ನಾಪೋಕ್ಲು ಅ.15 NEWS DESK : ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ ಸೋಂದೆಯಲ್ಲಿ ನಡೆಯುವ ಏಳನೇ ರಾಜ್ಯಮಟ್ಟದ ಇತಿಹಾಸೋತ್ಸವಕ್ಕೆ, ಕೊಡಗಿನ ಪ್ರತಿನಿಧಿಯಾಗಿ ಚಾಮೆರ ದಿನೇಶ್ ಬೆಳ್ಯಪ್ಪ ಭಾಗವಹಿಸಿ, ರಾಜಡಳಿತಕ್ಕೆ ಹಿಂದಿನ ಕೊಡಗಿನ ಇತಿಹಾಸ ಎಂಬ ವಿಚಾರ ಮಂಡನೆ ಮಾಡಲಿದ್ದಾರೆ. ಜಾಗೃತ ವೇದಿಕೆ ಸೋಂದಾ, ಮಿಥಿಕ್ ಸೊಸೈಟಿ ಬೆಂಗಳೂರು, ಪುರಾತತ್ವ ವಸ್ತು ಸಂಗ್ರಹಾಲಯಗಳ ಪರಂಪರೆ ಇಲಾಖೆ, ಮೈಸೂರು, ಸೋದೆ ಸದಾಶಿವರಾಯ ಪ್ರಶಸ್ತಿ ಪ್ರಧಾನ ಸಮಿತಿ, ರಂಗಚರಿತ ಸೋಂದಾ, ಸಂಯುಕ್ತಾಶ್ರಯದಲ್ಲಿ ಅ.19 ಮತ್ತು 20ರಂದು ಸೋಂದೆಯ ಜೈನಮಠದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾದರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ, ಖ್ಯಾತ ಇತಿಹಾಸ ತಜ್ಞರಾದ, ಡಾ. ವಸುಂದರಾ ಫಿಲಿಯೋಜ ಮೈಸೂರು ಅವರ ಸರ್ವಾಧ್ಯಕ್ಷತೆಯಲ್ಲಿ, ಕರ್ನಾಟಕದ ಖ್ಯಾತ ಇತಿಹಾಸಕಾರ ಮತ್ತು ಸೋಂದಾ ಇತಿಹಾಸೋತ್ಸವ ಸಮಿತಿ ಸಂಚಾಲಕ ಲಕ್ಷ್ಮೀಶ್ ಹೆಗಡೆ ಸೋಂದಾ ಅವರ ನೇತೃತ್ವದಲ್ಲಿ ಈ ಐತಿಹಾಸಿಕ ಉತ್ಸವವು ನಡೆಯಲಿದೆ. ಕರ್ನಾಟಕದ ನಾನಾ ಭಾಗಗಳಿಂದ ಸುಮಾರು 40ಕ್ಕೂ ಅಧಿಕ ಇತಿಹಾಸ ತಜ್ಞರು, ವಿಧ್ವಾಂಸರು, ಸಂಶೋಧಕರು ಭಾಗವಹಿಸಲಿದ್ದು, ಕೊಡಗನ್ನು ಚಾಮೆರ ದಿನೇಶ್ ಬೆಳ್ಯಪ್ಪ ಪ್ರತಿನಿಧಿಸಲಿದ್ದಾರೆ. ಇದು ಇವರ ಎರಡನೇ ಇತಿಹಾಸ ಸಮ್ಮೇಳನವಾಗಿದ್ದು, ಈ ಹಿಂದೆ 2019ರಲ್ಲಿ ನಡೆದ ರಾಷ್ಟ್ರೀಯ ಇತಿಹಾಸ ಸಮ್ಮೇಳನದಲ್ಲಿ ಭಾಗವಹಿಸಿ ವಿಚಾರ ಮಂಡಿಸಿದ್ದರು.
ವರದಿ : ದುಗ್ಗಳ ಸದಾನಂದ.