ಮಡಿಕೇರಿ NEWS DESK ಸೆ.23 : ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ ಸಂಘಟನೆ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಿಐಟಿಯು ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕ ಸಂಘಟನೆಗಳ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳುತ್ತಿದೆ. ವಾರ್ಷಿಕ ರಿಟರ್ನ್ಸ್ ಸಲ್ಲಿಸುವಲ್ಲಿ ಕಾರ್ಮಿಕ ಸಂಘಗಳು ವಿಳಂಬ ಮಾಡಿದರೆ ಸಂಘದ ನೋಂದಣಿಯನ್ನು ರದ್ದು ಮಾಡುವುದು ಅಥವಾ ಭಾರೀ ದಂಡ ವಿಧಿಸುವ ಮೂಲಕ ಸಂಘಟನೆಗಳ ಅಸ್ತಿತ್ವಕ್ಕೆ ದಕ್ಕೆ ತರುವ ಕೆಲಸ ಮಾಡುತ್ತಿದೆ. ಕಾರ್ಮಿಕರ ಮುಷ್ಕರದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವಾಗಿ ಎಲ್ಲಾ ರೀತಿಯ ಪ್ರತಿಭಟನೆಗಳನ್ನು ಕಾನೂನುಬಾಹಿರವೆಂದು ಪರಿಗಣಿಸುವ ಸಾಧ್ಯತೆ ಇದೆ ಎಂದು ಆರೋಪಿಸಿದರು. ಮತ್ತೊಂದೆಡೆ ಮಾಲೀಕ ವರ್ಗಕ್ಕೆ ಸಂಹಿತೆ ಜಾರಿಗೆ ತಾರದೆ ಯಾವುದೇ ನಿಬಂಧನೆಗಳು ಇಲ್ಲದೆ ಸುಲಭವಾಗಿ ವ್ಯಾಪಾರ ವಹಿವಾಟು ನಡೆಸಲು ಅನುಮತಿಸಲಾಗಿದೆ. ಕಾರ್ಮಿಕನ ಆರೋಗ್ಯ ಮತ್ತು ಸುರಕ್ಷತಾ ಸಂಹಿತೆಯು ಅಂತರ ನಿಯಮವನ್ನು ಉಲ್ಲಂಘಿಸಿ, ದುಡಿಮೆಯ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಲು ಅನುಮತಿ ನೀಡಿದೆ. ವೇತನ ಕಾಯ್ದೆಯು ಕನಿಷ್ಠ ವೇತನ ಪರಿಕಲ್ಪನೆಯನ್ನೇ ದುರ್ಬಲಗೊಳಿಸುತ್ತದೆ. ಇದು ಕಾರ್ಮಿಕನ ವಾಸಿಸುವ ಮನೆ, ಬಟ್ಟೆ ಮತ್ತು ಆಹಾರದ ಒಟ್ಟು ವೆಚ್ಚದ ಮೇಲೆ ಕೇವಲ ಶೇ.10 ರಷ್ಟು ಸೀಮಿತಗೊಳಿಸಿದ್ದು, ಇದು ಸಂಪೂರ್ಣ ಅವೈಜ್ಞಾನಿಕ ಸೂತ್ರವಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ತರಲು ಹೊರಟಿರುವ 4 ಸಂಹಿತೆಗಳು ಕಾರ್ಮಿಕರನ್ನು ನಿರಂತರ ದುಡಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಭರತ್ ಟೀಕಿಸಿದರು. ಸಿಐಟಿಯು ಉಪಾಧ್ಯಕ್ಷ ಹೆಚ್.ಬಿ.ರಮೇಶ್, ಉಪ ಕಾರ್ಯದರ್ಶಿ ಕೆ.ಎಸ್.ಸಾಜಿ ರಮೇಶ್, ಸದಸ್ಯರಾದ ಜಾನಕಿ, ಹಮಾಲಿ ಕಾರ್ಮಿಕ ಸಂಘದ ಉಪಾಧ್ಯಕ್ಷ ರಾಮು ಮತ್ತಿತರ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.