಅರ್ಜುನ, ಚಕ್ಕೇರ ನಟೇಶ್, ಚಕ್ಕೇರ ರಾಜೇಶ್, ಚೆಕ್ಕೇರ ಸುರೇಶ್, ಮಂದಂಗಡ ಕಿಶು, ಕಿರಿಯಮಾಡ ಶಶಿ, ಕಿರಿಯಮಾಡ ಪೊನ್ನಪ್ಪ, ಬಯವಂಡ ಮೋಹನ್ ಜುಗುನು, ಅಜ್ಜಿಕುಟ್ಟೀರ ಹರೀಶ, ದಡ್ಡೇರ ಪ್ರಭು, ಮಾರಮಾಡ ದೊರೆ, ಕುಪ್ಪಣಮಾಡ ಗಣೇಶ್, ಮಂದಂಗಡ ಸುರೇಶ್, ಬಯವಂಡ ವಿಶ್ವನಾಥ್, ಕೊಡಂಗಡ ಅಣ್ಣಯ್ಯ, ಕಿರಿಯಮಾಡ ಶರಿನ್, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಗಿರೀಶ್, ಅಪ್ಪೆಯಂಗಡ ಮಾಲೆ ಪಾಲ್ಗೊಂಡಿದ್ದರು. ::: ಶ್ರೀಮಂಗಲದಲ್ಲಿ ಜನಜಾಗೃತಿ ::: ಸಿಎನ್‌ಸಿ ವತಿಯಿಂದ ಸೆ.30 ರಂದು ಶ್ರೀಮಂಗಲದಲ್ಲಿ ಶಾಂತಿಯುತ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ಮಾಹಿತಿ ನೀಡಿದರು.