ಕುಶಾಲನಗರ, ಸೆ.17 NEWS DESK : ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ಸಹಯೋಗದೊಂದಿಗೆ ಶಾಲಾ ಶಿಕ್ಷಣ ಇಲಾಖೆಯ ಸೋಮವಾರಪೇಟೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕೂಡಿಗೆ ಕ್ಲಸ್ಟರ್ ನ ಕೂಡಿಗೆ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲ್ಲೂಕುಮಟ್ಟದ ವಿಜ್ಞಾನ ವಿಚಾರ ಗೋಷ್ಠಿ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ನಾಟಕ ಸ್ಪರ್ಧೆ ನಡೆಯಿತು. ವಿವಿಧ ಪ್ರೌಢಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಎಲ್ಲಾ ಸ್ಪರ್ಧೆಗಳಲ್ಲಿ ಸಂತಸದಿಂದ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.
ವಿಜ್ಞಾನ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಂ.ವಿ.ಮಂಜೇಶ್, ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಲು ಇಂತಹ ವಿಜ್ಞಾನ ಸ್ಪರ್ಧೆಗಳು ಉತ್ತಮ ವೇದಿಕೆ ಒದಗಿಸುತ್ತವೆ ಎಂದರು. ವಿದ್ಯಾರ್ಥಿಗಳಿಗೆ ವಿಜ್ಞಾನದ ಕುತೂಹಲ ಹಾಗೂ ಮಹತ್ವದ ಬಗ್ಗೆ ಅರಿವು ಮೂಡಿಸಲು ಇಂತಹ ವಸ್ತು ಪ್ರದರ್ಶನಗಳು ಪ್ರಮುಖ ಪಾತ್ರ ವಹಿಸುತ್ತದೆ. ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ತಾರ್ಕಿಕ ಶಕ್ತಿ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದರು. ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಮನೋಭಾವ ಬೆಳೆಸುವುದರ ಜತೆಗೆ ಸ್ಪರ್ಧಾತ್ಮಕ ಕಲಿಕೆಗೆ ಮಹತ್ವ ನೀಡಬೇಕು ಎಂದು ಮಂಜೇಶ್ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಪರ್ಧಾ ನೋಡಲ್ ಅಧಿಕಾರಿ ಕೆ.ಬಿ.ರಾಧಾಕೃಷ್ಣ, ವಿಜ್ಞಾನ ಸ್ಪರ್ಧೆಗಳು ವಿದ್ಯಾರ್ಥಿಗಳ ಆಲೋಚನೆ ಹಾಗೂ ತಾರ್ಕಿಕ ಶಕ್ತಿಯನ್ನು ಹೆಚ್ಚಿಸುತ್ತವೆ’ ಎಂದರು. ಶಾಲಾ ಮುಖ್ಯ ಶಿಕ್ಷಕಿ ಎನ್.ಪುಷ್ಪ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು. ಶಾಲೆಯ ಆಡಳಿತ ಮಂಡಳಿ ನಿರ್ದೇಶಕ ಕೆ.ಎನ್.ಮಂಜುನಾಥ್, ಸಿ.ಆರ್.ಪಿ., ಕೆ. ಶಾಂತಕುಮಾರ್,
ಸಂಪನ್ಮೂಲ ವ್ಯಕ್ತಿಗಳಾದ ಕೆ.ಬಿ.ರಾಧಾಕೃಷ್ಣ, ಎಸ್.ಎಸ್.ಶಿವಕುಮಾರ್, ವಿಜ್ಞಾನ ಶಿಕ್ಷಕರಾದ ಎನ್. ಕೆ.ಮಾಲಾದೇವಿ, ಶಶಿಧರ್, ಬಿ.ಪಿ.ಸವಿತ, ಕಮಲಮ್ಮ, ಅನಿತಾ, ಗಿರೀಶ್, ರಮ್ಯ, ಮಂಗಳ, ಬಿಂದು, ಮಧು, ಜಿ.ಶ್ರೀಹರ್ಷ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.