ಮಡಿಕೇರಿ NEWS DESK ಸೆ.19 : ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ 24,37,071 ರೂ. ಲಾಭ ಗಳಿಸಿದೆ. ಸಂಘದ ವಾರ್ಷಿಕ ಮಹಾಸಭೆ ಸೆ.22 ರಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎಸ್.ಚೇತನ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಹಾಸಭೆಯಲ್ಲಿ ಸದಸ್ಯರ ಮಕ್ಕಳಿಗೆ ಪತ್ರಿಭಾ ಪುರಸ್ಕಾರ, ಸಾಧಕರಿಗೆ, ಹಿರಿಯ ಸದಸ್ಯರಿಗೆ ಸನ್ಮಾನ, 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುದು ಎಂದು ಹೇಳಿದ್ದಾರೆ.
::: 24.37 ಲಕ್ಷ ರೂ. ಲಾಭ ::: ಸಂಘವು ಪ್ರಸ್ತುತ 2352 ಸದಸ್ಯರನ್ನು ಹೊಂದಿದ್ದು, ಸುಮಾರು 24,37,071.61 ರೂ. ಲಾಭ ಗಳಿಸಿದೆ. ರೂ.2,90,49,700 ಪಾಲು ಬಂಡವಾಳವಿದ್ದು, ಒಟ್ಟು ವ್ಯವಹಾರ ರೂ.33,57,75,147.40 ಆಗಿದೆ. ಠೇವಣಿ ರೂ.12,90,09,104.75 ಇದ್ದು, ಪ್ರಸಕ್ತ ವರ್ಷ ರೂ.6,05,40,700 ಸಾಲ ನೀಡಲಾಗಿದೆ. ಒಟ್ಟು ಸಾಲ ರೂ.13,97,11,001 ಆಗಿದ್ದು, ದುಡಿಯುವ ಬಂಡವಾಳ ರೂ.17,77,11,552 ಆಗಿದೆ. ರೂ.87,00,073 ಕ್ಷೇಮ ನಿಧಿ ಮತ್ತು ರೂ.95,75,123.65 ಇತರೆ ನಿಧಿ ಇದೆ ಎಂದು ಚೇತನ್ ತಿಳಿಸಿದ್ದಾರೆ. ::: 19 ಕೋಟಿ ಆಸ್ತಿ ::: ಸ್ವಾಯತ್ತತೆ, ಸ್ವಯಂನಿಯಂತ್ರಣ, ಸ್ವಯಂ ಆಡಳಿತ ತತ್ವದಂತೆ ಸೌಹಾರ್ದ ಸಹಕಾರಿ ಕಾಯ್ದೆಯಡಿ ನೋಂದಾಯಿಸಲ್ಪಟ್ಟ ಕೊಡಗಿನ ಮೊಟ್ಟ ಮೊದಲ ಸಹಕಾರಿ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ಶಿಕ್ಷಕರ ಆರ್ಥಿಕ ಅವಶ್ಯಕತೆಗಳಿಗೆ ವಿವಿಧ ರೂಪದಲ್ಲಿ ಸಾಲ ನೀಡಿ ಅವರ ಪ್ರಗತಿಗೆ ಶ್ರಮಿಸುತ್ತಿದೆ. ಸ್ವಂತ ಬಂಡವಾಳದ ಮೇಲೆ ವ್ಯವಹಾರ ನಡೆಸುತ್ತಿದ್ದು, ಮಡಿಕೇರಿಯ ಮುಖ್ಯ ರಸ್ತೆಯಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿದೆ. ಅಲ್ಲದೆ ನಗರದ ಬ್ರಾಹ್ಮಣರ ಬೀದಿಯಲ್ಲಿ 42 ಸೆಂಟ್ ಜಾಗದಲ್ಲಿ ಗುರುಸದನ ಕಟ್ಟಡವಿದ್ದು, ಸಂಘದ ಬಳಿ ಪ್ರಸ್ತುತ ಒಟ್ಟು 19 ಕೋಟಿ ರೂ.ಮೌಲ್ಯದ ಆಸ್ತಿ ಇದೆ ಎಂದು ಹೆಚ್.ಎಸ್.ಚೇತನ್ ಮಾಹಿತಿ ನೀಡಿದ್ದಾರೆ.