ಮಡಿಕೇರಿ ಅ.15 NEWS DESK : ಕೊಡಗಿನ ಕ್ರೀಡಾ ಲೋಕದ ಎಲ್ಲಾ ಕ್ರೀಡೆಯಲ್ಲೂ ಕೊಡಗಿನ ಆಟಗಾರರು ಮೆಲುಗೈ ಸಾಧಿಸಿದ್ದಾರೆ. ಕರಾಟೆ, ಸ್ಕ್ವಾಷ್ , ಸೈಲಿಂಗ್, ಅಥ್ಲೆಟಿಕ್ಸ್, ಫುಟ್ಬಾಲ್, ಟೆನ್ನಿಸ್ ಹಾಗೂ ಕುದುರೆ ಸವಾರಿಯಲ್ಲೂ ಕೂಡ ಹೆಸರುವಾಸಿಯೇ ಸರಿ. ಜಾಕಿ ಎಂದರೆ ಸಮ ಮೈಕಟ್ಟು, ತೂಕ ಹಾಗೂ ಅಳತೆ ತೂಗುವಂತೆ ಕುದುರೆಯ ಮೇಲೆ ಕುಳಿತು ತನ್ನ ಹತೋಟಿಯಲ್ಲಿ ನಿಯಂತ್ರಿಸುವುದು, ಒಂದು ಕಲಾತ್ಮಕ ಆಟ ಹಾಗೂ ಒಂದು ರೋಚಕ ವಿದ್ಯೆ. ಕೊಡಗಿನ ಹೆಸರಾಂತ ಜಾಕಿ ಮನೆಯಪಂಡ ರಾಜು ನಿರಂತರವಾಗಿ 4 ದಶಕಗಳ ಕಾಲ ತನ್ನ ನೈಪುಣ್ಯವನ್ನು ಪಳಗಿಸಿ, ಆಮೇಲೆ ತರಬೇತುದಾರರಾಗಿ ಕೊಡಗಿಗೆ ಹೆಸರು ತಂದು ಜಾಕಿ ರಾಜು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಂತರ ಹೊಟ್ಟೇಂಗಡ ಪೂಣಚ್ಚ ಕೂಡ ಜಾಕಿಯಲ್ಲಿ ಹೆಸರು ಗಳಿಸಿದರು. ಇನ್ನೊಬ್ಬ ಯುವ ಪ್ರತಿಭೆ ಪಟ್ಟಡ ಮೋಹನ್ ಬೋಪಣ್ಣ, ಜನರಲ್ ಬಸ್ ಮಾಲೀಕ ಮೋಹನ್ ಅವರ ಮಗ ಜಪಾನಿನಲ್ಲಿ ಜಾಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅವರ ಪ್ರಕಾರ ದೇಹದ ತೂಕ 55ಕೆಜಿ ಮೀರದಂತೆ ನೋಡಿಕೊಳ್ಳಬೇಕು. ಕೊಡಗಿನ ಬೇರೆ ಜಾಕಿಗಳು ಹಾಗೂ ತರಬೇತುದಾರರು ಮುರುವಂಡ ಮಿಲನ್, ಕೇಕಡ ಮಂದಣ್ಣ, ಚೇರಂಡ ಪುನೀತ್, ನಡಿಕೇರಿಯಂಡ ಗಣೇಶ್, ಚೆಂದ್ರಿಮಾಡ ಕುಟ್ಟಪ್ಪ, ಚೆಂದ್ರಿಮಾಡ ಮೊಣ್ಣಪ್ಪ, ಮಂಗೇರೀರ ವಿಕ್ರಮ್, ಕೊಂಗಂಡ ಪ್ರದೀಪ್ ಹಾಗೂ ಅದೇಂಗಡ ನಳ ಇವರುಗಳು ಇದುವರೆಗೆ ಹೆಸರು ಮಾಡಿದವರು. ಇವರ ಪ್ರಕಾರ ಜಾಕಿಯ ದೇಹದ ತೂಕ 40ಕೆಜಿ ಇದ್ದರೆ ಕುದುರೆಯ ಮೇಲೆ ಸವಾರಿ ಮಾಡಲು ಸೂಕ್ತ. ಪೊನ್ನಂಪೇಟೆ ತಾಲ್ಲೂಕು ಚಿಕ್ಕಮುಂಡೂರು ಗ್ರಾಮದ ಚಿಮ್ಮಣಮಾಡ ಪೆಮ್ಮಯ್ಯ(ಬೊಗ್ಗ) ಹಾಗೂ ರೋಹಿಣಿ(ತಾಮನೆ ಬಲ್ಯಮೀದೇರಿರ) ದಂಪತಿಯ ಹಿರಿಯ ಪುತ್ರ ಚಿಮ್ಮಣಮಾಡ ಬೋಪಣ್ಣ, ಬಾಲ್ಯದಲ್ಲಿ ಅಪ್ಪಚ್ಚುಕವಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಹೈದರಾಬಾದಿನಲ್ಲಿ 6 ವರ್ಷ ಜಾಕಿಯಾಗಿ, ಅನೇಕ ಬಾರಿ ವಿಜಯ ಸಾಧಿಸಿದರು. 6 ವರ್ಷ ಎಂ.ಎ.ಎಂ ರಾಮಸ್ವಾಮಿಯವರ ಜೊತೆ ಷರತ್ತಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 2017ರಲ್ಲಿ”magical skill” ಎಂಬ ಕುದುರೆಯನ್ನು ಮೊದಲು ತರುವುದರಲ್ಲಿ ಯಶಸ್ವಿಯಾದರು. ಮುರುವಂಡ ಅಚ್ಚಯ್ಯ ಅವರು 1960 ರ ದಶಕದಲ್ಲಿ ಮದ್ರಾಸ್‌ನಲ್ಲಿ ಗಿಂಡಿ ರೇಸ್ ಕೋರ್ಸ್‌ನ ಕಾರ್ಯದರ್ಶಿಯಾದ ಮೊದಲ ಕೊಡವರಾಗಿದ್ದರು, ಅವರು ಅನೇಕ ಕೊಡವ ಜಾಕಿಗಳು ಮತ್ತು ತರಬೇತುದಾರರನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಎಂ.ಎ.ಎಂ ರಾಮಸ್ವಾಮಿ :: ರಾಮಸ್ವಾಮಿಯವರು 1975ರ ವಿಶ್ವಕಪ್ ಹಾಕಿಯ ವಿಜೇತರಾದಾಗ ಐ.ಹೆಚ್.ಎಫ್ ಅಧ್ಯಕ್ಷರಾಗಿದ್ದರು. ಇವರಿಗೆ ಹಾಕಿಯಲ್ಲಿ ಬಹಳಷ್ಟು ಒಲವಿತ್ತು. ಕೊಡಗಿನ ಹಾಕಿ ಆಟಗಾರರು ಬಹಳಷ್ಟು ಪ್ರಿಯರಾಗಿದ್ದರು. ಆದ್ದರಿಂದಲೇ ಬೋಪಣ್ಣ ಅವರನ್ನು ತಮ್ಮ ಗರಡಿಯಲ್ಲಿ 6 ವರ್ಷಗಳ ಕಾಲ ಪಳಗಿಸಿದರು.
ಬೋಪಣ್ಣ ಅವರ ವಿಶೇಷತೆ :: ಹೈದ್ರಾಬಾದ್ ನಲ್ಲಿ ನಡೆದ ವಿಂಟರ್ ರೇಸ್ 2016-17 ರ ಮೆಹಬೂಬಾಬಾದ್ ಪ್ಲೇಟ್ I-ಡಿವಿಜನ್ 1100 ಮೀಟರ್, III-ವರ್ಗದಲ್ಲಿ, 1ನಿಮಿಷ 06:76 ಸೆಕೆಂಡ್ ನಲ್ಲಿ 13/4ಐ, 1/4L HDಯಲ್ಲಿ ವಿಜೇತರಾದರು.
ಕೊಡಗು ಎಜುಕೇಶನಲ್ ಅಂಡ್ ಸೋಶಿಯಲ್ ಸರ್ವಿಸ್ ಟ್ರಸ್ಟ್ :: K.E.S.S.T ಗೆ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರು ಬೋಪಣ್ಣ ಅವರನ್ನು ಕಳುಹಿಸಿಕೊಡುತ್ತಾರೆ. ಮಾರ್ಚಂಡ ಗಣೇಶ್ ಅವರು ಬೋಪಣ್ಣ ಅವರನ್ನು ಹೈದರಾಬಾದ್ ನಲ್ಲಿದ್ದ ಜಾಕಿ ಸ್ಕೂಲ್ ಗೆ ಕೇಕಡ ಮಂದಣ್ಣ ಅವರ ಮಾರ್ಗದರ್ಶನದಲ್ಲಿ ಸೇರಿಸುತ್ತಾರೆ. ಇವರ ಜಾಕಿ ತರಬೇತಿದಾರರಾದ ಸತೀಶ್ ಇವರನ್ನು ದಕ್ಷಿಣ ಕೊರಿಯಾಗೆ ಹೋಗಲು ಅವಕಾಶ ಮಾಡಿಕೊಟ್ಟರು. ಪ್ರಸ್ತುತ ಐರ್ಲೆಂಡ್ ನಲ್ಲಿ ಜಾಕಿ ತರಬೇತಿದಾರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೈದರಾಬಾದ್ ಗೆ ಹಿಂದಿರುಗಿ ಜಾಕಿ ವೃತ್ತಿಯಲ್ಲಿ ಮುಂದುವರಿಯಲಿದ್ದಾರೆ. ಕೇವಲ 29 ವರ್ಷದ ತರುಣ ಇಂದು ಭಾರತದ ಬಹು ಬೇಡಿಕೆಯ ಜಾಕಿ ಆಗಿದ್ದಾರೆ. ಅವರ ಇಬ್ಬರು ತಮ್ಮಂದಿರಾದ ಬಬಿನ್ ಹಾಗು ಜೀವನ್ ಅವರು ತಮ್ಮ ಅಣ್ಣನ ಯಶಸ್ಸನ್ನು ಸದಾ ನೆನೆಯುತ್ತಾರೆ. ಸಂಸಾರದಲ್ಲಿ ಹಿರಿಯ ಮಗನಾದ ಬೋಪಣ್ಣ ಅವರು ಇವರಿಗೆ ಎಲ್ಲಾ ರೀತಿಯ ವಸತಿ ಸೌಲಭ್ಯಗಳನ್ನು ಮಾಡಿಕೊಟ್ಟಿರುತ್ತಾರೆ. ಇವರು ಹೀಗೆ ಕೊಡಗಿನ ಕೀರ್ತಿಯನ್ನು ಹೆಚ್ಚಿಸಲಿ.
ಯುವಕರಿಗೆ ಪ್ರೇರಣೆಯಾಗಲಿ :: ಕೊಡಗಿನಲ್ಲಿ ಹಲವು ಸಂಘಟನೆಗಳಿವೆ, ಕೊಡವ ಸಮಾಜ, ಫೆಡರೇಶನ್ ಆಫ್ ಕೊಡವ ಸಮಾಜ, ಅಖಿಲ ಕೊಡವ ಸಮಾಜವಿದೆ. ಇಂತಹ ಪ್ರತಿಭೆಗಳು ತೆರೆಯ ಮರೆಯಲ್ಲಿ ಇದ್ದರೂ ಅವರನ್ನು ಗುರುತಿಸಬೇಕು. ಗುರುತಿಸಿ ಮುಖ್ಯವಾಹಿನಿಗೆ ತರಬೇಕು. ಅವರ ಅನುಭವಗಳನ್ನು ಇಂದಿನ ಕೊಡಗಿನ ಮಕ್ಕಳಿಗೆ ತಿಳಿಯಪಡಿಸಬೇಕು. ಆದರೆ ಮಾತ್ರ ಕೊಡಗಿನ ಕ್ರೀಡಾ ಭವಿಷ್ಯ ಉಜ್ವಲವಾಗಲು ಸಾಧ್ಯ.
ಪ್ರಶಸ್ತಿ ಹಾಗೂ ಪುರಸ್ಕಾರಗಳು :: ಇತ್ತೀಚಿನ ದಿನಗಳಲ್ಲಿ ನಾಡಹಬ್ಬ ದಸರಾ ಹಾಗೂ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ವೇದಿಕೆ ಕಾರ್ಯಕ್ರಮಗಳು ಕೂಡ ನಡೆಯುತ್ತಿವೆ. ಎಂದಾದರೂ ಜಿಲ್ಲಾಡಳಿತ ಹಾಗೂ ಸರ್ಕಾರದ ಪ್ರತಿನಿಧಿಗಳು ಕ್ರೀಡೆಯಲ್ಲಿ ಪದ್ಮಶ್ರೀ ಪುರಸ್ಕೃತರು, ವಿಶ್ವಕಪ್ ವಿಜೇತರು, ಒಲಂಪಿಕ್ಸ್ ನಲ್ಲಿ ಪದಕ ಗೆದ್ದವರು, ಅಂತರಾಷ್ಟ್ರೀಯ ಕ್ರೀಡಾಪಟುಗಳು ಹಾಗು ಇತರ ಕ್ರೀಡೆಗಳಿಗೆ ದುಡಿದ ಮಹನೀಯರನ್ನು ಸನ್ಮಾನಿಸಿ ಪರಿಚಯಿಸಿದ ಚರಿತ್ರೆಯಿದೆಯೇ? ಆಯಾ ಕ್ರೀಡಾ ಸಂಸ್ಥೆಗಳಾದರೂ ಈ ಕಾರ್ಯಕ್ಕೆ ಮುಂದಾಗಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿ ಇಂತಹ ಮಹನೀಯರನ್ನು ಗುರುತಿಸಬೇಕು. ಕೊಡಗಿನ ಹವಾಗುಣ ಹಾಗೂ ಪ್ರಕೃತಿ ಕ್ರೀಡೆಗೆ ಪೂರಕವಾಗಿದೆ. ಆದ್ದರಿಂದ ಬೋಪಣ್ಣ ಅವರಂತೆ ಕೊಡಗಿನ ಎಲ್ಲ ಯುವಕರು ಅವರಿಗೆ ಇಷ್ಟವಾದ ಕ್ರೀಡೆಯಲ್ಲಿ ಮುಂದುವರಿಯಲಿ. ಇವರಿಗೆ ಕೊಡಗಿನ ದೇವತೆಗಳಾದ ಇಗ್ಗುತಪ್ಪ,ಕಾವೇರಮ್ಮ ಅವರ ಆಶೀರ್ವಾದದಿಂದ ಇನ್ನಷ್ಟು ಯಶಸ್ವಿ ಕಾಣಲಿ, ಎಂದು ಕೊಡಗಿನ ಜನರ ಆಶಯ.
ಕ್ರೀಡಾ ವಿಶ್ಲೇಷಣೆ :: ಚೆಪ್ಪುಡೀರ ಕಾರ್ಯಪ್ಪ