ಮಡಿಕೇರಿ NEWS DESK ಸೆ.18 : ಪೊನ್ನಂಪೇಟೆ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ ಸರ್ಕಾರದಿಂದ 5 ಕೋಟಿ ರೂ. ಬಿಡುಗಡೆಯಾಗಿದ್ದು, ಪ್ರಸಕ್ತ ವರ್ಷದಲ್ಲಿ ಕ್ರೀಡಾ ವಸತಿ ನಿಲಯ ನಿರ್ಮಾಣ ಸಂಬ0ಧ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಸ್ಥಳೀಯರಾದ ಮೂಕಳೇರ ಕುಶಾಲಪ್ಪ ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿದರು. ಪೊನ್ನಂಪೇಟೆಯ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಆರಂಭದಲ್ಲಿ ಮಾತನಾಡಿದ ಸ್ಥಳೀಯರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಮೂಕಳೇರ ಕುಶಾಲಪ್ಪ ಅವರು ಸ್ವಾತಂತ್ರö್ಯ ಪೂರ್ವದಿಂದಲೂ ಪೊನ್ನಂಪೇಟೆ ಪ್ರೌಢಶಾಲೆ ಇತ್ತು. ಪ್ರೌಢಶಾಲೆಗೆ ಒಂದು ಇತಿಹಾಸವಿದ್ದು, ಇದರ ಅಸ್ತಿತ್ವವನ್ನು ಉಳಿಸಿಕೊಳ್ಳುವಂತಾಗಬೇಕು. ಜೊತೆಗೆ ಇಲ್ಲಿನ ವಿದ್ಯಾರ್ಥಿಗಳಿಗೂ ಸಹ ಅನುಕೂಲವಾಗಬೇಕು ಎಂದು ಪ್ರತಿಪಾದಿಸಿದರು. ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಸರ್ಕಾರದಿಂದ ಪೊನ್ನಂಪೇಟೆಯ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ ಬಜೆಟ್‌ನಲ್ಲಿ 5 ಕೋಟಿ ರೂ. ಪ್ರಕಟಿಸಲಾಗಿತ್ತು, ಅದರಂತೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಪ್ರಸಕ್ತ ವರ್ಷದಲ್ಲಿ ಕ್ರೀಡಾ ವಸತಿ ನಿಲಯ ಆರಂಭಕ್ಕೆ ಚಾಲನೆ ನೀಡಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯವಿರುವ ಭೂಮಿಯನ್ನು ಕ್ರೀಡಾ ಇಲಾಖೆಗೆ ಒದಗಿಸಬೇಕಿದೆ ಎಂದು ತಿಳಿಸಿದರು. ಬಳಿಕ ಪೊನ್ನಂಪೇಟೆ ಕ್ರೀಡಾ ವಸತಿ ನಿಲಯ ಆವರಣದ ಜಾಗ ವೀಕ್ಷಿಸಿದ ಶಾಸಕರಾದ ಪೊನ್ನಣ್ಣ ಅವರು ಅಗತ್ಯವಿರುವ ಭೂಮಿಯನ್ನು ಸರ್ವೇ ಮಾಡಿ ನೀಲನಕ್ಷೆ ತಯಾರಿಸುವಂತೆ ಸಂಬ0ಧಪಟ್ಟ ಎಂಜಿನಿಯರ್‌ಗಳಿಗೆ ಸೂಚಿಸಿದರು. ಪೊನ್ನಂಪೇಟೆಯ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಶೇಷವಾಗಿ 5 ಕೋಟಿ ರೂ. ಬಿಡುಗಡೆ ಮಾಡಿದ್ದು, ಅದನ್ನು ಸದ್ಬಳಕೆ ಮಾಡಬೇಕು. ಶೀಘ್ರ ಪೊನ್ನಂಪೇಟೆ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು. ತಹಶೀಲ್ದಾರ್ ಮೋಹನ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕಕರು, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಹರೀಶ್, ಪ್ರಮುಖರಾದ ಪಿ.ಕೆ.ಪೊನ್ನಪ್ಪ, ಪ್ರಮೋದ್ ಗಣಪತಿ, ಸಾಜಿ ಅಚ್ಚುತ್ತನ್ ಇತರರು ಇದ್ದರು.