ಮಡಿಕೇರಿ ಸೆ.17 NEWS DESK : ಕನ್ನಡ ನಾಡಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖರಾದ ಸರ್.ಎಂ.ವಿಶ್ವೇಶ್ವರಯ್ಯರವರು ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ದಾರ್ಶನಿಕರಾಗಿ ದುಡಿದವರು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಕರಲ್ಲಿ ಒಬ್ಬರಾದ ಸರ್.ಎಂ ವಿಶ್ವೇಶ್ವರಯ್ಯ ಅವರು 164ನೇ ಜನ್ಮದಿನಾಚರಣೆಯ ಕುರಿತು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನವನ್ನು ಇಂಜಿನಿಯರ್ಸ್ ಡೇ – ಅಭಿಯಂತರರ ದಿನವನ್ನಾಗಿ ಕರ್ನಾಟಕ ಸರ್ಕಾರ ಆಚರಿಸುತ್ತಿದೆ. 15.09.1861ರಲ್ಲಿ ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ ದಂಪತಿಗಳ ಪುತ್ರನಾಗಿ ಇಂದಿನ ಕೋಲಾರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮದಲ್ಲಿ ಜನ್ಮ ಪಡೆದರು. ಇವರು ಬೆಂಗಳೂರು ಮತ್ತು ಪೂನಾದಲ್ಲಿ ವಿದ್ಯಾಭ್ಯಾಸ ಪಡೆದು ಇಂಜಿನಿಯರ್ ಪದವೀಧರರಾದರು.ಮುಂಬೈ ಕರ್ನಾಟಕದ ಕುಡಿಯುವ ನೀರು ಯೋಜನೆ, ಹೈದರಾಬಾದ್ ನಿಜಾಮರ ಆಡಳಿತದಲ್ಲಿ ಹೈದರಾಬಾದಿಗೆ ಒಳಚರಂಡಿ ನಿರ್ಮಾಣ ಕಾರ್ಯ ರಚಿಸಿದರು. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಹ್ವಾನದ ಮೇಲೆ ಮೈಸೂರಿಗೆ ಬಂದು ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಹಾರಾಜರ ನಿರ್ದೇಶನದಂತೆ ಮುಂದುವರಿಸಿದರು. 1911ರಲ್ಲಿ ಆರ್ಥಿಕತೆಗೆ ಬಲ ತುಂಬುವ ಯೋಜನೆಗಳನ್ನು ರೂಪಿಸಿದ ಸರ್ ಎಂ ವಿಶ್ವೇಶ್ವರಯ್ಯ ರವರು ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾದರು. ರಸ್ತೆಗಳು, ರೈಲ್ವೆ ಮಾರ್ಗ, ನೀರಾವರಿ ಕೆರೆಕಟ್ಟೆ ನಿರ್ಮಾಣ ಮುಂತಾದ ಕಾರ್ಯಗಳನ್ನು ಮಾಡಿದ ಇವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1912 ರಲ್ಲಿ ದಿವಾನರಾಗಿ ನೇಮಿಸಿಕೊಂಡರು. ನಾಲ್ವಡಿ ಅವರ ಸೂಚನೆಯಂತೆ ಕೃಷ್ಣರಾಜಸಾಗರ ಅಣೆಕಟ್ಟಿನ ನಿರ್ಮಾಣ, ಮೈಸೂರು ಗಂಧದ ಕಾರ್ಖಾನೆ, ಭದ್ರಾವತಿ ಉಕ್ಕಿನ ಕಾರ್ಖಾನೆ, ಭದ್ರಾವತಿ ಪೇಪರ್ ಕಾರ್ಖಾನೆ, ಜಯಚಾಮರಾಜೇಂದ್ರ ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆ, ರಾಜ್ಯ ಚೇಂಬರ್ ಆಫ್ ಕಾಮರ್ಸ್, ಕನ್ನಡ ಸಾಹಿತ್ಯ ಪರಿಷತ್ತು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು,ಮೈಸೂರು ವಿಶ್ವವಿದ್ಯಾಲಯ ಗಳ ಸ್ಥಾಪನೆಗೆ ಕಾರಣೀಭೂತರಾದರು ಎಂದು ರಮೇಶ್ ತಿಳಿಸಿದರು. 1955ರಲ್ಲಿ ಅವರ ಸಾರ್ವಜನಿಕ ಅಭಿವೃದ್ಧಿಯ ಕೆಲಸಗಳನ್ನು ಗಮನಿಸಿದ ಭಾರತ ಸರ್ಕಾರ ಇವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಭಾರತದ ಪ್ರತಿಭಾವಂತ ಇಂಜಿನಿಯರ್ ಆಗಿದ್ದ ಸರ್ ಎಂ ವಿಶ್ವೇಶ್ವರಯ್ಯ ಅವರು ಬ್ರಿಟಿಷ್ ಸರಕಾರದಲ್ಲೂ ಕಾರ್ಯನಿರ್ವಹಿಸಿದ್ದರು. 102 ವರ್ಷ ಬಾಳು ಬದುಕಿದ ಸರ್.ಎಂ.ವಿಶ್ವೇಶ್ವರಯ್ಯ ರವರು 14.04.1962 ರಂದು ತಮ್ಮ 102ನೇ ವಯಸಿದಲ್ಲಿ ದೈವಾಧೀನರಾದರು. ಅಂತಹ ದಾರ್ಶನಿಕರು ಹಾಕಿಕೊಟ್ಟ ಹಾದಿಯಲ್ಲಿ ಕನ್ನಡ ನಾಡನ್ನು ಪ್ರಬಲವಾಗಿ ಕಟ್ಟಲು ನಾವು ಮುಂದಾಗಬೇಕು ಎಂದು ಟಿ.ಪಿ.ರಮೇಶ್ ನುಡಿದರು. ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ ಅನಂತಶಯನ ಅವರು ಮಾತನಾಡಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಸರ್ ಎಂ ವಿಶ್ವೇಶ್ವರಯ್ಯನವರು ವಿದ್ಯಾರ್ಥಿ ಮತ್ತು ಯುವಜನರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ತಿಳುವಳಿಕೆ ನೀಡಿ ಭವಿಷ್ಯ ರೂಪಿಸಿಕೊಳ್ಳಲು ಮಾರ್ಗದರ್ಶನ ಮಾಡಿದವರು ಎಂದರು. ಭಾರತ ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಆಯುಕ್ತರಾದ ಕೆ.ಟಿ ಬೇಬಿ ಮ್ಯಾಥ್ಯೂ, ಸಿರಿಗಂಧ ವೇದಿಕೆಯ ಅಧ್ಯಕ್ಷರಾದ ಅಲ್ಲಾರಂಡ ವಿಠಲ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ ಎಸ್.ಎಸ್ ಸಂಪತ್ ಕುಮಾರ್ ಸರ್ ಎಂ ವಿಶ್ವೇಶ್ವರಯ್ಯ ಕುರಿತು ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರ್ನಾಡು ಹೋಬಳಿ ಕ.ಸಾ.ಪ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್, ಜಿಲ್ಲಾ ಕ.ಸಾ.ಪ ಮಾಜಿ ಗೌರವ ಕೋಶಾಧಿಕಾರಿ ಬಿ.ಎಂ. ವಾಸು ರೈ ಉಪಸ್ಥಿತರಿದ್ದರು. ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ರೇವತಿ ರಮೇಶ್ ವಂದಿಸಿದರು.