ಮಡಿಕೇರಿ ಅ.15 NEWS DESK : ಬೆಂಗಳೂರಿನಲ್ಲಿ ನಡೆದ ಫೆಡರೇಷನ್ ಆಫ್ ಮಿಶ್ರ ಮಾರ್ಷಲ್ ಆರ್ಟ್ಸ್ ಇಂಡಿಯಾ (FAMMAI) ರಾಷ್ಟ್ರೀಯ ಮಿಶ್ರ ಮಾರ್ಷಲ್ ಆರ್ಟ್ಸ್ ಚಾಂಪಿಯನ್‌ಶಿಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕ ಗೆದ್ದ ಕೊಡಗಿನ ಆಜ್ಞ ಗ್ಲೋಬಲ್ ಅಸೋಸಿಯೇಶನ್ ಫಾರ್ ಮಿಶ್ರ ಮಾರ್ಷಲ್ ಆರ್ಟ್ಸ್ (GAMMA) ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾಳೆ. ಡಿ.8 ರಿಂದ ಇಂಡೋನೇಷ್ಯಾ ದಲ್ಲಿ ನಡೆಯಲಿರುವ ಗ್ಲೋಬಲ್ ಅಸೋಸಿಯೇಶನ್ ಫಾರ್ ಮಿಶ್ರ ಮಾರ್ಷಲ್ ಆರ್ಟ್ಸ್ (GAMMA) ವಿಶ್ವ ಚಾಂಪಿಯನ್‌ಶಿಪ್‌ಗೆ ಅತಿ ಕಿರಿಯ ವಯಸ್ಸಿನ ಬಾಲಕಿಯಾಗಿ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿರುವ ಆಜ್ಞ ಕೊಡಗು ಜಿಲ್ಲೆಯ ಕೂಡುಮಂಗಳೂರಿನ ಅಮಿತ್ ಹಾಗೂ ದಿವ್ಯ ದಂಪತಿಯ ಪುತ್ರಿ. ಕುಶಾಲನಗರದ ಮಾರ್ಕೆಟ್ ರಸ್ತೆ ಯಲ್ಲಿರುವ ಕೂರ್ಗ್ ಕೊಂಬ್ಯಾಟ್ ಕ್ಲಬ್ (C3MMA)ನಲ್ಲಿ ತರಬೇತಿ ಪಡೆಯುತ್ತಿರುವ ಆಜ್ಞ ಮಿಶ್ರ ಮಾರ್ಷಲ್ ಆರ್ಟ್ಸ್ ನಲ್ಲಿ ವಿಶ್ವ ದಾಖಲೆ ಮಾಡುವ ಹೆಬ್ಬಯಕೆ ಹೊಂದಿದ್ದಾಳೆ. 9 ವರ್ಷದ ಆಜ್ಞ ಈಗಾಗಲೇ ಹಲವಾರು ಪದಕಗಳನ್ನು ತನ್ನದಾಗಿಸಿಕೊಂದಿದ್ದು, 2021 ರಲ್ಲಿ ರಾಜ್ಯ ಮಟ್ಟದ ಬಾಕ್ಸಿಂಗ್ ನಲ್ಲಿ ಬೆಳ್ಳಿಯ ಪದಕ, 2022ರಲ್ಲಿ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ, 2023ರಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಹಾಗೂ 2024ರಲ್ಲಿ ಮೈಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕುಸ್ತಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾಳೆ.