ಮಡಿಕೇರಿ NEWS DESK ಸೆ.19 : ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಐಕ್ಯ ಹೋರಾಟ ಚಾಲನಾ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆಯ ಕೊಡಗು ಜಿಲ್ಲಾ ಶಾಖೆ ವತಿಯಿಂದ ದಲಿತ ಸಂಘರ್ಷ ಸಮಿತಿಯ 50ನೇ ವಾರ್ಷಿಕೋತ್ಸವದ ಅಂಗವಾಗಿ ಸೆ.21 ರಂದು ಶನಿವಾರಸಂತೆಯ ಗುಡುಗಳಲೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮಾನವ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷ ಜೆ.ಎಲ್.ಜನಾರ್ಧನ್ ಅವರು, ಅಲ್ಪಸಂಖ್ಯಾತ, ಹಿಂದುಳಿದ, ದಲಿತ, ಶೋಷಿತ ಸಮುದಾಯಗಳ ಸಾಮಾಜಿಕ ಐಕ್ಯತೆಗಾಗಿ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮವನ್ನು ಶನಿವಾರ ಬೆಳಿಗೆ 10.30 ಗಂಟೆಗೆ ಗುಡುಗಳಲೆಯ ಆರ್.ವಿ.ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಲಿದ್ದು, ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಜಿಲ್ಲಾ ಸಂಚಾಲಕ ಎಂ.ಎಸ್.ವೀರೇಂದ್ರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಯೋಜಕ ಜೆ.ಆರ್.ಪಾಲಾಕ್ಷ ಅವರು ಆಶಯ ನುಡಿಗಳನ್ನಾಲಿದ್ದು, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ನಂಜನಗೂಡು ಶಾಸಕ ದರ್ಶನ್ ಧ್ರುವ ನಾರಾಯಣ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ದೇವರಾಜ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಬೆಂಗಳೂರು ಬಿಬಿಎಂಪಿ ಮಾಜಿ ಆಯುಕ್ತ ಸಿದ್ಧಯ್ಯ, ಮಾನವ ಬಂಧುತ್ವ ವೇದಿಕೆಯ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ, ವಿಚಾರವಾದಿ ಹನಗವಾಡಿ ರುದ್ರಪ್ಪ, ನಿವೃತ್ತ ಐಜಿಪಿ ಕೆ.ಅರ್ಕೇಶ್, ಹಿರಿಯ ವಕೀಲ ಹೆಚ್.ಎಸ್.ಚಂದ್ರಮೌಳಿ, ಅಲ್ಪಸಂಖ್ಯಾತ ಸಮುದಾಯದ ಧರ್ಮಗುರು ಶಫಿ ಷಾ ಅದಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಜೆ.ಎಲ್.ಜನಾರ್ಧನ್ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲಾ ದಲಿತಪರ ಸಂಘಟನೆಗಳು, ಅಲ್ಪಸಂಖ್ಯಾತ ಬಂಧುಗಳು ಹಾಗೂ ವಿಚಾರವಾದಿಗಳು ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.