ಮಡಿಕೇರಿ ಅ.1 NEWS DESK : ವಿಶ್ವ ರೇಬಿಸ್ ದಿನದ ಪ್ರಯುಕ್ತ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ “Breaking Rabies boundries ರೇಬಿಸ್ ಗಡಿಯನ್ನು ಮುರಿಯುವುದು” ಎಂಬ ಧ್ಯೇಯದೊಂದಿಗೆ ಕೊಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೇಬಿಸ್ ತಡೆ ಹಾಗೂ ಲಸಿಕೆಗಳ ಮಹತ್ವದ ಕುರಿತು ಜನಜಾಗೃತಿ ಕಾರ್ಯಕ್ರಮ ನಡೆಯಿತು. ನೋಡಲ್ ಅಧಿಕಾರಿ ಹಾಗೂ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಪಕರಾದ ಡಾ.ಕೃತಿಕಾ ಮಾತನಾಡಿ, ರೇಬಿಸ್ ರೋಗ ಎಷ್ಟು ಮಾರಕ, ರೇಬಿಸ್ ಕಾಯಿಲೆ ಹರಡುವ ಬಗ್ಗೆ ಹಾಗೂ ರೇಬಿಸ್ ಲಸಿಕೆ ತೆಗೆದುಕೊಳ್ಳುವ ವಿಧಾನ ಹಾಗೂ ರೇಬಿಸ್ ರೋಗ ತಡೆಗಟ್ಟುವಿಕೆ ಬಗ್ಗೆ ವಿವರಿಸಿದರು. ಜಿಲ್ಲ್ಲಾ ಶಸ್ತ್ರಚಿಕಿತ್ಸಕ ಡಾ.ನಜುಂಡಯ್ಯ ಮಾತನಾಡಿ, ರೇಬಿಸ್ ಕಾಯಿಲೆಯು ಎಷ್ಟು ಮಾರಕವೆಂದು, ಸೂಕ್ತ ಲಸಿಕೆ ಪಡೆಯುವುದು ಅನಿವಾರ್ಯ ಎಂದು ತಿಳಿಸಿದರು. ಹುಚ್ಚು ನಾಯಿ ಕಡಿತದಿಂದ ದೇಶದಲ್ಲಿ ವರ್ಷಕ್ಕೆ 15 ರಿಂದ 20 ಸಾವಿರ ಮಂದಿ ಬಲಿಯಾಗುತ್ತಿದ್ದು ಈ ಪೈಕಿ ಶೇ.40 ರಷ್ಟು 15 ವರ್ಷದ ಒಳಗಿನ ಮಕ್ಕಳೇ ಆಗಿದ್ದಾರೆ. ರೇಬಿಸ್ ಇದೊಂದು ವೈರಸ್ ನಿಂದ ಹರಡುತ್ತದೆ. ಯಾವುದೇ ಶ್ವಾನ, ಬೆಕ್ಕು, ಹಂದಿ ಅಥವಾ ಮತ್ತಾವುದೇ ಕಾಡು ಪ್ರಾಣಿಗಳು ಕಚ್ಚಿದರೂ ಕೂಡ ತಾತ್ಸಾರ ಮಾಡಬಾರದು. ಕೂಡಲೇ ಕಚ್ಚಿದ ಭಾಗವನ್ನು ಸೋಪಿನಿಂದ ತೊಳೆದು ಆದಷ್ಟು ಬೇಗ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯಬೇಕು ಎಂದರು. ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಮಾತನಾಡಿ, ರೇಬಿಸ್ ನಿಯಂತ್ರಣ ತಡೆಯುವಲ್ಲಿ ಇತರೆ ಇಲಾಖೆಗಳ ಪತ್ರದ ಬಗ್ಗೆ ಹಾಗೂ ರೋಗ ಎಷ್ಟು ಮಾರಣಾಂತಿಕ ಎಂದು ಉದಾಹರಣೆ ಸಹಿತ ಮಾಹಿತಿ ನೀಡಿದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಗೃಹ ವೈದ್ಯರು ರೇಬಿಸ್ ಹರಡುವಿಕೆ ತಡೆಗಟ್ಟುವಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ರೇಬಿಸ್ ಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ. ರೇಬಿಸ್ ಬಗ್ಗೆ ಆರೋಗ್ಯ ಇಲಾಖೆಯಿಂದ ಹೆಚ್ಚು ಜನಜಾಗೃತಿ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೆಕ್ಷಣ ಅಧಿಕಾರಿ ಡಾ.ಶ್ರೀನಿವಾಸ್, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ದೀಪಿಕ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಭೋದಕ ಹಾಗೂ ಭೋದಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಹೆಲ್ತ್ ಇನ್ಸಪೇಕ್ಟರ್ ಮುಖೇಶ್ ವಂದಿಸಿದರು.