ಮಡಿಕೇರಿ NEWS DESK ಸೆ.23 : ನಗರದ ಜನತೆಯ ಕುಡಿಯುವ ನೀರಿನ ಸಮಸ್ಯೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ವಿಶೇಷ ಪ್ರಯತ್ನದಿಂದ ಮುಕ್ತಿ ದೊರಕಿದಂತಾಗಿದೆ. ಸುಮಾರು 35 ಸಾವಿರ ಜನಸಂಖ್ಯೆ ಹೊಂದಿರುವ ಮಡಿಕೇರಿ ನಗರದ ಜನತೆಗೆ ಕುಡಿಯುವ ನೀರನ್ನು ಪೂರೈಸುವ ಕೂಟು ಹೊಳೆ ಘಟಕದಲ್ಲಿ 300 ಹೆಚ್.ಪಿ ಯ ಎರಡು ಮೋಟಾರು ಪಂಪ್ ಇದ್ದು ಹನ್ನೆರಡರಿಂದ ಹದಿನಾರು ಗಂಟೆಗಳ ಕಾಲ ಚಾಲನೆ ಮಾಡುವ ಸಾಮರ್ಥ್ಯ ಹೊಂದಿತ್ತು. ಕೆಲವೊಮ್ಮೆ ಒಂದು ಮೋಟಾರ್ ಕೆಟ್ಟು ನಿಂತಾಗ ಕೇವಲ 8 ಗಂಟೆಗಳ ಕಾಲ ಪಂಪ್ ಮಾಡುವುದರಿಂದ ನೀರು ಪೂರೈಕೆಯಲ್ಲಿ ವ್ಯತಯ ಉಂಟಾಗುತ್ತಿತ್ತು. ಇದನ್ನು ಕಳೆದ ವರ್ಷ ಗಮನಿಸಿದ ಮಂತರ್ ಗೌಡ ರವರು ನಗರ ಸಭೆಯಿಂದ ವೆಚ್ಚ ಭರಿಸುವುದು ಅಸಾಧ್ಯ ವಾದ ಹಿನ್ನಲೆಯಲ್ಲಿ ವಿಶೇಷವಾಗಿ ಅನುದಾನ ಬಳಕೆಗೆ ನಿರ್ಧರಿಸಿದ್ದರು.ಹಾಗಾಗಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನಿಧಿಯಿಂದ 46 ಲಕ್ಷ ರೂಗಳ ವೆಚ್ಚದಲ್ಲಿ ನೂತನ 300 ಹೆಚ್.ಪಿ ಸಾಮರ್ಥ್ಯ ದ ಪಂಪ್ ಅಳವಡಿಕೆಗೆ ನಿರ್ದೇಶನ ನೀಡಿದ ಮೇರೆಗೆ ಮೂರನೆ ಯಂತ್ರ ಅಳವಡಿಸಿ ಇಂದು ಕಾರ್ಯಾರಂಭ ಮಾಡಲಾಯಿತು. ಇದರಿಂದ ಮಡಿಕೇರಿ ನಗರದ ನೀರಿನ ಸಮಸ್ಯೆ ಬಗೆಹರಿದಂತೆ ಆಗಿದೆ. ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ ಅವರು ಮಡಿಕೇರಿ ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿಸುವ ಹಂಬಲ ಹೊಂದಿದ್ದೇನೆ. ಇದಕ್ಕೆ ಜನರ ಸಹಕಾರ ಮತ್ತು ಬೆಂಬಲ ಬೇಕೆಂದು ಕೋರಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ ಕಳೆದ ವರ್ಷ ಹೆಚ್ಚುವರಿ ಪಂಪ್ ಮೋಟಾರ್ ನ್ನು ನೀಡಲು ಆದ್ಯತೆ ನೀಡುತ್ತೇನೆ ಎಂದು ಶಾಸಕರು ನಗರದ ಜನತೆಗೆ ಆಶ್ವಾಸನೆ ನೀಡಿದ್ದರು. ಈಗ ಅದನ್ನು ಈಡೇರಿಸಿ ನುಡಿದಂತೆ ನಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರ ಸಭೆಯ ಆಯುಕ್ತ ಹೆಚ್.ಆರ್.ರಮೇಶ್, ಮೂಡಾ ಸದಸ್ಯರಾದ ಆರ್.ಪಿ.ಚಂದ್ರಶೇಖರ್, ಮಿನಾಜ್ ಪ್ರವೀಣ್, ನಗರಸಭಾ ಸದಸ್ಯರಾದ ಅನಿತಾ ಪೂವಯ್ಯ, ಶ್ವೇತಾ ಪ್ರಶಾಂತ್, ಸಬಿತ, ಜುಲೇಕಾಬಿ, ಪ್ರಮುಖರಾದ ಪ್ರಕಾಶ್ ಆಚಾರ್ಯ, ವಿ.ಜಿ.ಮೋಹನ್, ಹರಿಪ್ರಸಾದ್, ಶಶಿಕಲಾ ಸೇರಿದಂತೆ ಪ್ರಮುಖರು ಹಾಜರಿದ್ದರು.