ಸಿದ್ದಾಪುರ ಅ.10 NEWS DESK : ಭಾರತ ಮಾರ್ಕ್ಸವಾದಿ ಕಮ್ಯುನಿಸ್ಟ್ ಸಿ.ಪಿ.ಐ.(ಎಂ) ಪಕ್ಷದ ಮಹಾ ಅಧಿವೇಶನ ಏಪ್ರಿಲ್ ತಿಂಗಳಿನಲ್ಲಿ ತಮಿಳುನಾಡಿನಲ್ಲಿ, ಡಿಸೆಂಬರ್ ತಿಂಗಳಲ್ಲಿ ರಾಜ್ಯ ಸಮ್ಮೇಳನ ತುಮಕೂರಿನಲ್ಲಿ, ನವೆಂಬರ್ ನಲ್ಲಿ ಜಿಲ್ಲಾ ಸಮ್ಮೇಳನ ವಿರಾಜಪೇಟೆಯಲ್ಲಿ ನಡೆಯಲಿದ್ದು, ಅದರ ಭಾಗವಾಗಿ 6ನೇ ಶಾಖಾ ಸಮ್ಮೇಳನವು ನೆಲ್ಯಹುದಿಕೇರಿಯಲ್ಲಿ ನಡೆಯಿತು. ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಪ್ರತಿನಿಧಿಗಳು ಚಂಡೆ ವಾದ್ಯ ಕಲಾ ತಂಡಗಳೊಂದಿಗೆ ಕೆಂಪು ಧ್ವಜಗಳನ್ನ ಹಿಡಿದು ಮುಖ್ಯರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಸಮ್ಮೇಳನ ಆಯೋಜನಗೊಂಡ ನೆಲ್ಯಹುದಿಕೇರಿ ಸೂರ್ಯನಾರಾಯಣರಾವ್ ನಗರಕ್ಕೆ ತಲುಪಿತು. ಕಾಂ. ವೀರಸ್ವಾಮಿ ಸಭಾಂಗಣದ ಕಾಂ. ಆಲ್‌ಪೋನ್ಸ್ ವೇದಿಕೆಯಲ್ಲಿ ನಡೆದ ಸಮ್ಮೇಳನವನ್ನ ಸಿ.ಪಿ.ಐ.(ಎಂ) ಪಕ್ಷದ ರಾಜ್ಯ ಮುಖಂಡ ಕೆ.ಎನ್.ಮಹಾಂತೇಶ್ ಉದ್ಘಾಟಿಸಿ ಮಾತನಾಡಿ, ಯಾವುದೇ ಸರ್ಕಾರಗಳು ಬಂದರೂ ಶ್ರಮಿಕ ವರ್ಗವನ್ನ ಕಡೆಗಣಿಸುತ್ತಿವೆ. ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿರುವ ದುಡಿಯುವ ವರ್ಗ ಇಂದಿಗೂ ಮೂಲ ಸೌಕರ್ಯ ವಂಚಿತರಾಗಿ ಬದುಕು ಸಾಗಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಶ್ರೀಮಂತ ರಾಜಕಾರಣಿಗಳನ್ನ ಬೆಳೆಸುತ್ತಿದ್ದಾರೆ. ಆ ರಾಜಕಾರಣಿಗಳು ಬಂಡವಾಳ ಶಾಹಿಗಳೊಂದಿಗೆ ಕೈಜೋಡಿಸಿ ಲಾಭ ನೋಡುತ್ತಾರೆ. ಇಂಥವರಿಗೆ ಸಾಮಾನ್ಯ ಜನರ ಸಂಕಷ್ಟಗಳು ಅರ್ಥವಾಗಲ್ಲ. ಹಾಗಾಗಿ ಇಂದಿಗೂ ಹಲವು ಮೂಲಸೌಕರ್ಯಗಳಿಂದ ವಂಚಿತರಾಗಿ ಬದುಕು ಸಾಗಿಸುತ್ತಿರುವ ಅದೆಷ್ಟು ಬಡ ಕುಟುಂಬಗಳು ಇಂದಿಗೂ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದರು. ದುಡಿಯುವ ವರ್ಗ ಮತದಾನಕ್ಕೆ ಮಾತ್ರ ಸೀಮಿತವಾಗಿದ್ದಾರೆ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರಗಳು ಕಡೆಗಣಿಸುತ್ತಿರುವ ಪರಿಣಾಮ ಬಡ ಸಾಮಾನ್ಯ ಜನರು ಸಂಕಷ್ಟದಲ್ಲಿ ದಿನ ಕಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗಳು ಈಡೇರಬೇಕಾದರೆ ದುಡಿಯುವ ವರ್ಗದ ಜನ ಅಧಿಕಾರಕ್ಕೆ ಬರಬೇಕಾಗಿದೆ ಎಂದರು. ಸಿ.ಪಿ.ಐ.ಎಂ ಶಾಖಾ ಕಾರ್ಯದರ್ಶಿ ಪಿ.ಆರ್.ಭರತ್ ಮಾತನಾಡಿ ಸಿ.ಪಿ.ಐ.(ಎಂ) ಪಕ್ಷದ ಸಮ್ಮೇಳನವು ಪ್ರತಿ 3 ವರ್ಷಕ್ಕೊಮ್ಮೆ ನಡೆಸುವುದರ ಮುಖಾಂತರ ಕಳೆದ 3 ವರ್ಷಗಳು ಪಕ್ಷ ನಡೆಸಿದ ಚಳುವಳಿಗಳು, ಕಾರ್ಯಕ್ರಮಗಳು ಮತ್ತು ಪಕ್ಷ ಸಮ್ಮೇಳನದಲ್ಲಿ ಅತೀ ಗಂಭೀರವಾಗಿ ಚರ್ಚಿಸುವ ಮತ್ತು ದೇಶದ ರೈತಾಪಿ ವರ್ಗದ, ಕಾರ್ಮಿಕ ವರ್ಗದ, ಜನಸಾಮಾನ್ಯರ ಸಮಸ್ಯೆಗಳಿಗೆ ನಮ್ಮ ಚಳುವಳಿಯಿಂದ ಎಷ್ಟರಮಟ್ಟಿಗೆ ಪರಿಹಾರ ಕಾಣಲು ಸಾಧ್ಯವಾಗಿದೆಯೇ ಆಗದಿರುವುದಕ್ಕೆ ಕಾರಣಗಳು ಮತ್ತು ಪ್ರಜಾಸತ್ತಾತ್ಮಕವಾಗಿ ಹೊಸ ಸಮಿತಿಗಳನ್ನು ಆಯ್ಕೆ ಮಾಡುವುದು ಸಮ್ಮೇಳನದ ಉದ್ದೇಶವಾಗಿರುತ್ತದೆ ಎಂದು ತಿಳಿಸಿದರು. ಸಾಮಾನ್ಯ ಜನರು, ರೈತರು ಬೆಲೆ ಏರಿಕೆಯಿಂದ ಬದುಕಲಾರದಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ ಸರ್ವಾಧಿಕಾರಿ, ಏಕಾಧಿಪತ್ಯಕ್ಕೆ ಆಡಳಿತ ತಲುಪಿದೆ. ನಮ್ಮ ಸಂವಿಧಾನದ ಎಲ್ಲಾ ಆಶಯಗಳನ್ನು ದಮನಮಾಡುತ್ತಿದ್ದಾರೆ. ಮತ್ತೇ ರಾಜಪ್ರಭುತ್ವಕ್ಕೆ ಮುಂದಾಗುತ್ತಿದ್ದಾರೆ. ಜಾತ್ಯಾತೀತ ಭಾರತವನ್ನು ಒಂದು ಧರ್ಮದ ರಾಷ್ಟ್ರವನ್ನಾಗಿ ಮಾಡಿ ಏಕ ಚುನಾವಣೆ, ಏಕ ಭಾಷೆ, ಏಕ ಆಹಾರ ಪದ್ಧತಿ ಎಂಬ ನೀತಿಯನ್ನು ಜನರ ಮೇಲೆ ಬಲಾತ್ಕಾರವಾಗಿ ಪ್ರಯೋಗಿಸಲು ಮುಂದಾಗಿದೆ. ಬಹುಭಾಷೆ, ಬಹುಸಂಸ್ಕೃತಿಯುಳ್ಳ ಹಲವಾರು ಜಾತಿ, ಧರ್ಮ, ಭಾಷೆ, ಒಟ್ಟಾಗಿ ಬಾಳುವ ಭಾರತವನ್ನು ಹಾಳು ಮಾಡುವ ಪ್ರಯತ್ನದಲ್ಲಿದ್ದಾರೆ. ಈ ಸರಕಾರದ ಅವಧಿಯಲ್ಲಿ ಸಾಮಾನ್ಯ ಜನರು, ಕಾರ್ಮಿಕರು, ರೈತರು ಬದುಕು ನಡೆಸಲು ಕಷ್ಟಕರವಾಗಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ನಿರುದ್ಯೋಗ ತಾಂಡವವಾಡುತ್ತಿದ್ದರೂ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಹೇಳಿದರು. ಗುತ್ತಿಗೆ ಮತ್ತು ಹೊರಗುತ್ತಿಗೆ ಕಾಂಟ್ರಾಕ್ಟ್ ಪದ್ಧತಿಗಳಿಗೆ ಹೆಚ್ಚು ಬೇಡಿಕಗಳು ನೀಡುವ ಕೆಲಸಗಳು ನಡೆಯುತ್ತಿದೆ. ರಾಜ್ಯ, ಕೇಂದ್ರ ಸರಕಾರದ ಜನವಿರೋಧಿ, ಕಾರ್ಮಿಕ ವಿರೋದಿ, ರೈತ ವಿರೋಧಿ ನೀತಿಯ ವಿರುದ್ಧ ಮುಂದೆ ಪಕ್ಷ ಬಲಿಷ್ಠವಾದ ಹೋರಾಟಗಳನ್ನು ನಡೆಸಬೇಕಾಗಿದೆ. ನೆಲ್ಯಹುದಿಕೇರಿ ಗ್ರಾಮ, ಪಂಚಾಯತಿ ವ್ಯಾಪ್ತಿಯಲ್ಲಿ 2018-19 ರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಶಾಶ್ವತ ಪರಿಹಾರಕ್ಕಾಗಿ, ಆನೆ ಮತ್ತು ಕಾಡು ಪ್ರಾಣಿಗಳ ದಾಳಿಯಿಂದ ರೈತರ ಕೃಷಿ ರಕ್ಷಿಸಲು ಮಾನವ ಜೀವ ಉಳಿಸಲಿಕ್ಕಾಗಿ, ಹಕ್ಕುಪತ್ರಕ್ಕಾಗಿ, ಸಾರ್ವಜನಿಕ ಶೌಚಾಲಯಕ್ಕಾಗಿ, ಪಡಿತರ ಚೀಟಿಗಾಗಿ, ಅವ್ಯವಸ್ಥೆಯ ರೇಷನ್ ವ್ಯವಸ್ಥೆಯ ವಿರುದ್ಧ, ನೆಲ್ಯುಹುದಿಕೇರಿ ಗ್ರಾಮದ ವ್ಯಾಪ್ತಿಯಲ್ಲಿ ಹಿಂದೂ ಸ್ಮಾಶನಕ್ಕೆ ಭೂಮಿಗಾಗಿ ಹಿಂದು ಸ್ಮಾಶನದ ಭೂಮಿಯನ್ನು ಒತ್ತುವರಿದಾರರಿಂದ ಬಿಡಿಸಿ ಹಿಂದೂ ಸ್ಮಾಶನಕ್ಕೆ ಭೂಮಿಗಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ ಮತ್ತು ಗ್ರಾಮದ ರಸ್ತೆ, ಚರಂಡಿ, ಪ್ರತ್ಯೇಕ ಕುಶಾಲನಗರ ತಾಲ್ಲೂಕಿಗಾಗಿ ಅಲ್ಪಸಂಖ್ಯಾತರ, ದಲಿತರ, ಆದಿವಾಸಿಗಳ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಅನ್ಯಾಯದ ವಿರುದ್ಧ ಪಕ್ಷ ಹೋರಟ ನಡೆಸಿಕೊಂಡೆ ಬಂದಿದೆ ಇನ್ನೂ ಹಲವಾರು ಜ್ವಲಂತ ವಿಷಯಗಳಿಗೆ ಪಕ್ಷ ನಿರಂತರವಾಗಿ ಹೋರಾಟ ನಡೆಸಿ ನಾಡಿನ ಜನರ ಪರವಾಗಿ ಪಕ್ಷ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭ ಸಿಪಿಐಎಂ ಪಕ್ಷದ ಜಿಲ್ಲಾ ಸಂಘಟನ ಕಾರ್ಯದರ್ಶಿ ರಮೇಶ್ , ಪ್ರಮುಖರಾದ ಕುಟ್ಟಪ್ಪ, ಮೊಣ್ಣಪ್ಪ, ಉದಯ, ಜೋಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.