ಮಡಿಕೇರಿ ಸೆ.24 NEWS DESK : ಹಮಾಲಿ ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಕೊಡಗು ಜಿಲ್ಲಾ ಸಮಿತಿ ಒತ್ತಾಯಿಸಿದೆ. ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಸಮಿತಿಯ ಪ್ರಮುಖರು ಹಾಗೂ ಪದಾಧಿಕಾರಿಗಳು ಹಾಮಲಿ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆದರು. ಈ ಸಂದರ್ಭ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಅಸಂಘಟಿತ ಕಾರ್ಮಿರಲ್ಲಿಯೇ ಅತ್ಯಂತ ಶ್ರಮದಾಯಕ ಕೆಲಸ ನಿರ್ವಹಿಸುವ, ವ್ಯಾಪಾರ ವಹಿವಾಟಿನಲ್ಲಿ ಹಾಗೂ ಸರಕು ಸಾಗಣಿಕೆಯಲ್ಲಿ ಮಹತ್ವದ ಪಾತ್ರ ವಹಿಸುವ ಶ್ರಮ ಜೀವಿಗಳಾದ ಹಮಾಲಿ ಕಾರ್ಮಿಕರಿಗೆ ಪಿಂಚಣಿ, ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಕರ್ನಾಟಕ ರಾಜ್ಯ ಸರಕಾರ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಅಂಬೇಡ್ಕರ ಸಹಾಯ ಹಸ್ತ ಸ್ಮಾರ್ಟ ಪಡೆದ ಹಮಾಲಿ ಕಾರ್ಮಿಕರು ಸೇರಿದಂತೆ 23 ವಲಯದ ಅಸಂಘಟಿತ ಕಾರ್ಮಿಕರಿಗೆ ಅಪಘಾತ ಮರಣ, ಅಪಘಾತ ಅಂಗವಿಕಲತೆ, ಅಪಘಾತ ವೈದ್ಯಕೀಯ ಮರು ಪಾವತಿ, ಶವ ಸಂಸ್ಕಾರ ಪರಿಹಾರ ನೀಡುವ ಯೋಜನೆಗಳನ್ನು ಜಾರಿಮಾಡುತ್ತಿರುವುದು ಹಾಗೂ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕ್ಷೇಮಾಭಿವೃದ್ಧಿ ರಚಿಸಲಾಗುತ್ತಿರುವ ಮಂಡಳಿಯಿಂದ ಸಾರಿಗೆ ಸಂಬಂಧಿತ ಲೋಡಿಂಗ್ ಆನ್‍ಲೋಡಿಂಗ್ ಕಾರ್ಮಿಕರನ್ನು ಒಳಗೊಂಡು ವಿವಿಧ ಸಾರಿಗೆ ಕ್ಷೇತ್ರದ ಕಾರ್ಮಿಕರಿಗೆ ಕೆಲ ಸೌಲಭ್ಯಗಳನ್ನು ಘೋಷಿಸಲಾಗಿರುವುದು ಸ್ವಾಗತಾರ್ಹ. ಆದರೆ, ಬದುಕಿನ ಕೊನೆಗಾಲದಲ್ಲಿ ಆರ್ಥಿಕವಾಗಿ, ಅನಾರೋಗ್ಯದಿಂದ ಸಂಕಷ್ಟಕ್ಕೀಡಾಗುವ ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಬದುಕಿರುವಾಗ ಸಹಾಯವಾಗುವಂತ ಸಾಮಾಜಿಕ ಭದ್ರತಾ ಸೌಲಭ್ಯಗಳ ಅಗತ್ಯತೆ ಇದೆ ಎನ್ನುವುದನ್ನು ಸರ್ಕಾರ ಗಮನಿಸಬೇಕು. ಈ ಹಿನ್ನಲೆಯಲ್ಲಿ ಸಹಜ ಮರಣಕ್ಕೂ ಪರಿಹಾರ, ಈಗಾಗಲೇ ಸರ್ಕಾರದ ಮುಂದಿರುವ ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ, ಪಿಂಚಣಿ ಯೋಜನೆ ಹಾಗೂ ವಸತಿ ಯೋಜನೆಗಳನ್ನು ಜಾರಿಮಾಡುವುದು ಆಗತ್ಯವಾಗಿದೆ. ಆದ್ದರಿಂದ 23 ವಲಯದ ಅಸಂಘಟಿತ ಕಾರ್ಮಿಕರಿಗೆ ಜಾರಿಮಾಡುತ್ತಿರುವ ಸೌಲಭ್ಯಗಳೊಂದಿಗೆ ಸಹಜ ಮರಣಕ್ಕೂ ರೂ.1 ಲಕ್ಷ ಪರಿಹಾರ ನೀಡಬೇಕು, ಶವ ಸಂಸ್ಕಾರ ಪರಿಹಾರದ ಮೊತ್ತವನ್ನು ರೂ. 25 ಸಾವಿರಕ್ಕೆ ಹೆಚ್ಚಿಸಬೇಕು, ಸೂಕ್ತ ಪಿಂಚಣಿ ಯೋಜನೆಯನ್ನು ಜಾರಿಮಾಡಬೇಕು, ವೈದ್ಯಕೀಯ ಮರುಪಾವತಿ ಯೋಜನೆ ಮುಂದುವರೆಸಬೇಕು ಹಾಗೂ 60 ವರ್ಷ ಆದ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಕನಿಷ್ಠ ರೂ.1 ಲಕ್ಷ ನಿವೃತ್ತಿ ಪರಿಹಾರ ನೀಡಬೇಕು, ಮರಣ ಪರಿಹಾರ ರೂ. 2 ಲಕ್ಷಗಳಿಗೆ ಹೆಚ್ಚಿಸಬೇಕು, ಕಾರ್ಮಿಕ ಕಾನೂನುಗಳು ಜಾರಿಯಾಗುವಂತೆ ಕ್ರಮವಹಿಸಬೇಕು, ಎಲ್ಲಾ ವಿಭಾಗದ ಹಮಾಲಿ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಯಾಗುವಂತೆ ಮುತವರ್ಜಿವಹಿಸಬೇಕು, ಕೇಂದ್ರ ಸರಕಾರದ ವಿವಿಧ ವಸತಿ ಯೋಜನೆಯನ್ನು ಬಳಸಿಕೊಂಡು ಯೋಗ್ಯವಾದ ವಸತಿ ಯೋಜನೆಯನ್ನು ಜಾರಿ ಮಾಡಬೇಕು, ಇ-ಶ್ರಮ ಕಾರ್ಡ ಪಡೆದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಾಜಿ ರಮೇಶ್, ಉಪಾಧ್ಯಕ್ಷ ರಾಮು ಸೇರಿದಂತೆ ಮತ್ತಿತರ ಸದಸ್ಯರು ಪಾಲ್ಗೊಂಡಿದ್ದರು.