ಮಡಿಕೇರಿ ಅ.1 NEWS DESK : ಪೊನ್ನಂಪೇಟೆ ತಾಲ್ಲೂಕಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಗೂರು, ಮತ್ತೂರು ಮತ್ತು ಕೋಟೂರು ಗ್ರಾಮಗಳ ತೋಟದ ಲೈನ್ ಮನೆಗಳಲ್ಲಿ ವಾಸವಿರುವ ಅಸ್ಸಾಂ ಮತ್ತಿತರ ಹೊರ ರಾಜ್ಯಗಳ ಕಾರ್ಮಿಕರ ಹೆಸರುಗಳನ್ನು ದಾಖಲೆ ಸಹಿತ ನೋಂದಣಿ ಮಾಡದಿದ್ದಲ್ಲಿ ಪೊಲೀಸರ ಸಹಕಾರದಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾ.ಪಂ ಅಧ್ಯಕ್ಷ ಚೆಪ್ಪುಡಿರ ರಾಕೇಶ್ ದೇವಯ್ಯ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇದೇ ಸೆ.12 ರಿಂದ 30 ರವರೆಗೆ ಹೆಸರು ನೋಂದಣಿಗೆ ಅವಕಾಶ ನೀಡಲಾಗಿತ್ತು. ನಿಗಧಿತ ಅವಧಿ ಪೂರ್ಣಗೊಂಡಿದ್ದು, ನೋಂದಣಿಗೆ ಬಾಕಿ ಇರುವ ಕಾರ್ಮಿಕರ ಹೆಸರುಗಳನ್ನು ಕಡ್ಡಾಯವಾಗಿ ತಕ್ಷಣ ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಾರ್ಮಿಕರ ಹೆಸರು ನೋಂದಣಿಗೆ ಸೂಚನೆ ನೀಡಿದ್ದಾರೆ. ಜಿಲ್ಲೆ ಹಾಗೂ ಜಿಲ್ಲೆಯ ಜನರ ಸುರಕ್ಷತೆಯ ದೃಷ್ಟಿಯಿಂದ ಹೆಸರು ನೋಂದಾಯಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಾರ್ಮಿಕರ ಆಧಾರ್ ಕಾರ್ಡ್ ಪ್ರತಿ, ರೇಷನ್ ಕಾರ್ಡ್ ಪ್ರತಿ, ಮತದಾರರ ಗುರುತಿನ ಚೀಟಿಯ ಪ್ರತಿ, ಕುಟುಂಬದ ಗ್ರೂಪ್ ಫೋಟೋ ಮತ್ತು ಕುಟುಂಬದ ಪ್ರತಿಯೊಬ್ಬ ಸದಸ್ಯನ ಪಾಸ್ ಪೋರ್ಟ್ ಅಳತೆಯ ಫೋಟೋವನ್ನು ಗ್ರಾ.ಪಂ ಗೆ ನೀಡುವಂತೆ ರಾಕೇಶ್ ದೇವಯ್ಯ ತಿಳಿಸಿದ್ದಾರೆ.