ವಿರಾಜಪೇಟೆ ಅ.7 NEWS DESK : ಸುಗಮ ಸಂಗೀತ 20ನೇ ಶತಮಾನದಲ್ಲಿ ಆರಂಭಗೊಂಡಿದ್ದು, ಇಂದು ವಿಶ್ವವ್ಯಾಪಿ ಯುವ ವರ್ಗದಿಂದ ಮುಪ್ಪಿನ ವರೆಗೂ ಮುದ ನೀಡುವ ಸಂಗೀತ ಪ್ರಕಾರವಾಗಿದೆ. ಸುಗಮ ಸಂಗೀತವನ್ನು ಉಳಿಸಿ ಬೆಳಸಬೇಕು ಎಂದು ನಿವೃತ್ತ ವೈದ್ಯಾಧಿಕಾರಿ ಮತ್ತು ಖ್ಯಾತ ಗಝಲ್ ಕವಿಗಳಾದ ಡಾ.ಶ್ರೀ ಶೈಲ ಮಾದಣ್ಣವರ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂಗಳೂರು ಪ್ರಣವ ಸಂಗೀತ ಶಾಲೆ ವತಿಯಿಂದ ವಿರಾಜಪೇಟೆ ನಗರದ ಶ್ರೀ ರಾಜರಾಜೇಶ್ವರಿ ಸಭಾಂಗಣದಲ್ಲಿ ನಡೆದ ಪ್ರಥಮ ವಾರ್ಷಿಕ ಸಂಭ್ರಮಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪಾಶ್ಚಾತ್ಯ ಸಂಗೀತಕ್ಕೆ ಮಾರು ಹೋಗದೆ ನಾಡಿನ ದಿವ್ಯ ಪರಂಪರೆಯ ಸಂಸ್ಕೃತಿಗಳ ಭಾಗವಾದ ಕರ್ನಾಟಕ ಸಂಗೀತ, ಜನಪದ ಮತ್ತು ಸುಗಮ ಸಂಗೀತವನ್ನು ಅಭ್ಯಾಸ ಮಾಡಿ ಮುಂದಿನ ತಲೆಮಾರಿಗೂ ಮುಂದುವರೆಸುವ ಅನಿವಾರ್ಯ ಸಮಾಜಕ್ಕಿದೆ. ಯುವ ಜನತೆ ಸೇರಿದಂತೆ ಮುಪ್ಪಿನಲ್ಲಿರುವ ವ್ಯಕ್ತಿಗಳಿಗೂ ಮನಸ್ಸಿಗೆ ಮುದ ನೀಡುವ ಸಂಗೀತ ಸುಗಮ ಸಂಗೀತವಾಗಿದ್ದು, ಜನಪದ ಸಾಹಿತ್ಯಕ್ಕೆ ಹೊಸ ಲೇಪನ ಮಾಡಿ, ಹಾಡಿನ ಮೂಲಕ ಮೋಡಿ ಮಾಡುವ ಶಕ್ತಿ ಸುಗಮ ಸಂಗೀತಕ್ಕಿದೆ. ಈ ನಿಟ್ಟಿನಲ್ಲಿ ಪ್ರಣವ ಸಂಗೀತ ಶಾಲೆಯ ಪರಿಶ್ರಮ ಅನನ್ಯವಾದುದು ಎಂದು ಹೇಳಿದರು. ಪ್ರಾಸ್ತಾವಿಕ ಮಾತನಾಡಿದ ಪ್ರಣವ ಸಂಗೀತ ಶಾಲೆಯ ಮುಖ್ಯ ಶಿಕ್ಷಕಿ ಡಾ. ಕೆ.ಎ.ಕಾವ್ಯಾ ಕಾಮತ್, ಸುಮಾರು ಏಳು ವರ್ಷಗಳ ಹಿಂದೆ ವಿರಾಜಪೇಟೆ ನಗರದ ಎಫ್.ಎಂ.ಸಿ.ರಸ್ತೆಯ ಗಾಯತ್ರಿ ಭವನ ಕಟ್ಟಡದಲ್ಲಿ ಆರಂಭವಾಯಿತು. ನಂತರದಲ್ಲಿ ಬೆಂಗಳೂರು ನಲ್ಲಿ ಶಾಲೆಯನ್ನು ಆರಂಭಿಸಲಾಯಿತು. ಸುಗಮ ಸಂಗೀತ, ಕರ್ನಾಟಕ ಸಂಗೀತವನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಬಾಲಕ ಬಾಲಕಿಯರು ಹಾಗೂ ಯುವ ವರ್ಗ ಸೇರಿದಂತೆ 60ರ ಹದಿಹರೆಯದ ವ್ಯಕ್ತಿಗಳು ಇಂದು ಪ್ರಣವ ಸಂಗೀತ ಶಾಲೆಯ ಭಾಗವಾಗಿದ್ದಾರೆ. ರಾಜ್ಯ ಅಲ್ಲದೆ ವಿದೇಶಗಳಲ್ಲಿ ನೆಲೆಸಿರುವ ಹಲವಾರು ಮಂದಿ ಆನ್ ಲೈನ್ ಮೂಲಕ ಸುಗಮ ಸಂಗೀತವನ್ನು ಕಲಿಯುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಗಮ ಸಂಗೀತ ಗಾಯಕರು ಮತ್ತು ಕೆಂಪೇಗೌಡ ಪ್ರಶಸ್ತಿ ವಿಜೇತ ಕೆ.ಎಸ್. ಶ್ರೀಧರ್ ಅಯ್ಯರ್, ಸುಗಮ ಸಂಗೀತಕ್ಕೆ ಹೊಸ ಅಧ್ಯಾಯ ಬರೆದರು ದಿವಂಗತ ಸಿ.ಎಸ್.ಆಶ್ವತ್ ಅವರು. ಗಾಯನ ಶೈಲಿ ಮತ್ತು ಪದಗಳ ಉಚ್ಚಾರಣಾ ಶೈಲಿಯ ಮೂಲಕ ವಿಶ್ವ ಮನಸ್ಸು ಗೆದ್ದ ಮಹಾನ್ ಗಾಯಕ. ಸುಗಮ ಸಂಗೀತ ಎಂದರೆ ಪದಗಳ ಜೋಡಣೆಯೊಂದಿಗೆ ಸುಲಲಿತವಾಗಿ ಹಾಡುವ ಶೈಲಿ. ದಾಸ ಪದಗಳು, ಜಾನಪದ, ಪದಗಳಿಗೆ ಜೀವತುಂಬಿ ಹೃದಯ ಭಾಷೆಯ ಮೂಲಕ ಭಿನ್ನವಾಗಿ ಹಾಡುವ ಚತುರತೆಯಿಂದ ಹಲವು ಖ್ಯಾತನಾಮರು ತಮ್ಮ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಸಾಧನೆಯೆ ಮುಖ್ಯ. ಬಾಲ್ಯದಿಂದಲೆ ಸಂಗೀತವನ್ನು ಕರಗತ ಮಾಡಿಕೊಂಡಲ್ಲಿ ಸಾಧನೆ ಹಂತ ತಲುಪಲು ಸಹಾಯವಾಗುತ್ತದೆ ಎಂದು ಹೇಳಿದರು.