ಮಡಿಕೇರಿ NEWS DESK ಸೆ.27 : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ಆದೇಶಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ನಿಷ್ಪಕ್ಷಪಾತ ತನಿಖೆೆಗೆ ಅನುವು ಮಾಡಿಕೊಡಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಅವರು, ಈ ಹಿಂದೆ ಯಡಿಯೂರಪ್ಪ ಅವರು ಆರೋಪಗಳಿಗೆ ಗುರಿಯಾದ ಸಂದರ್ಭ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ನೈತಿಕ ಹೊಣೆÉ ಹೊತ್ತು ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು. ಅದರಂತೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದರು. ಇದೀಗ ಸಿದ್ದರಾಮಯ್ಯ ಅವರು ಕೂಡ ರಾಜೀನಾಮೆ ನೀಡಲಿ. ತನಿಖೆಯ ಮೂಲಕ ದೋಷಮುಕ್ತವಾದಲ್ಲಿ ಮತ್ತೆ ಬೇಕಾದರೆ ಮುಖ್ಯಮಂತ್ರಿಯಾಗಲಿ ಎಂದರು. ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಮುಡಾ ಪ್ರಕರಣದ ತನಿಖೆ ಲೋಕಾಯುಕ್ತದ ಮೂಲಕ ನಡೆಯಬೇಕಾಗಿದೆ. ಆದರೆ, ಈ ಲೋಕಾಯುಕ್ತ ನೇರವಾಗಿ ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಹಿನ್ನೆಲೆಯಲ್ಲಿ ಒಟ್ಟು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಉಳಿಸುವ ಪ್ರಯತ್ನವಾಗಿ ರಾಜ್ಯ ಸಚಿವ ಸಂಪುಟ, ಸಿಬಿಐ ತನಿಖೆಗೆ ನಿರ್ಬಂಧಗಳನ್ನು ವಿಧಿಸಲು ನಿರ್ಣಯ ಕೈಗೊಂಡಿದೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನವನ್ನೇ ಬುಡಮೇಲು ಮಾಡುವ ಪ್ರಯತ್ನ ನಡೆಸಿದೆ ಎಂದು ಟೀಕಿಸಿದರು. ತಾವು ತಪ್ಪು ಮಾಡಿಲ್ಲವೆಂದು ಸಿದ್ದರಾಮಯ್ಯ ಅವರು ವಾದಿಸಿದರೆ ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಪಕ್ಷ ಅವರ ಬೆಂಬಲಕ್ಕೆ ನಿಂತಿದೆ. ತಪ್ಪು ಮಾಡಿಲ್ಲ ಎನ್ನುವುದಾದರೆ ತನಿಖೆಗೆ ಮುಕ್ತ ಅವಕಾಶ ಮಾಡಿಕೊಡಲಿ ಎಂದು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ, ಮುಡಾ ಪ್ರಕರಣದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಅವರು ರಾಜೀನಾಮೆ ನೀಡುವವರೆಗೆ ಪಕ್ಷ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಜಿಲ್ಲಾ ಉಪಾಧ್ಯಕ್ಷ ಕಾಂಗೀರ ಸತೀಶ್ ಹಾಗೂ ಮಾಧ್ಯಮ ಪ್ರಮುಖ್ ಶಜಿಲ್ ಕೃಷ್ಣನ್ ಉಪಸ್ಥಿತರಿದ್ದರು.