ಸೋಮವಾರಪೇಟೆ ಸೆ.24 NEWS DESK : ಅಭಿವೃದ್ಧಿ ಮತ್ತು ಸಂಘಟನೆಯನ್ನು ಮಾಡಿದರೆ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಪಟ್ಟಣ ಪಂಚಾಯಿತಿ ಆಡಳಿತವನ್ನು ಕಾಂಗ್ರೆಸ್ ಪಕ್ಷ ಹಿಡಿಯಬಹುದು ಎಂದು ಶಾಸಕ ಡಾ.ಮಂತರ್‍ಗೌಡ ಹೇಳಿದರು. ಪಟ್ಟಣದ ಮಹಿಳಾ ಸಮಾಜದಲ್ಲಿ ನಡೆದ ನಗರ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಟ್ಟಣದ ಎಲ್ಲಾ ಬೂತ್‍ಗಳಲ್ಲಿ ನನಗೆ ಉತ್ತಮ ಬೆಂಬಲ ಸಿಕ್ಕಿದೆ. ಪಟ್ಟಣದ ನಿವಾಸಿಗಳ ಕಷ್ಟಸುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ, ಪ್ರೀತಿ ಗಳಿಸಬೇಕು. ನಾನು ಕೂಡ ಎಲ್ಲಾ ವಾರ್ಡ್‍ಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಲ್ಪಿಸಲು ಶ್ರಮವಹಿಸುತ್ತೇನೆ ಎಂದು ಅಭಯ ನೀಡಿದರು. ಹಲವು ವರ್ಷಗಳಿಂದ ಪಟ್ಟಣದ ಸರ್ವತೋಮುಖ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಿದೆ ಎಂಬುದನ್ನು ಜನರ ಬಾಯಿಂದ ಕೇಳಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರುವುದರಿಂದ ಪಂಚಾಯಿತಿಗೆ ಹೆಚ್ಚಿನ ಅನುದಾನ ತರಲು ಪ್ರಯತ್ನ ಮಾಡುತ್ತೇನೆ. ಈಗಾಗಲೇ ಅಮೃತ್ ಯೋಜನೆಯಲ್ಲಿ ಸರ್ಕಾರ 12 ಕೋಟಿ ರೂ.ಹಣವನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ ಪಟ್ಟಣಕ್ಕೆ ಹಾರಂಗಿಯಿಂದ ಕುಡಿಯುವ ನೀರು ತರುವ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ಹೇಳಿದರು. ಪಟ್ಟಣದ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ.ಹಣ ಬಿಡುಗಡೆಯಾಗಿದ್ದು, ದಸರಾ ಹಬ್ಬದೊಳಗೆ ರಸ್ತೆ ಸರಿಪಡಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಸೋಮವಾರಪೇಟೆ ಪಟ್ಟಣದ ಪಕ್ಕದ ಗ್ರಾಮ ಪಂಚಾಯಿತಿಯ ಗ್ರಾಮಗಳನ್ನು ಸೇರಿಸಿಕೊಂಡು ಪುರಸಭೆ ಮಾಡುವ ಪ್ರಯತ್ನ ಮುಂದುವರಿದಿದೆ. ಜನಸಂಖ್ಯೆ ಕೊರತೆಯಿಂದ ಸ್ವಲ್ಪ ಸಮಸ್ಯೆಯಾಗಿದೆ ಪಕ್ಕದ ಪಂಚಾಯಿತಿಗಳು ಸಹಕಾರ ನೀಡಬೇಕು. ಪುರಸಭೆಯಾದರೆ ಹೆಚ್ಚಿನ ಅನುದಾನ ಸಿಗುತ್ತದೆ. ಗ್ರಾಮಗಳು ಅಭಿವೃದ್ಧಿಯಾಗುತ್ತವೆ ಎಂದು ಆಶಿಸಿದರು. ನೂತನ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ, ಸಹ ಕಾರ್ಯದರ್ಶಿ ಎಂ.ಎ.ರುಬಿನಾ, ಕಾರ್ಯಾಧ್ಯಕ್ಷ ಭುವನೇಶ್, ಉಪಾಧ್ಯಕ್ಷರಾದ ಜಮೀರ್, ಮೀನಾಕ್ಷಿ ಅವರುಗಳು ಶಾಸಕರಿಂದ ಪಕ್ಷದ ಬಾವುಟ ಸ್ವೀಕರಿಸುವ ಮೂಲಕ ಅಧಿಕಾರ ಸ್ವೀಕರಿಸಿದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಪಕ್ಷದ ಮುಖಂಡರಾದ ಎಚ್.ಸಿ.ನಾಗೇಶ್, ಕೆ.ಎ.ಆದಂ, ಎಚ್.ಆರ್.ಸುರೇಶ್, ಬಿ.ಇ.ಜಯೇಂದ್ರ, ಬಿ.ಸಂಜೀವ, ಬಿ.ಸಿ.ವೆಂಕಟೇಶ್, ಬಿ.ಎನ್.ಬಸವರಾಜ್, ಸುನಿಲ್ ಇದ್ದರು.