ಮಡಿಕೇರಿ NEWS DESK ಸೆ.18 : ಮಡಿಕೇರಿ ರೋಟರಿ ಸಂಸ್ಥೆ ಹಾಗೂ ಆದಾಯ ತೆರಿಗೆ ಇಲಾಖೆಯ ಸಹಭಾಗಿತ್ವದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ವಿದ್ಯಾರ್ಥಿಗಳಿಗೆ ಆದಾಯ ತೆರಿಗೆಯ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು.
ಕಾಲೇಜ್ ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರೋಟರಿ ಸಂಸ್ಥೆಯ ಅಧ್ಯಕ್ಷ ರೋಟರಿಯನ್ ಎಂ.ಸುದಯ್ ನಾಣಯ್ಯ ಅವರು, ಆಡಳಿತ ವ್ಯವಸ್ಥೆ ಜಾರಿಗೆ ಬಂದಲ್ಲಿಂದ ತೆರಿಗೆ ಸಂಗ್ರಹ ಅದರ ಭಾಗವಾಗಿ ಸೇರಿಕೊಂಡಿದೆ. ಈ ವಿಚಾರದಲ್ಲಿ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು ಉತ್ತಮ ಆಡಳಿತಗಾರರಾಗಿ ಪ್ರಸಿದ್ಧಿ ಪಡೆದಿದ್ದರು. ಸಂವಿಧಾನ ರಚನೆಯಾದ ನಂತರ ಅದರಡಿಯಲ್ಲಿ ರೂಪಿಸಿದ ಕಾಯ್ದೆಯನ್ವಯ ಭಾರತ ದೇಶದಲ್ಲಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ ಎಂದು ತಿಳಿಸಿದರು. ರೋಟರಿಯನ್ ಈಶ್ವರ್ ಭಟ್ ಅವರು ಮಾತನಾಡಿ, ಆದಾಯ ತೆರಿಗೆ ಕಾಯ್ದೆಯಲ್ಲಿ ಆದಾಯವನ್ನು ವಿವಿಧ ರೀತಿಯಲ್ಲಿ ವಿಂಗಡಿಸಲಾಗಿದೆ. ಅದರನ್ವಯ ತೆರಿಗೆಯನ್ನು ಜನರಿಂದ ಪಡೆಯಲಾಗುತ್ತದೆ. ವಿದ್ಯಾರ್ಥಿಗಳಿಗೆ ತೆರಿಗೆಯ ಬಗ್ಗೆ ಏನೇ ಸಂಶಯಗಳಿದ್ದರೂ ಮುಕ್ತ ಮನಸ್ಸಿನಿಂದ ಬಗೆಹರಿಸಿಕೊಳ್ಳಬೇಕು. ಆ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು, ವಿದ್ಯಾರ್ಥಿಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ದಿವಾಕರ್ ರಾವ್, ಆದಾಯ ತೆರಿಗೆ ಪಾವತಿಯಿಂದ ದೇಶದಲ್ಲಿ ಅತ್ಯುನ್ನತ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗಿದೆ. ದೇಶದ ಅಭ್ಯುದಯದ ದೃಷ್ಟಿಯಿಂದ ಆದಾಯ ಗಳಿಸುವ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಆದಾಯ ತೆರಿಗೆ ಪಾವತಿಸಬೇಕು. ಆ ಮೂಲಕ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜ್ ನ ಪ್ರಾಂಶುಪಾಲರಾದ ವಿಜಯ್ ಉಪಸ್ಥಿತರಿದ್ದರು. ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಆದಾಯ ತೆರಿಗೆಯ ಮಹತ್ವದ ಕುರಿತು ಮಾಹಿತಿ ಪಡೆದುಕೊಂಡರು. ಆದಾಯ ತೆರಿಗೆ ಇಲಾಖೆಯ ಸಿಬ್ಬಂದಿ ಸಂಭ್ರಮ್ ಕಾರ್ಯಕ್ರಮ ನಿರೂಪಿಸಿದರು.