ಮೈಸೂರು NEWS DESK ಸೆ.24 : ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯದ ಧನ ಸಹಾಯದೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ ನಡೆಸಿದ ಬಹು ನಿರೀಕ್ಷಿತ ರಾಜ್ಯದ ಮೊದಲ ಬುಡಕಟ್ಟು ಮಾನವ ಅಭಿವೃದ್ಧಿ ವರದಿ -2022 ಬಿಡುಗಡೆಯಾಗಿದ್ದು ಬುಡಕಟ್ಟು ಅಭಿವೃದ್ಧಿ ವಿಚಾರದಲ್ಲಿ ರಾಜ್ಯವು ಇನ್ನಷ್ಟು ಮುಂದೆ ಸಾಗಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳುತ್ತಿದೆ. ಬಡತನ, ಕಳಪೆ ಆರೋಗ್ಯ ಸೇವೆ, ಸಾಂಪ್ರದಾಯಿಕ ಆರೋಗ್ಯ ವರ್ತನೆಗಳು ಅಪೌಷ್ಟಿಕತೆ, ಮತ್ತು ಅನೈರ್ಮಲ್ಯದಿಂದ ರಾಜ್ಯದ ಬುಡಕಟ್ಟು ಸಮುದಾಯದ ಜನರ ಬದುಕುವ ಸರಾಸರಿ ಆಯಸ್ಸು ಕೇವಲ 58.2 ವರ್ಷಗಳು ಎನ್ನುವ ಅಂಶ ತಿಳಿದುಬಂದಿದೆ. ಮೂರು ವರ್ಷಗಳ ಕಾಲ ರಾಜ್ಯದ 50 ಬುಡಕಟ್ಟು ಸಮುದಾಯಗಳ ಸುಮಾರು ಆರು ಸಾವಿರ ವ್ಯಕ್ತಿಗಳ ಪ್ರಾಥಮಿಕ ಸರ್ವೆಯನ್ನು ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ ನಡೆಸಿದ್ದು ರಾಜ್ಯದ ಬುಡಕಟ್ಟು ಸಮುದಾಯಗಳು ಆರೋಗ್ಯ, ಶಿಕ್ಷಣ, ಲಿಂಗ, ಉದ್ಯೋಗ ಮತ್ತು ಭಾಗವಹಿಸುವಿಕೆ ಮುಂತಾದ ವಿಚಾರದಲ್ಲಿ ಕಳಪೆ ಸಾಧನೆಯನ್ನು ಗಮನಿಸಲಾಗಿದೆ. ಈ ಅಧ್ಯಯನವನ್ನು ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ ಸಹಪ್ರಾದ್ಯಾಪಕ ಡಾ. ಡಿ.ಸಿ ನಂಜುಂಡ ಮತ್ತು ಮಂಡ್ಯ ಸ್ನಾತಕೋತ್ತರ ಕೇಂದ್ರದ ಪ್ರೊಫೆಸರ್ ಜಿಎಸ್ ಪ್ರೇಮ್ ಕುಮಾರ ತಂಡವು ನಡೆಸಿದೆ. ಮಾನವ ಅಭಿವೃದ್ದಿ ರ‍್ಯಾಂಕಿಂಗ್ ಪಟ್ಟಿ ಪ್ರಕಾರ ಆರೋಗ್ಯದ ವಿಚಾರದಲ್ಲಿ ಅಡಿಯನ್ ಸಮುದಾಯ ಮೊದಲ ಸ್ಥಾನವನ್ನು ಪಡೆದಿದ್ದರೆ ಮತ್ತು ಜೇನು ಕುರುಬ ಸಮುದಾಯ ಕೊನೆಯ ಸ್ಥಾನ ಪಡೆದಿದೆ. ಬೆಂಗಳೂರು ಗ್ರಾಮಾಂತರವು ಆರೋಗ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ಗದಗ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಶೈಕ್ಷಣಿಕ ಸಾಧನೆಗಳ ವಿಚಾರದಲ್ಲಿ ಕೊಡಗಿನ ಕುರುಬ ಸಮುದಾಯ ಮೊದಲ ಸ್ಥಾನ ಪಡೆದರೆ, ಕಥೋಡಿ ಕಥಕರಿ ಸಮುದಾಯ ಕೊನೆಯ ಸ್ಥಾನ ಪಡೆದಿದೆ. ಜಿಲ್ಲಾವಾರು ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನದಲ್ಲಿದ್ದರೆ, ಬೆಳಗಾವಿ ಕೊನೆಯ ಸ್ಥಾನದಲ್ಲಿದೆ. ಜೀವನದ ಗುಣಮಟ್ಟದ ಬಗ್ಗೆ, ಕುರುಬ(ಕೊಡಗು) ಪ್ರಥಮ ಸ್ಥಾನದಲ್ಲಿದ್ದರೆ, ಕಥೋಡಿ ಕತ್ಕರಿ ಸಮುದಾಯ ಕೊನೆಯ ಸ್ಥಾನದಲ್ಲಿದೆ. ಈ ವಿಚಾರದಲ್ಲಿ ಜಿಲ್ಲಾವಾರು ಗಮನಿಸಿದರೆ ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನದಲ್ಲಿದ್ದರೆ, ಹಾಸನ ಕೊನೆಯ ಸ್ಥಾನದಲ್ಲಿದೆ. ಅಧ್ಯಯನದ ಪ್ರಕಾರ ಹೆಚ್ಚಿನ ಬುಡಕಟ್ಟು ಜನಾಂಗದವರು ಮಲೇರಿಯಾ, ಕಾಲರಾ, ಕಾಮಾಲೆ ಮತ್ತು ಟೈಫಾಯಿಡ್‌ನಿಂದ ಬಳಲುತ್ತಿದ್ದಾರೆ. ಶೇ.54 ಕ್ಕಿಂತ ಹೆಚ್ಚು ಆದಿವಾಸಿಗಳು ಅಪೌಷ್ಟಿಕತೆಯ ಸಮಸ್ಯೆಯನ್ನು ಹೊಂದಿದ್ದಾರೆ. ಶೇ.47 ಗರ್ಭಿಣಿಯರು ಯಾವುದೇ ಲಸಿಕೆ ಪಡೆದಿಲ್ಲ. ಶೇ.62 ಜನರು ಗುಟ್ಕಾ ಇತ್ಯಾದಿಗಳಿಗೆ ವ್ಯಸನಿಯಾಗಿದ್ದಾರೆ. ಶೇ.3 ಗರ್ಭಿಣಿಯರು ಮನೆಯಲ್ಲಿಯೇ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಶಾಲೆ ಬಿಡುವವರ ಪ್ರಮಾಣ ಆಶ್ರಮ ಶಾಲೆಗಳಲ್ಲಿ ಶೇ.39.3 ಇದ್ದರೆ ಏಕಲವ್ಯ ಶಾಲೆಗಳಲ್ಲಿ ಶೇ.21 ಇದೆ. ಶೇ. 73.5 ಬುಡಕಟ್ಟು ಸಮುದಾಯಕ್ಕೆ ಸ್ವಂತ ಮನೆಯೇ ಇಲ್ಲ. ಶೇ.38 ಪ್ರತಿಶತದಷ್ಟು ಜನರು ಅರಣ್ಯ ಹಕ್ಕುಗಳ ಕಾಯಿದೆ-2006 ರಿಂದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕಂಡುಬಂದಿದೆ, MGNREGA ಕಾರ್ಯಕ್ರಮವು ಕೇವಲ ಶೇ.40 ಮಂದಿಯನ್ನು ಮಾತ್ರ ತಲುಪಿದೆ. ಶೇ.79ರಷ್ಟು ಮಂದಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಶೇ.18 ರಷ್ಟು ಜನರಿಗೆ ಕುಡಿಯುವ ನೀರಿನ ಮೂಲಗಳೇ ಇಲ್ಲ. ಶೇ.33 ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಶೇ21 ಮಂದಿ ಇನ್ನೂ ಸೌದೆಯನ್ನು ಅಡುಗೆಗೆ ಬಳಸುತ್ತಿದ್ದಾರೆ. ಹೆಚ್ಚಿನವರು ಆಧಾರ್ ಮತ್ತು ವೋಟರ್ ಐಡಿ ಹೊಂದಿಲ್ಲ. ಕೇಂದ್ರ ಬುಡಕಟ್ಟು ಮಂತ್ರಾಲಯ ಮೈಸೂರು ವಿವಿಯ ಸಿಎಸ್‌ಎಸ್‌ಐಪಿ ಕೇಂದ್ರವನ್ನು ಬುಡಕಟ್ಟು ಅಧ್ಯಯನದಲ್ಲಿ ಉತ್ಕೃಷ್ಟ ಕೇಂದ್ರವೆಂದು ಗುರುತಿಸುವುದರ ಜೊತೆಗೆ ರೂ.30 ಲಕ್ಷಗಳನ್ನು ಈ ವರದಿ ತಯಾರಿಕೆಗೆ 2020ರಲ್ಲಿ ಮಂಜೂರು ಮಾಡಿತ್ತು. ಕೇರಳ ರಾಜ್ಯ 2010ರಲ್ಲಿ ಇಂತಹ ವರದಿಯನ್ನು ಹೊರತಂದಿದ್ದು, ನಂತರ ಇದು ದೇಶದಲ್ಲಿ ಎರಡನೇ ಪ್ರಯತ್ನ ಎನ್ನಬಹುದು. ಈ ವರದಿಯನ್ನು ಈಗಾಗಲೇ ಬುಡಕಟ್ಟು ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ. ಪ್ರಸ್ತುತ ಈ ವರದಿ ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಬುಡಕಟ್ಟು ಸಮುದಾಯದಲ್ಲಿ ಒಂದು ಹಂತದ ಅಸಮಾನತೆಗಳನ್ನು ಸೂಚಿಸುತ್ತಿದೆ. -(ಡಾ. ಡಿ.ಸಿ ನಂಜುಂಡ, ಸಹ ಪ್ರಾಧ್ಯಾಪಕರು, ಸಿ.ಎಸ್. ಎಸ್. ಈ ಐ.ಪಿ ಕೇಂದ್ರ)
ಕೆಲವು ಸೂಕ್ಷ್ಮ ಬುಡಕಟ್ಟು ಸಮುದಾಯಗಳ ಕಣ್ಮರೆ?
2011ರ ಜನಗಣತಿ ವರದಿಯನ್ನು ಆಧರಿಸಿ ಹೇಳುವುದಾದರೆ ರಾಜ್ಯದ ಕೆಲವೊಂದು ಸೂಕ್ಷ್ಮ ಬುಡಕಟ್ಟು ಸಮುದಾಯಗಳು ಕಣ್ಮರೆಯಾಗಿರುವುದು/ ಪತ್ತೆಯಾಗದಿರುವುದು ಈ ಅಧ್ಯಯನದಿಂದ ಪತ್ತೆಯಾಗಿದೆ. ಇವುಗಳ ಇರುವಿಕೆಯ ಬಗ್ಗೆ ಯಾವುದೇ ಜಿಲ್ಲಾಡಳಿತಗಳಿಗೆ ಸರಿಯಾದ ಮಾಹಿತಿ ಇಲ್ಲ. ಸಧ್ಯ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಬುಡಕಟ್ಟು ಸಮುದಾಯ ಮತ್ತು 2011ರ ಜನಗಣತಿ ಅಂಕೆ ಸಂಖ್ಯೆಗಳು (ಬುಡಕಟ್ಟು ಸಮುದಾಯದ ವಿಚಾರದಲ್ಲಿ) ತಾಳೆ ಆಗುತ್ತಿಲ್ಲ. ಕರ್ನಾಟಕದ ಬುಡಕಟ್ಟು ಜನರಿಗೆ ಸಂಬಂಧಪಟ್ಟ 2011ರ ಜನಗಣತಿ ವರದಿಯ ಮತ್ತಷ್ಟು ಪರಾಮರ್ಶನೆ ಅಗತ್ಯ. ಕರ್ನಾಟಕದ ಕೆಲವು ಸೂಕ್ಷ್ಮ ಬುಡಕಟ್ಟು ಸಮುದಾಯಗಳು ನಾಪತ್ತೆಯಾಗಿರುವ ಕೆಲವು ವರ್ಷಗಳ ಹಿಂದೆ ಲೋಕಸಭೆಯಲ್ಲಿ ಚರ್ಚೆ ನಡೆದಿತ್ತು. ಸಾಮಾನ್ಯವಾಗಿ ಮಾನವ ಅಭಿವೃದ್ಧಿ ವರದಿಯನ್ನು ಸಂಪೂರ್ಣವಾಗಿ ದ್ವಿತೀಯ ದಾಖಲೆಗಳ ಮೂಲಕ ನಡೆಸಲಾಗುತ್ತದೆ. ಆದರೆ ಈ ವರದಿ ಪ್ರಾಥಮಿಕ ದತ್ತಾಂಶಗಳ ಆಧಾರಿತವಾಗಿದೆ. ಇದು ಈ ವರದಿಯ ವಿಶೇಷತೆ ಆಧುನಿಕ ಸಾಫ್ಟ್ವೇರ್ ಬಳಸಿ ದತ್ತಾಂಶಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಬುಡಕಟ್ಟು ಜನರ ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟ ವಿಚಾರದಲ್ಲಿ ರಾಜ್ಯ ಬಹುದೂರ ಸಾಗಬೇಕಿದೆ. ಮಾನವ ಅಭಿವೃದ್ದಿ ವರದಿಯನ್ನು ಇತರೆ ವರದಿಗಳೊಂದಿಗೆ ಹೋಲಿಸುವಂತಿಲ್ಲ. -(ಪ್ರೊ. ಜಿ.ಎಸ್ ಪ್ರೇಮ್ ಕುಮಾರ, ಅರ್ಥಶಾಸ್ತ್ರ ಪ್ರಾಧ್ಯಾಪಕರು)
ಮೀಸಲಾತಿ ಸೌಲಭ್ಯದ ಬಗ್ಗೆ ಅರಿವೇ ಇಲ್ಲ..!
ಸ್ವಾತಂತ್ರ‍್ಯ ಬಂದು 75 ವರ್ಷಗಳಾದರೂ ಕೆಲವು ಅರ್ಹ ಬುಡಕಟ್ಟುಗಳಿಗೆ ಮೀಸಲಾತಿ ಸೌಲಭ್ಯ ಇನ್ನೂ ಸಿಕ್ಕಿಲ್ಲ ಎಂಬುದು ಸಮಸ್ಯೆಯಾಗಿದೆ. ಈ ವರದಿ ಪ್ರಕಾರ ಶೇ. 31.55 ರಷ್ಟು ಬುಡಕಟ್ಟು ಮಂದಿಗೆ ಯಾವುದೇ ಮೀಸಲಾತಿ ಸೌಲಭ್ಯಗಳನ್ನು ಇದುವರೆಗೆ ಪಡೆದಿಲ್ಲ ಶೇ. 17.29 ಬುಡಕಟ್ಟು ಜನರಿಗೆ ಮೀಸಲಾತಿ ಸೌಲಭ್ಯಗಳ ಬಗ್ಗೆ ಯಾವುದೇ ಮಾಹಿತಿಯೇ ತಿಳಿದಿಲ್ಲ. ಪರಡಿ, ಡೋಂಗ್ರಿ ಗೆರಾಸಿಯಾ, ಮೇದ, ಇರುಳಿಗ, ಕಣಿಯಾನ್ ಮತ್ತು ಸಿದ್ದಿ ಬುಡಕಟ್ಟುಗಳ ಹೆಚ್ಚಿನ ಮಂದಿಗೆ ಮೀಸಲಾತಿ ಸೌಲಭ್ಯದ ಬಗ್ಗೆ ಅರಿವೇ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ. ಅರ್ಹ ಬುಡಕಟ್ಟುಗಳಿಗೆ ಒಳಮೀಸಲಾತಿ ನೀಡುವುದರ ಕುರಿತಾಗಿ ಯೋಚಿಸಲು ಇದು ಸಕಾಲ. ಬುಡಕಟ್ಟು ಸಹಕಾರ ಮಾರಾಟ ಅಭಿವೃದ್ಧಿ ಒಕ್ಕೂಟ ಮತ್ತು ಬುಡಕಟ್ಟು ವಿವಿಧೋದ್ದೇಶ ಸಹಕಾರ ಸಂಘಗಳು ಬಲವರ್ಧನೆಯಾಗಬೇಕು. ಇದರಿಂದ ಆದಿವಾಸಿಗಳ ಜೀವನಮಟ್ಟ ಸುಧಾರಿಸಬೇಕು. ಈ ಎರಡೂ ಸಂಸ್ಥೆಗಳಿಗೆ ಸರ್ಕಾರದಿಂದ ನಿರಂತರ ಅನುದಾನ ಮತ್ತು ಪ್ರೋತ್ಸಾಹ ಸಿಗಬೇಕು. ಕಪಾರ್ಟ್ ಸಂಸ್ಥೆ ನೇರವಾಗಿ ಆದಿವಾಸಿಗಳೊಂದಿಗೆ ಕೆಲಸ ಮಾಡಬೇಕು ಮತ್ತು “ವನ್ ಧನ್ ವಿಕಾಸ ಕೇಂದ್ರಗಳ ಅನುಷ್ಠಾನ ಅಗತ್ಯ. ಪಿಎಮ್ ಜನ್-ಮನ್ ಯೋಜನೆ ಸರಿಯಾಗಿ ಜಾರಿ ಆಗಬೇಕು. ಬುಡಕಟ್ಟು ಸಂಶೋಧನೆ ವಿಚಾರದಲ್ಲಿ 2011 ಸ್ಥಾಪನೆಗೊಂಡ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಮತ್ತಷ್ಟು ಸಕ್ರಿಯವಾಗಬೇಕಿದೆ. ಸರಕಾರದ ಕಾರ್ಯಕ್ರಮಗಳು ಕುರಿತು ಬುಡಕಟ್ಟು ಜನರಲ್ಲಿ ಜಾಗೃತಿ ಮೂಡಿಸಬೇಕು. ಸಂಶೋಧನಾ ವರದಿಗಳು ಮತ್ತಷ್ಟು ಗುಣಾತ್ಮಕವಾಗಬೇಕಾಗಿದೆ ಕೇಂದ್ರಕ್ಕೆ ಮತ್ತಷ್ಟು ಮಾನವ ಸಂಪನ್ಮೂಲಗಳ ತ್ವರಿತ ಅಗತ್ಯವಿದೆ.