ಸುಂಟಿಕೊಪ್ಪ ಸೆ.21 NEWS DESK : ಮಾದಾಪುರ ಎಸ್‍ಜೆಎಮ್ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಎಸ್‍ಜೆಎಮ್ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮುರುಗ ಮಠ ಮೋಕ್ಷ ಪತಿ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯಾಗಿದೆ. ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಮೂಲಕ ಜಿಲ್ಲೆ ರಾಜ್ಯ ಮಟ್ಟದಲ್ಲಿ ಪ್ರತಿಭೆಗಳು ಬೆಳಗಲೆಂದು ಶುಭ ಹಾರೈಸಿದರು. ರಮಾನಾಥಪುರ ಆಯುರ್ವೇದಿಕ್ ಆಸ್ಪತ್ರೆಯ ಡಾ.ಹರ್ಷ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಸಂದರ್ಭದಲ್ಲಿ ಅತಿಥಿಗಳು, ಶಿಕ್ಷಕರು ಹಾಗೂ ಪೋಷಕರು ಹೇಳುವ ಮಾತುಗಳಿಂದ ಕಿರಿ ಕಿರಿ ಉಂಟಾಗುವ ಭಾವನೆ ನಿಮ್ಮಲ್ಲಿ ಮೂಡುತ್ತದೆ ಆದರೆ ಮುಂದಿನ ಭವಿಷ್ಯದಲ್ಲಿ ಈ ಮಾತುಗಳು ಬದುಕಿನ ದಾರಿ ದೀಪವಾಗಲಿದೆ ಎಂದು ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕ ಪೆಮ್ಮಯ್ಯ, ಪ್ರೊ.ಕಬ್ಬಡ್ಡಿ ಆಟಗಾರ ಅವಿನಾಶ್, ಸುಂಟಿಕೊಪ್ಪ ಉದ್ಯಮಿ ಅನೂಪ್, ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಮಂಜುನಾಥ್, ಮುಖ್ಯ ಶಿಕ್ಷಕಿ ಪ್ರಜ್ಞಾ, ಶಾಲಾ ಆಡಳಿತ ಮಂಡಳಿಯ ಅನಿಶಕುಮಾರ್, ಕುಮಾರ್, ಪ್ರದೀಶ್, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಉಪಸ್ಥಿತರಿದ್ದರು. ಕ್ಲಸ್ಟರ್ ವಿಭಾಗದ 15 ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ವಿಜೇತ ಮಕ್ಕಳಿಗೆ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಮಂಜುನಾಥ್ ಪ್ರಮಾಣ ಪತ್ರ ನೀಡಿದರು. ಶಿಕ್ಷಕಿ ಪ್ರಿಯ ನಿರೂಪಿಸಿದರು. ಶಿಕ್ಷಕಿ ಜೂರ ವಂದಿಸಿದರು.