ಮಡಿಕೇರಿ NEWS DESK ಸೆ.19 : ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕುಶಾಲನಗರ ಹೋಬಳಿ ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಮಹೋತ್ಸವ ಸೆ.25ರಂದು ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1999ರಲ್ಲಿ ಆರಂಭಗೊಂಡ ಸಂಘ ಇದೀಗ 25 ವರ್ಷ ಪೂರೈಸಿದೆ. ಈ ಸಂಬAದ ಈಗಾಗಲೇ ಬೆಳ್ಳಿಹಬ್ಬದ ಅಂಗವಾಗಿ 25 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಡಗು ಜಿಲ್ಲಾ ಸಂಘದ ಸದಸ್ಯರುಗಳಿಗೆ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ಸೇರಿದಂತೆ ಹಲವು ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಕುಶಾಲನಗರ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬೆಳ್ಳಿಹಬ್ಬ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಅವರು ಉದ್ಘಾಟಿಸಲಿದ್ದಾರೆ. ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಹಾಗೂ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮತ್ತು ಸಂಸದ ಯದುವೀರ್ ಒಡೆಯರ್ ಅವರು ಕಳೆದ 25 ವರ್ಷಗಳ ಕಾಲ ಸಂಘದ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಆಶಯ ಭಾಷಣ ಮಾಡುವರು. ಶಕ್ತಿ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್.ಸವಿತಾ ರೈ, ರಾಜ್ಯ ಉಪಾಧ್ಯಕ್ಷ ರಮೇಶ್ ಕುಟ್ಟಪ್ಪ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ತಾಲ್ಲೂಕು ಸಂಘದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಹಾಗೂ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಅವರು ನೆರವೇರಿಸುವರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ನಡುವೆ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದ ವಿಜೇತರಿಗೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಿ.ಲೋಕೇಶ್ ಹಾಗೂ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಬಹುಮಾನ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಸುನಿಲ್ ಪೊನ್ನೆಟ್ಟಿ, ರಾಜ್ಯ ಸಮಿತಿ ಸದಸ್ಯ ಟಿ.ಎನ್.ಮಂಜುನಾಥ್ ಪಾಲ್ಗೊಳ್ಳುವರು ಎಂದು ಚಂದ್ರಮೋಹನ್ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಕಾರ್ಯದರ್ಶಿ ಕೆ.ಕೆ.ನಾಗರಾಜ್ ಶೆಟ್ಟಿ, ಬೆಳ್ಳಿ ಹಬ್ಬ ಸ್ವಾಗತ ಸಮಿತಿ ಸಹ ಸಂಚಾಲಕ ವಿನೋದ್ ಹೆಚ್.ವಿ, ಪ್ರಚಾರ ಸಮಿತಿ ಸಂಚಾಲಕ ರಘು ಹೆಬ್ಬಾಲೆ ಹಾಗೂ ಕ್ರೀಡಾ ಸಂಚಾಲಕ ಶಿವರಾಜ್ ಕೆ.ಜೆ ಉಪಸ್ಥಿತರಿದ್ದರು.