ಮಡಿಕೇರಿ ಅ.15 NEWS DESK : ಇತಿಹಾಸ ಪ್ರಸಿದ್ಧ “ಕುಂದಾತ್ ಬೊಟ್ಟ್ ಬೋಡ್ ನಮ್ಮೆ”ಗೆ ಕುಂದಾ ಮುಗುಟಗೇರಿ ಸಮೀಪದ ಶ್ರೀ ಈಶ್ವರ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಸಾಂಪ್ರದಾಯಿಕ ದೋಳ್ ತೆಗೆಯುವ ಮೂಲಕ ಚಾಲನೆ ದೊರೆಯಿತು. ಪ್ರತಿವರ್ಷ ತಲಕಾವೇರಿಯಲ್ಲಿ ತೀರ್ಥೋದ್ಭವದ ದಿನ ಹಾಗೂ ಮರುದಿನ ಹಬ್ಬ ನಡೆಯಲಿದ್ದು, ಈ ವರ್ಷ ಅ.17 ಹಾಗೂ 18 ರಂದು ಹಬ್ಬ ನಡೆಯಲಿದೆ ಎಂದು ಭಂಡಾರ ತಕ್ಕರಾರ ಸಣ್ಣುವಂಡ ಅಪ್ಪಿ ಪೂಣಚ್ಚ ತಿಳಿಸಿದ್ದಾರೆ. ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬಸ್ಥರ ತಕ್ಕಾಮೆಯಲ್ಲಿ ಹಬ್ಬ ನಡೆಯಲಿದ್ದು, ಅ.17 ರಂದು ರಾತ್ರಿ ಮನೆ, ಅ.18 ರಂದು ಕುಂದಾ ಬೆಟ್ಟದ ಮೇಲೆ ಹಬ್ಬ ನಡೆಯಲಿದೆ. ಅಂದು ಮಧ್ಯಾಹ್ನ 12.30 ಗಂಟೆಗೆ ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬದ ಬಲ್ಯ ಮನೆಯಿಂದ ಕೃತಕವಾಗಿ ತಯಾರಿಸಿ ಶೃಂಗರಿಸಲಾದ ತಲಾ ಒಂದೊಂದು ಕುದುರೆಯನ್ನು ಹೊತ್ತವರು ಬೆಟ್ಟದ ತಪ್ಪಲಿನಲ್ಲಿರುವ ನಾಡ್ ದೇವಸ್ಥಾನದ ಸಮೀಪದ ಅಂಬಲದಲ್ಲಿ ವಿವಿಧ ವಿಧಿ ವಿಧಾನಗಳನ್ನು ಆಚರಿಸಿ ನಂತರ ಕಡಿದಾದ ಬೆಟ್ಟವನ್ನು ಏರುವ ಮೂಲಕ ಕುಂದಾ ಬೆಟ್ಟದ ಮೇಲಿನ ಹಬ್ಬಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಕಡಿದಾದ ಕುಂದಾ ಬೆಟ್ಟವನ್ನು ಏರಿದ ಮೇಲೆ ಅಲ್ಲಿ ಪಾಂಡವರು ನಿರ್ಮಿಸಿದರು ಎನ್ನಲಾಗುವ ಬೊಟ್ಲಪ್ಪ ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದೆ ಎಂದು ಭಂಡಾರ ತಕ್ಕರಾದ ಸಣ್ಣುವಂಡ ಅಪ್ಪಿ ಪೂಣಚ್ಚ ತಿಳಿಸಿದ್ದಾರೆ.