ಕುಶಾಲನಗರ ಅ.9 NEWS DESK : ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೊಡಗು ಜಿಲ್ಲೆಯಿಂದ ಪ್ರತಿದಿನ ತೆರಿಗೆ ಹಣ ಪಾವತಿಯಾಗುತ್ತಿದ್ದರೂ ಕೂಡ ಜಿಲ್ಲೆಗೆ ಸರ್ಕಾರದಿಂದ ಯಾವುದೇ ಪ್ರಯೋಜನಗಳು ಆಗುತ್ತಿಲ್ಲ ಎಂದು ವರ್ತಕರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅಸಮಧಾನ ವ್ಯಕ್ತಪಡಿಸಿದರು. ಕುಶಾಲನಗರದ ಕನ್ನಿಕಾ ಹೋಟೆಲ್ ಸಭಾಂಗಣದಲ್ಲಿ ನಡೆದ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಎಸ್.ನಾಗೇಶ್ ಅವರಿಗೆ ಸಮಾನ ಮನಸ್ಕರು ನೀಡಿದ ಅಭಿನಂದನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ವ್ಯಾಪಾರ ವಹಿವಾಟುಗಳು ನಡೆಯುವ ಕುಶಾಲನಗರದ ಪ್ರಮುಖ ವಾಣಿಜ್ಯ ವಹಿವಾಟಿನ ರಥಬೀದಿಯಲ್ಲಿ ವಾಹನ ನಿಲುಗಡೆ ಸಮಸ್ಯೆಯಿಂದಾಗಿ ವರ್ತಕರಿಗೆ ಬಹಳಷ್ಟು ಸಮಸ್ಯೆಗಳಾಗುತ್ತಿದೆ. ಆದ್ದರಿಂದ ಸ್ಥಳೀಯ ಪುರಸಭೆಯ ಸಹಕಾರದೊಂದಿಗೆ ಸ್ಥಾನೀಯ ಸಮಿತಿ ವಾಹನ ನಿಲುಗಡೆಗೆ ಪೂರಕವಾದ ವಿವಿಧೋದ್ದೇಶ ಕಟ್ಟಡ ನಿರ್ಮಿಸಿ ವಾಹನ ನಿಲುಗಡೆಗೆ ಅವಕಾಶಗಳಾಗಬೇಕಿದೆ. ಹಾಗೆಯೇ ಕುಶಾಲನಗರ ಪಟ್ಟಣದಲ್ಲಿ ವರ್ತಕರ ಸಂಘದ ಸ್ವಂತ ಕಟ್ಟಡ ನಿರ್ಮಾಣದ ಯೋಜನೆ ರೂಪುಗೊಳ್ಳಲು ನಾಗೇಂದ್ರ ಪ್ರಸಾದ್ ಕರೆ ನೀಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರ ಚೇಂಬರ್ಸ್ ಸ್ಥಾನ ಅಲಂಕಾರಿಕ ಹುದ್ದೆಯಲ್ಲ. ಅದೊಂದು ಬಹಳಷ್ಟು ಜವಬ್ದಾರಿಯ ಸಮಿತಿಯಾಗಿದ್ದು, ಬಹಳಷ್ಟು ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಜಿಲ್ಲೆಯಲ್ಲಿಯೇ ಮಂಚೂಣಿಯ ನಗರವಾಗಿರುವ ಕುಶಾಲನಗರದ ಸರ್ವಾಂಗೀಣ ಪ್ರಗತಿಗೆ ಮುಂದಾಗಬೇಕೆಂದು ಶಶಿಧರ್ ಸಲಹೆ ನೀಡಿದರು. ಈ ಸಂದರ್ಭ ಕೊಡಗು ಜಿಲ್ಲಾ ಪೋಟೋ ಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಆವರ್ತಿ ಮಹದೇವಪ್ಪ, ಜಿಲ್ಲಾ ಕಾರ್ಯದರ್ಶಿ ಲವಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಪುರಸಭೆ ಮಾಜಿ ಸದಸ್ಯ ಹಾಗೂ ಕಲಾವಿದ ಎಂ.ನಂಜುಂಡಸ್ವಾಮಿ, ಶಾಂತಪ್ಪ, ವಿಜಿ,ರಾಜು, ಹರೀಶ್, ಈಶಕುಮಾರ್, ಮಾಧು, ಪ್ರಶಾಂತ್, ವಸಂತ್, ಶಿವು ಇದ್ದರು. ಗಾಯಕ ಸತೀಶ್ ಹಾಗೂ ನಂಜುಂಡಸ್ವಾಮಿ ಅವರಿಂದ ಭಾವಗೀತೆ ಗಾಯನ ನಡೆಯಿತು.